ಬೆಂಗಳೂರು: ಭಿಕ್ಷಾಟನೆ ನಿಯಂತ್ರಣಕ್ಕೆ ಕಾರ್ಯ ಯೋಜನೆ ಸಿದ್ಧವಾಗುತ್ತಿದ್ದು, ಮಕ್ಕಳಿಂದ ಬೀದಿ ಭಿಕ್ಷಾಟನೆಯನ್ನು ತಡೆಯುವ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ರಕ್ಷಿಸುವ ಹಾಗೂ ಭಿಕ್ಷಾಟಣೆ ನಿರ್ಮೂಲನೆ ಮಾಡುವ ಕುರಿತು ವಿಕಾಸಸೌಧದಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವ ಹಾಲಪ್ಪ ಆಚಾರ್ ಹಾಗೂ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಸಭೆ ನಡೆಸಿದರು.
ಸಭೆಯಲ್ಲಿ ರಾಜ್ಯಾದ್ಯಂತ ಭಿಕ್ಷಾಟನೆ ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಈ ಸಂಬಂಧ ಕಾರ್ಯಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ. 31 ಜಿಲ್ಲೆಗಳಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚನೆ ಮಾಡಲಾಗುತ್ತದೆ. ಬಾಲಸ್ವರಾಜ್ ಆ್ಯಪ್ ಬಿಡುಗಡೆ ಮಾಡಿದ್ದೇವೆ. ಆ ಮೂಲಕ ಬಾಲ ಭಿಕ್ಷುಕರ ರಕ್ಷಣೆ ಕಾರ್ಯ ನಡೆಯಲಿದೆ. ಭಿಕ್ಷಾಟನೆ ನಿಯಂತ್ರಣಕ್ಕೆ ಇಡೀ ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಭಿಕ್ಷಾಟನೆ ಹಿಂದೆ ಮಾಫಿಯಾ ಇದೆ: ಮೊದಲ ಹಂತದಲ್ಲಿ ತಾಯಿ ಮತ್ತು ಮಗುವನ್ನು ರಕ್ಷಣೆ ಮಾಡಲಾಗುತ್ತದೆ. ಭಿಕ್ಷಾಟನೆ ಮಾಫಿಯಾಗಳಿಗೆ ನಿಯಂತ್ರಣ ತರಲು ಕ್ರಮ ಕೈಗೊಳ್ಳಲಾಗುತ್ತದೆ. ಬೆಂಗಳೂರು ನಗರದಲ್ಲಿ 720 ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿರುವುದು ಪತ್ತೆಯಾಗಿದೆ. ಅದರಲ್ಲಿ ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ 101 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. 31 ಜಿಲ್ಲೆಗಳಲ್ಲೂ ಭಿಕ್ಷಾಟನೆ ವಿರೋಧಿ ಕ್ರಮ ತೆಗೆದುಕೊಳ್ಳಲಾಗುವುದು. ಭಿಕ್ಷಾಟನೆ ಹಿಂದೆ ಮಾಫಿಯಾ ಇದೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.
ಮಫ್ತಿಯಲ್ಲಿದ್ದು ಮಕ್ಕಳ ರಕ್ಷಣೆ: ಬೆಂಗಳೂರು ನಗರದಲ್ಲಿ ಎಂಟು ವಿಭಾಗಗಳಾಗಿ ಗುರುತಿಸಿದ್ದು, 8 ಎಸಿಪಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಿದ್ದೇವೆ. ಮಫ್ತಿಯಲ್ಲಿದ್ದು ಮಕ್ಕಳನ್ನು ರಕ್ಷಣೆ ಮಾಡಲಾಗುತ್ತದೆ. ಈಗಾಗಲೇ 50-70 ಕಡೆ ಭಿಕ್ಷಾಟನೆ ಮಾಡುವ ಸ್ಥಳಗಳನ್ನು ಗುರುತಿಸಲಾಗಿದೆ. ರಕ್ಷಿಸಿದ ತಾಯಿ ಮಕ್ಕಳನ್ನು ಬಾಲ ಗೃಹ, ಖಾಸಗಿ ಎನ್‌ಜಿಒಗಳಲ್ಲಿ, ವಸತಿ ಮಂದಿರಗಳಲ್ಲಿ ತಾಯಿ, ಮಕ್ಕಳಿಗೆ ಆಶ್ರಯ ನೀಡಲಾಗುತ್ತದೆ ಎಂದು ಸಚಿವರು ವಿವರಿಸಿದರು.
ಓದಿ: ಕೇಂದ್ರ ಸರ್ಕಾರ ಬಡ, ಮಧ್ಯಮ ವರ್ಗದವರ ರಕ್ತ ಹೀರುತ್ತಿದೆ: ಸಿದ್ದರಾಮಯ್ಯ