ಬೆಂಗಳೂರು:ಸಮಾಜ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳಲ್ಲಿ ಯಾವುದೇ ಅಧಿಕಾರಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ, ಕಾಂಗ್ರೆಸ್ ಸದಸ್ಯ ಬಿ.ಕೆ ಹರಿಪ್ರಸಾದ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಮಾಜ ಕಲ್ಯಾಣ ಇಲಾಖೆ ಪಾರದರ್ಶಕವಾಗಿ ಇರಬೇಕು, ಯಾವ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಆಯಕಟ್ಟಿನ ಸ್ಥಳದಲ್ಲಿ ಬಹಳ ಕಾಲ ಇದ್ದರೆ ಅಂತಹ ಅಧಿಕಾರಿಗಳ ಸ್ಥಾನ ಪಲ್ಲಟ ಮಾಡಲಾಗುತ್ತದೆ, ಇಲಾಖೆಯಲ್ಲಿ ಬದಲಾವಣೆ ತರಲಿದ್ದೇವೆ, ಸಮಾಜ ಕಲ್ಯಾಣ ಇಲಾಖೆ ಆ ಸಮಾಜದ ಕಲ್ಯಾಣಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದೆ, ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಆಡಳಿತಾತ್ಮಕ ಪಾರದರ್ಶಕತೆಗೆ ಅನಿವಾರ್ಯವಾಗಿ ಕಟ್ಟುನಿಟ್ಟಿನ ಕ್ರಮ ಅಗತ್ಯವಿದೆ. ಸಿಸಿ ರಸ್ತೆ ನೇರವಾಗಿ ಶಾಸಕರಿಗೆ ಕೊಡಲು ಸೂಚಿಸಲಾಗಿದೆ. ಪರಿಶಿಷ್ಟ ಜಾತಿಗೆ ಅನುಗುಣವಾಗಿ ರಸ್ತೆಗಳನ್ನು ಕೊಡಲಾಗುತ್ತದೆ, ಶಾಸಕರಿಗೆ ಪೂರ್ಣ ಅವಕಾಶ ಸಿಗಲಿ ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳನ್ನು ಸಂಪೂರ್ಣ ನಿಯಂತ್ರಣ ಮಾಡುವ ಭ್ರಮೆಯಲ್ಲಿ ಇಲ್ಲ, ಆದರೆ, ಕಡಿವಾಣ ಹಾಕಲಾಗುತ್ತದೆ ಎಂದರು.
ಹನಿ ನೀರಾವರಿಗೆ ಇನ್ ಪುಟ್ ಸಬ್ಸಿಡಿ ಮುಂದುವರಿಕೆ;
ಹನಿ ನೀರಾವರಿ ಯೋಜನೆಗೆ ಕೇಂದ್ರದ ಶೇ.50 ರಷ್ಟು ಸಬ್ಸಿಡಿ ಜೊತೆಗೆ ರಾಜ್ಯ ಸರ್ಕಾರ ನೀಡುವ ಶೇ.40 ರಷ್ಟು ಇನ್ಪುಟ್ ಸಬ್ಸಿಡಿಯನ್ನು ಮುಂದುವರೆಸಲಾಗುತ್ತದೆ ಎಂದು ಕೃಷಿ ಸಷಿವ ಬಿ.ಸಿ ಪಾಟೀಲ್ ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ತಿಪ್ಪೇಸ್ವಾಮಿ ಕೇಳಿದ ರೈತರ ಕೃಷಿ ಆದಾಯ ದ್ವಿಗುಣಗೊಳಿಸುವ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶೇ. 50 ಸಬ್ಸಿಡಿಯನ್ನು ಹನಿ ನೀರಾವರಿಗೆ ಕೇಂದ್ರ ನೀಡುತ್ತಿದ್ದು, 40 ಪರ್ಸೆಂಟ್ ಟಾಪ್ ಅಪ್ ಸಬ್ಸಿಡಿಯನ್ನು ರಾಜ್ಯ ಸರ್ಕಾರ ನೀಡಲಿದೆ, ರೈತ ಕೇವಲ ಶೇ.10 ರಷ್ಟು ಹಾಕಿದರೆ ಸಾಕು, ಸಣ್ಣ ರೈತರಿಗೆ ಇದರಿಂದ ಅನುಕೂಲವಾಗಲಿದೆ.
ಆರ್ಥಿಕ ಇಲಾಖೆ ಅಧಿಕಾರಿಗಳ ಆಕ್ಷೇಪವಿದ್ದರೂ ರೈತರ ಕಾರ್ಯಕ್ರಮಗಳಿಗೆ ಹಣ ಕೊಡಬೇಕು ಎಂದು ಹಿಂದಿನ ಸಿಎಂ ಯಡಿಯೂರಪ್ಪ ಸರ್ಕಾರ ಶೇ. 40 ರ ಟಾಪ್ ಅಪ್ ಸಬ್ಸಿಡಿ ಕೊಡಲು ಸೂಚಿಸಿದ್ದರು. ಪ್ರತಿ ವರ್ಷ 8.5 ಕೋಟಿ ಹಣ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದರು.
ಸಭಾಪತಿ ಗರಂ:
ಸಭಾಪತಿಗಳಿಗೆ ಮಾಹಿತಿ ಕೊಡಬೇಕಲ್ಲವೇ ಎಂದು ಸಾರಿಗೆ ಸಚಿವರ ಗೈರಿಗೆ ಸಭಾಪತಿ ಬಸವರಾಜ ಹೊರಟ್ಟಿ ಗರಂ ಆದರು. ಗೈರಾಗುವುದಿದ್ದರೆ ಮೊದಲೇ ಹೇಳಬೇಕು, ನೀವು ಸ್ವಲ್ಪ ಹೇಳಿ ಎಂದು ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ತಾಕೀತು ಮಾಡಿದರು.
ನಂತರ ಸದಸ್ಯ ಶ್ರೀಕಂಠೇಗೌಡ ಬಸ್ ನಿಲ್ದಾಣದಲ್ಲಿ ಮಹಿಳಾ ವಿಶ್ರಾಂತಿ ಗೃಹ ಮತ್ತು ಶೌಚಾಲಯ ಸಮಸ್ಯೆ ಕುರಿತು ಪ್ರಸ್ತಾಪಿಸಿದರು. ಸಾಕಷ್ಟು ಬಸ್ ನಿಲ್ದಾಣಕ್ಕೆ ಶೌಚಾಲಯ ಇಲ್ಲ, ಮಹಿಳೆಯರು ಬೀದಿಯಲ್ಲಿ ಶೌಚಕ್ಕೆ ಹೋಗಬೇಕಾ? ಎಂದರು.
ಇದಕ್ಕೆ ಧನಿಗೂಡಿಸಿದ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಆರ್ಥಿಕ ಸಂಪನ್ಮೂಲಗಳ ಲಭ್ಯಂತರ ಆಧಾರದಲ್ಲಿ ಶೌಚಾಲಯ ನಿರ್ಮಾಣ ಎಂದರೆ ಹೇಗೆ ಎಂದು ಸರ್ಕಾರದ ಲಿಖಿತ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ನಂತರ ಸಚಿವರಿಂದ ಪರಿಶೀಲಿಸುವ ಭರವಸೆ ನೀಡಲಾಯಿತು.
ಕೃಷಿ ವಿವಿ ಖಾಲಿ ಹುದ್ದೆ ಭರ್ತಿ:
ರಾಜ್ಯದ ಎಲ್ಲ ಕೃಷಿ ವಿವಿಗಳಲ್ಲಿ ಹುದ್ದೆಗಳು ಖಾಲಿ ಇದ್ದು, ಕೂಡಲೇ ಖಾಲಿ ಇರುವ ಹುದ್ದೆಗಳಲ್ಲಿ ಶೇ.50 ರಷ್ಟು ಬೋಧಕ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಸವರಾಜ ಪಾಟೀಲ್ ಇಟಗಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ನಾಲ್ಕು ಕೃಷಿ ವಿವಿಯಲ್ಲೂ ಹುದ್ದೆ ಖಾಲಿಯಿವೆ. ಒಟ್ಟು 864 ಬೋಧನಾ ಹುದ್ದೆ, 2,609 ಬೋಧಕೇತರ ಹುದ್ದೆ ಖಾಲಿ ಇವೆ. ಶೇ. 50 ರ ಹುದ್ದೆ ಭರ್ತಿಗೆ ಹಿಂದಿನ ಸಿಎಂ ಯಡಿಯೂರಪ್ಪ ಆದೇಶ ಮಾಡಿದ್ದರು, ಎಲ್ಲ ವಿವಿಗೂ ಪತ್ರ ಬರೆದಿದ್ದು, ಮಾಹಿತಿ ಪಡೆದು ಶೆ. 50 ರಷ್ಟು ಬೋಧಕ ಹುದ್ದೆ ಭರ್ತಿ ಭರವಸೆ ನೀಡಿದರು.
ಕಾಮಗಾರಿ ಆಗದೇ ಬಿಲ್ ಪಾವತಿ ಆಗಿಲ್ಲ:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಕೈಗೆತ್ತಿಕೊಂಡಿರುವ ಯೋಜನೆಗಳಲ್ಲಿ ಕಾಮಗಾರಿ ಆಗದೇ ಬಿಲ್ ಪಾವತಿ ಮಾಡಿದ ಘಟನೆಗಳು ನಡೆದಿಲ್ಲ, ಗಮನಕ್ಕೆ ತಂದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಗೋಪಾಲಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಿಎಂ ಗ್ರಾಮ ವಿಕಾಸ ಯೋಜನೆಯಡಿ ಕಾಮಗಾರಿ ಪೂರ್ಣಗೊಳಿಸದೇ ಗುತ್ತಿಗೆದಾರರಿಗೆ ಬಿಲ್ ಪಾವತಿ ಆಗಿಲ್ಲ, ಇಂತಹ ವ್ಯತ್ಯಾಸ ಆಗಿದ್ದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಈ ವೇಳೆ, ಮಾತನಾಡಿದ ಕಾಂಗ್ರೆಸ್ ಸದಸ್ಯ ಎಂ.ನಾರಾಯಣಸ್ವಾಮಿ, ಎಲ್ಲ ಶಾಸಕರಿಗೂ ಒಂದು ಕೋಟಿ ಹಣ ಸಿದ್ದರಾಮಯ್ಯ ಕೊಟ್ಟಿದ್ದರು. ಈ ಸರ್ಕಾರ ಕೂಡ ಇದನ್ನು ಮುಂದುವರೆಸಲು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಸಚಿವರು, ಇಡೀ ಕರ್ನಾಟಕದಲ್ಲಿ 750 ಗ್ರಾಮಗಳನ್ನು ಅಮೃತ ಪಂಚಾಯತ್ ಯೋಜನೆಯಡಿ ತೆಗೆದುಕೊಳ್ಳಲಾಗಿದೆ. ಬಜೆಟ್ ಮೊದಲೇ ತಲಾ 25 ಲಕ್ಷ ಹಣ ಗ್ರಾಮಗಳಿಗೆ ಬಿಡುಗಡೆ ಮಾಡಲಾಗಿದೆ. ಆ ಗ್ರಾಮಗಳ ಅಭಿವೃದ್ಧಿಗೆ ಸೂಚಿಸಲಾಗಿದೆ. ಸೆ.23 ರಂದು ಕೇಂದ್ರದ ಸಚಿವರು ಬಂದು ವಿಧಾನಸೌಧದಲ್ಲಿ ಯೋಜನೆ ಉದ್ಘಾಟನೆ ಮಾಡಲಿದ್ದಾರೆ. ಉಳಿದ ಗ್ರಾಮಗಳಿಗೂ ಯೋಜನೆ ವಿಸ್ತರಣೆ ಮಾಡಲಾಗುತ್ತದೆ. ಅಮೃತ ಮಹೋತ್ಸವದ ನಿಮಿತ್ತ ಈ ಯೋಜನೆ ಮಾಡಲಾಗಿದೆ ಎಂದರು.
2024 ಕ್ಕೆ ಎಲ್ಲ ಹಳ್ಳಿಗಳ ಮನೆಗೂ ಶುದ್ಧ ಕುಡಿಯುವ ನೀರು:
2024 ರ ಒಳಗೆ ರಾಜ್ಯದ ಪ್ರತಿ ಗ್ರಾಮದ ಪ್ರತಿ ಮನೆಗೂ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಗುರಿ ಇರಿಸಿಕೊಳ್ಳಲಾಗಿದ್ದು, ಆ ನಿಟ್ಟಿನಲ್ಲಿ ಇಲಾಖೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಕಲಾಪದ ವೇಳೆ ಸದಸ್ಯ ಶ್ರೀಕಂಠೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗಂಗೆ ಯೋಜನೆ ಅಡಿ 2024 ರೊಳಗೆ ಪ್ರತಿ ಹಳ್ಳಿಯ ಪ್ರತಿ ಮನೆಗೂ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಕೊಡಬೇಕು ಎಂದು ಕಾಮಗಾರಿ ಮಾಡಲಾಗುತ್ತಿದೆ. ಈ ಬಗ್ಗೆ ಬಹಳ ವೇಗವಾದ ಪ್ರಯತ್ನ ನಡೆಸಲಾಗುತ್ತಿದೆ.
ನೀರು ಲಭ್ಯತೆ ಇರುವ ಕಡೆ ವ್ಯರ್ಥ ಮಾಡದೇ, ಗ್ರಾಮೀಣ ಜನರಿಗೆ ನೀರು ಕೊಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಮಳೆ ನೀರು ಬಳಸುವ ಆಕಾಶ ಗಂಗೆ ಯೋಜನೆ ಅಡಿ ಮಳೆ ನೀರು ಸಮುದ್ರ ಪಾಲಾಗುವ ಬದಲು ನೀರು ಇಂಗಿಸಿ ಬಳಸಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಅರ್ಧಕ್ಕೆ ನಿಂತಿರುವ ಭವನಗಳ ಪೂರ್ಣಕ್ಕೆ ಆದ್ಯತೆ :
ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯಡಿ ಮಂಜೂರಾತಿ ಪಡೆದು ಅರ್ಧಕ್ಕೆ ನಿಂತಿರುವ ಭವನಗಳನ್ನು ಪೂರ್ಣಗೊಳಿಸಲು ಸರ್ಕಾರ ಮೊದಲ ಆದ್ಯತೆ ನೀಡಲಿದೆ. ಈ ಸಂಬಂಧ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಧರ್ಮಸೇನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈವರೆಗೆ ಎರಡೂ ಇಲಾಖೆಯಡಿ 7,500 ಭವನ ಮಂಜೂರಾಗಿವೆ. ಇದರಲ್ಲಿ 2,740 ಭವನಗಳು ಮುಕ್ತಾಯಗೊಂಡಿದ್ದು, ಉಳಿದವು ಅರ್ಧಕ್ಕೆ ನಿಂತಿವೆ. ಕೆಲವು ಕಡೆ ಮಂಜೂರಾತಿಗಿಂತ ಹೆಚ್ಚು ವೆಚ್ಚ ಮಾಡಿದ್ದಾರೆ. ನಿವೇಶನದ ಸಮಸ್ಯೆ ಇದ್ದರೂ ಕೆಲಸ ಆರಂಭಿಸಿದ್ದಾರೆ. ಹಾಗಾಗಿ ಭವನಗಳು ಅರ್ಧಕ್ಕೆ ನಿಂತಿವೆ. ಹೊಸದಾಗಿ ಭವನಗಳ ನಿರ್ಮಾಣಕ್ಕೆ ಬೇಡಿಕೆ ಸ್ಥಗಿತಗೊಳಿಸಿ ಅರ್ಧಕ್ಕೆ ನಿಂತಿರುವ ಭವನ ಪೂರ್ಣಕ್ಕೆ ಆದ್ಯತೆ ನೀಡೋಣ ಎಂದರು.
1.22 ಕೋಟಿ ಪರಿಶಿಷ್ಟ ಸಮುದಾಯದ ಜನ ಸಂಖ್ಯೆ ಇದೆ. 5.5 ಲಕ್ಷ ಕುಟುಂಬಕ್ಕೆ ಮನೆ ಇಲ್ಲ, 4 ಲಕ್ಷ ಕುಟುಂಬಕ್ಕೆ ನಿವೇಶನವೇ ಇಲ್ಲ, ಕುಟುಂಬಕ್ಕೊಂದು ಮನೆ, ಮನೆಗೆ ದೀಪ, ಮಕ್ಕಳಿಗೆ ಶಿಕ್ಷಣ, ಶುದ್ಧ ಕುಡಿಯುವ ನೀರು ಕೊಡಬೇಕು. ಇಲಾಖೆಯ ಅನುದಾನ ರಸ್ತೆ, ಭವನಕ್ಕೆ ಖರ್ಚಾಗುತ್ತಿದೆ. ಜನರ ಜೀವನ ಮಟ್ಟ ಸುಧಾರಣೆಗೆ ಬಳಸಬೇಕು ಎಂದು ಅಭಿಪ್ರಾಯಪಟ್ಟರು.
ಆರ್ಡಿಪಿಆರ್ ಪದವಿ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಲು ಸಮಿತಿ:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಎಂಎ ಪಡೆದ ವಿದ್ಯಾರ್ಥಿಗಳಿಗೆ ಇಲಾಖೆಯಲ್ಲಿ ಮೀಸಲಾತಿ ಕಲ್ಪಿಸಿ ಸರ್ಕಾರಿ ಉದ್ಯೋಗ ನೀಡುವ ಕುರಿತು ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ವರದಿ ಪಡೆದು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ನಂತರ ಆರ್ಡಿಪಿಆರ್ ವಿವಿ ಪದವಿ ವಿದ್ಯಾರ್ಥಿಗಳಿಗೆ ಮೀಸಲಾತಿ ಕಲ್ಪಿಸುವ ಕುರಿತು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಸಚಿವ ಈಶ್ವರಪ್ಪ, ಮೋದಿ ಹುಟ್ಟುಹಬ್ಬದ ದಿನ ಪಂಚಾಯತ್ ರಾಜ್ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಉದ್ಯೋಗ ಮೀಸಲಾತಿ ಕಲ್ಪಿಸಲು ಬೇಡಿಕೆ ಇರಿಸಿದ್ದಾರೆ.
ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುತ್ತದೆ. ಇಲಾಖೆಯಲ್ಲಿ ಉದ್ಯೋಗ ನೀಡಲು, ಮೀಸಲಾತಿ ಕಲ್ಪಿಸುವ ಕುರಿತು ಸಮಿತಿಯ ವರದಿ ಪಡೆದು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.