ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರ ಪ್ರಮಾಣ ಸ್ವೀಕಾರ ಹಿನ್ನೆಲೆಯಲ್ಲಿ ಕಂಠೀರವ ಕ್ರೀಡಾಂಗಣದ ಸುತ್ತಮುತ್ತಲ ಭಾಗಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರ ನಡೆಯಿತು. ಕಳೆದ ಏಳು ವರ್ಷಗಳ ಬಳಿಕ ಪೂರ್ಣ ಬಹುಮತದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ನಿನ್ನೆಯಿಂದಲೇ ದೂರದೂರುಗಳಿಂದ ಖಾಸಗಿ ವಾಹನಗಳು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಜನ ಬೆಂಗಳೂರಿನತ್ತ ಪ್ರಯಾಣಿಸಲು ಆರಂಭಿಸಿದರು. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿಗಳ ವಾಹನಗಳು ಹೆದ್ದಾರಿಗಳಲ್ಲಿ ಸಾಲುಗಟ್ಟಿ ಬಂದಿದ್ದವು.
ಕ್ರೀಡಾಂಗಣದಲ್ಲಿ 50 ಸಾವಿರಕ್ಕೂ ಹೆಚ್ಚು ಜನರಿಗೆ ಆಸನ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಹಡ್ಸನ್ ವೃತ್ತದಲ್ಲಿ ಬೃಹತ್ ಪರದೆಯೊಂದನ್ನು ಅವಡಿಸಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ, ಹಡ್ಸನ್ ವೃತ್ತದಿಂದ ವಿಠ್ಠಲ ಮಲ್ಯ ಮತ್ತು ಕಸ್ತೂರ ಬಾ ರಸ್ತೆಯನ್ನು ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಂಪೂರ್ಣ ನಿಷೇಧ ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ತುಂಬಿದ್ದ ಸಾವಿರಾರು ಜನ ಎಲ್ಇಡಿ ಪರದೆಯಲ್ಲಿ ಪ್ರಸಾರವಾಗುತ್ತಿದ್ದ ಪ್ರಮಾಣ ವಚನ ಕಾರ್ಯಕ್ರಮದ ದೃಶ್ಯಗಳನ್ನು ಕಣ್ತುಂಬಿಕೊಂಡರು.
ಕ್ರೀಡಾಂಗಣದ ದೂರದಲ್ಲೇ ವಾಹನಗಳ ನಿಲುಗಡೆ ಮಾಡಿ ಸುಮಾರು ದೂರ ನಡೆದು ಕಾರ್ಯಕ್ರಮ ನಡೆದ ಕಂಠೀರವ ಕ್ರೀಡಾಂಗಣಕ್ಕೆ ಅಭಿಮಾನಿಗಳು ತಲುಪಿದರು. ಕಾರ್ಯಕ್ರಮಕ್ಕಾಗಿ ಆಗಮಿಸಿದವರಿಗೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಅಭಿಮಾನಿಗಳು ಅಲ್ಲಲ್ಲಿ ಉಪಹಾರದ ವ್ಯವಸ್ಥೆ ಮಾಡಿದ್ದರು. ಕಂಠೀರವ ಕ್ರೀಡಾಂಗಣದ ಸುತ್ತ ಹಲವಾರು ಕೌಂಟರ್ಗಳನ್ನು ತೆರೆದು ಉಪಹಾರ ವಿತರಿಸಲಾಯಿತು. ಕಸ್ತೂರ ಬಾ ರಸ್ತೆ ಫ್ಲೆಕ್ಸ್, ಬ್ಯಾನರ್ ಳಿಂದ ತುಂಬಿ ಹೋಗಿತ್ತು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಹಲವಾರು ನಾಯಕರ ಫೋಟೋಗಳು ಕಂಗೊಳಿಸುತ್ತಿದ್ದವು. ಅಭಿಮಾನಿಗಳು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರ ಭಾವಚಿತ್ರವಿರುವ ಬಾವುಟಗಳನ್ನು ಹಿಡಿದು ಜಯಘೋಷ ಮೊಳಗಿಸುತ್ತಿದ್ದರು.
ಭರ್ಜರಿ ವ್ಯಾಪಾರ: ರಸ್ತೆ ಬದಿಯಲ್ಲಿ ತಳ್ಳುವ ಗಾಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದವರಿಗೆ ಭರ್ಜರಿ ವ್ಯಾಪಾರ ನಡೆಸಿದರು. ಬೀದಿ ಬದಿಯಲ್ಲಿ ಕಬ್ಬಿನ ಹಾಲು, ಐಸ್ಕ್ರೀಮ್, ಕ್ಯಾಂಡಿ, ಮಸಾಲ ಪೂರಿ ಸೇರಿದಂತೆ ವಿವಿಧ ರೀತಿಯ ವ್ಯಾಪಾರಿಗಳಿಗೆ ಒಂದೇ ದಿನ ಲಾಟರಿ ಹೊಡೆದಂತಾಗಿತ್ತು. ಈ ಹಿನ್ನೆಲೆಯಲ್ಲಿ ಒಂದೇ ದಿನದಲ್ಲಿ ಸಾವಿರಾರು ರೂ. ಗಳ ವ್ಯಾಪಾರವನ್ನು ಗಿಟ್ಟಿಸಿಕೊಂಡರು.
ವಾಹನ ಸಂಚಾರ ಸ್ಥಗಿತ: ಕಂಠೀರವ ಕ್ರೀಡಾಂಗಣದಲ್ಲಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಠ್ಠಲ ಮಲ್ಯ ರಸ್ತೆ, ರಿಚ್ಮಂಡ್ ವೃತ್ತ, ಹಡ್ಸನ್ ವೃತ್ತ ಸೇರಿದಂತೆ ಕ್ರೀಡಾಂಗಣದ ಸುತ್ತಮುತ್ತಲ ಕೆಲ ರಸ್ತೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಕಾರ್ಯಕ್ರಮ ವೀಕ್ಷಣೆಗೆ ಬಂದಿದ್ದ ಜನತೆ ದೂರುದಲ್ಲಿ ವಾಹನ ನಿಲ್ಲಿಸಿ ನಡೆದು ಬಂದಿದ್ದಿದ್ದರು.
ಕಬ್ಬನ್ ಪಾರ್ಕ್ನಲ್ಲಿ ವಾಹನ ಸಂಚಾರ ಸ್ಥಗಿತ: ಕಂಠೀರವ ಕ್ರೀಡಾಂಗಣಕ್ಕೆ ಹೊಂದಿರಕೊಂಡಿರುವ ಕಬ್ಬನ್ ಉದ್ಯಾನವನದಲ್ಲಿ ಶನಿವಾರ ವಾಹನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಎಲ್ಲ ದ್ವಾರಗಳಲ್ಲಿಯೂ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದು, ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ಇದನ್ನೂ ಓದಿ:ಪ್ರಮಾಣವಚನ ಹಿನ್ನೆಲೆ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್: ಪರದಾಡಿದ ಜನ