ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು. ಇಲ್ಲಿ ಅನರ್ಹಗೊಂಡಿರುವ 17 ಶಾಸಕರ ಸ್ಥಾನಗಳಿಗೆ ಅದರಲ್ಲೂ ತಮ್ಮ ಪಕ್ಷ ಬಿಟ್ಟಿರುವ 14 ಶಾಸಕರ ಕ್ಷೇತ್ರಗಳಿಗೆ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ಕಾರ್ಯತಂತ್ರ ಹೆಣೆಯುವ ಸಂಬಂಧ ಚರ್ಚೆ ನಡೆಯಲಿದೆ.
ಪಕ್ಷ ಬಿಟ್ಟು ವೈಯಕ್ತಿಕ ವರ್ಚಸ್ಸಿನ ಮೇಲೆ ಗೆಲ್ಲುತ್ತೇವೆ ಅಂದುಕೊಂಡ ಶಾಸಕರ ಬಗ್ಗೆ ನಕಾರಾತ್ಮಕ ಭಾವನೆ ಮೂಡಿಸುವುದು, ಹೇಳಿಕೆಗೆ ತಿರುಗೇಟು ನೀಡುವುದು, ಅವರ ಕ್ಷೇತ್ರಕ್ಕೆ ಬಿಡುಗಡೆಯಾದ ಹಣದ ವಿವರ ಬಿಚ್ಚಿಡುವ ಕಾರ್ಯತಂತ್ರದ ಮೂಲಕ ಕ್ಷೇತ್ರವನ್ನು ಮರಳಿ ತಮ್ಮ ಪಾಲಿಗೆ ಪಡೆದುಕೊಳ್ಳುವ ಯತ್ನವನ್ನು ಮಾಡಲು ಕಾಂಗ್ರೆಸ್ ನಿರ್ಧರಿಸಿದೆ.
ಬಿಜೆಪಿ ನಾಯಕರ ಮರುಳಾಗಿಸುವ ಮಾತು, ಹಣ, ಸರ್ಕಾರದ ಬಲ ಬಳಕೆ ಎದುರು ಸೆಡ್ಡುಹೊಡೆದು ನಿಂತು ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದು ಹೇಗೆ? ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವುದು ಹೇಗೆ? ಇನ್ನಷ್ಟು ನಾಯಕರು ಅತೃಪ್ತರ ಜತೆ ತೆರಳದಂತೆ ನೋಡಿಕೊಳ್ಳುವುದು, ಪಕ್ಷದ ಬಗ್ಗೆ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುವ ಕಾರ್ಯ ಮಾಡುವ ಕುರಿತು ಚರ್ಚೆ ನಡೆಯಲಿದೆ.
ಬಿಟ್ಟು ಹೋದ ಶಾಸಕರೆಲ್ಲಾ ನಮ್ಮ ಬೆನ್ನಿಗೆ ಚೂರಿ ಹಾಕಿದರು ಎನ್ನುವ ಆರೋಪ ಮಾಡಲು ಸಿದ್ಧತೆ ನಡೆಸಲಾಗಿದ್ದು, ವೈಯಕ್ತಿಕ ವರ್ಚಸ್ಸಿನಲ್ಲಿ ಗೆಲ್ಲುವ ವಿಶ್ವಾಸ ಹೊಂದಿರುವ ಅತೃಪ್ತರ ವಿರುದ್ಧ ಪಕ್ಷದ ಬಲ ತೋರಿಸಿ ಗೆದ್ದು ತೋರಿಸುವ ಕಾರ್ಯತಂತ್ರ ಹೆಣೆಯಲು ಇಂದಿನ ಸಭೆ ಸೇರಲಾಗಿದೆ.
ಅತೃಪ್ತರ ನಡೆ
ಈ ನಡುವೆ ಮೂವರು ಅತೃಪ್ತ ಶಾಸಕರು ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದು, ಎಲ್ಲಾ 17 ಶಾಸಕರು ಒಂದೆರಡು ದಿನದಲ್ಲಿ ಸುಪ್ರಿಂ ಕೋರ್ಟ್ ಗೆ ತಮ್ಮನ್ನು ಸ್ಪೀಕರ್ ಅನರ್ಹತೆ ಗೊಳಿಸಿರುವ ಕ್ರಮ ಪ್ರಶ್ನಿಸಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಅಲ್ಲಿ ಅದರ ವಿಚಾರಣೆ ಕೂಡ ಬರಲಿದ್ದು, ಈ ನಿರ್ಧಾರ ಏನಾಗಬಹುದು ಎನ್ನುವ ಕುರಿತು ಇಂದಿನ ಕೈ ನಾಯಕರ ಸಭೆಯಲ್ಲಿ ಚರ್ಚೆ ಆಗಲಿದೆ.