ಬೆಂಗಳೂರು : ಕೋವಿಡ್ ಎರಡನೇ ಅಲೆ ಇಷ್ಟೊಂದು ತೀವ್ರ ಮಟ್ಟದಲ್ಲಿ ಪರಿಣಾಮ ಬೀರಲು ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ. ಚಾಮರಾಜಪೇಟೆಯ ವಿಧಾನಸಭಾ ಕ್ಷೇತ್ರದ ಕೋವಿಡ್-19 ಸಾಂಕ್ರಾಮಿಕ ರೋಗ ಹರಡಿರುವ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಎಲ್ಲಾ ಅಸಂಘಟಿತ ಕಾರ್ಮಿಕ ವಲಯದವರಿಗೆ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು.
2020ರ ನವಂಬರ್ ತಿಂಗಳಲ್ಲಿಯೇ ಕೋವಿಡ್ ಎರಡನೇ ಅಲೆ ಬಗ್ಗೆ ಆರೋಗ್ಯ ತಜ್ಞರು ಸರ್ಕಾರಕ್ಕೆ ವರದಿ ನೀಡಿದ್ದರು. ಆದರೆ, ಸರ್ಕಾರ ಇವರ ವರದಿಯನ್ನು ನಿರ್ಲಕ್ಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿರ್ಲಕ್ಷವೇ ಈ ಸಮಸ್ಯೆಗೆ ಕಾರಣ. ಇದರ ಪರಿಣಾಮವನ್ನು ನಾವು ಎರಡನೇ ಅಲೆಯಲ್ಲಿ ಕಂಡಿದ್ದೇವೆ. ಸಾವಿರಾರು ಮಂದಿ ಸಾವನ್ನಪ್ಪಿದನ್ನು ನಾವು ಕಂಡಿದ್ದೇವೆ.
ರಾಷ್ಟ್ರದ ಜನರ ಮಾನ-ಪ್ರಾಣ ರಕ್ಷಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ. ಜನರ ಜೀವ ರಕ್ಷಿಸುವ ಜವಾಬ್ದಾರಿ ಯಡಿಯೂರಪ್ಪ ಅವರದ್ದಾಗಿದೆ. ಪ್ರತಿಪಕ್ಷದ ನಾಯಕರದ್ದಲ್ಲ. ನಾವು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ಹಾಗೂ ಹತ್ತು ಸಾವಿರ ರೂಪಾಯಿ ಸಹಾಯಧನ ನೀಡಿ ಎಂದು ಕೇಳಿದ್ದೆವು.
ಲಾಕ್‌ಡೌನ್ ಸಮಯದಲ್ಲಿ ಜನರಿಗೆ ಆಚೆ ಬರಲು ಸಾಧ್ಯವಾಗುವುದಿಲ್ಲ. ಕೆಲಸ ಇಲ್ಲದ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಹಾಯಧನದಿಂದ ಇವರಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದ್ದೆವು. ಆದರೆ, ನಮ್ಮ ಮಾತಿಗೆ ಸರ್ಕಾರ ಬೆಲೆ ಕೊಡಲಿಲ್ಲ ಎಂದರು.
ಜನರ ಜೀವ ಉಳಿಸುವುದಕ್ಕೆ ವ್ಯಾಕ್ಸಿನೇಷನ್ ಮಾಡಿಸುವುದು ಮಾತ್ರ ಪರಿಹಾರ. ಜನರ ಜೀವನ ರಕ್ಷಿಸುವ ನಿಜವಾದ ಕಾಳಜಿ ಇದ್ದರೆ ದೇಶದ 130 ಕೋಟಿ ಜನರಿಗೆ ಆದಷ್ಟು ಬೇಗ ವ್ಯಾಕ್ಸಿನೇಷನ್ ಕೊಡಿಸಿ. ವ್ಯಾಕ್ಸಿನ್ ದೇಶಕ್ಕೆ ಬಂದು ಸಾಕಷ್ಟು ದಿನ ಆಗಿದೆ.
ಸಾಕಷ್ಟು ರಾಷ್ಟ್ರಗಳು ನಮಗಿಂತಲೂ ಮುಂದಿವೆ. ಇಲ್ಲಿ ವ್ಯಾಕ್ಸಿನೇಷನ್ ಇಲ್ಲ. ಆದರೆ, ಇಲ್ಲಿರುವ ಆರುವರೆ ಕೋಟಿ ವ್ಯಾಕ್ಸಿನೇಷನ್ ಅನ್ನು ಬೇರೆ ರಾಷ್ಟ್ರಕ್ಕೆ ನೀಡಲಾಗಿದೆ. ಇದು ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು ಅನ್ನುವ ಗಾದೆಯನ್ನು ಹೇಳುತ್ತದೆ ಎಂದರು.
ಇದನ್ನೂ ಓದಿ: Congress ಮುಂದಿನ ಸಿಎಂ ಯಾರು?: ಜಮೀರ್ -DKS ವಾಕ್ ಠಕ್ಕರ್
ಪ್ರಧಾನಿ ನರೇಂದ್ರ ಮೋದಿ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ ಕೊಡಿಸುತ್ತೇನೆ ಎಂದು ಹೇಳಿ ತಿಂಗಳುಗಳು ಕಳೆದಿವೆ. ಈಗ ಮತ್ತೊಮ್ಮೆ ಹೊಸ ದಿನಾಂಕವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಾದರೂ ಸಾಧ್ಯವಾಗುತ್ತಾ ಅನ್ನೋದನ್ನ ನೋಡಬೇಕಿದೆ. ಬೇರೆ ಎಲ್ಲ ಕೆಲಸವನ್ನು ನಿಲ್ಲಿಸಿ ಕೇವಲ ವ್ಯಾಕ್ಸಿನೇಷನ್ ನೀಡುವತ್ತ ಗಮನ ಹರಿಸಿ.
ಈ ಸಾರಿ ಪ್ರಧಾನಿ ನೀಡಿದ ಭರವಸೆಯಾದರೂ ಈಡೇರುತ್ತದೆಯೋ ಅಥವಾ ಹುಸಿಯಾಗುತ್ತದೆಯೋ ಎನ್ನುವುದನ್ನು ನೋಡಬೇಕು. ಕೊರೊನಾ ಎರಡನೇ ಅಲೆ ಬಂದಮೇಲೆ 30 ಲಕ್ಷ ಉದ್ಯೋಗ ನಷ್ಟವಾಗಿದೆ ಎಂದು ಎಫ್ಕೆಸಿಸಿಐ ಹೇಳಿದೆ. ಈ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದವರ ಕಷ್ಟಕ್ಕೆ ಸ್ಪಂದಿಸುವವರು ಯಾರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ದುಡ್ಡು ಹೊಡೆಯುವುದೇ ಕೆಲಸ : ರಾಜ್ಯ ಸರ್ಕಾರದಲ್ಲಿ ಇಂದು ಎಲ್ಲರೂ ದುಡ್ಡು ಹೊಡೆಯುವುದನ್ನು ಕೆಲಸ ಮಾಡಿಕೊಂಡಿದ್ದಾರೆ. ಶಾಸಕರು, ವಿಧಾನಪರಿಷತ್ ಸದಸ್ಯರು ಸಹ ಫುಲ್ ಹಣ ಮಾಡಿಕೊಂಡಿದ್ದಾರೆ. ಯಡಿಯೂರಪ್ಪ, ಅವರ ಮಗ ಹಾಗೂ ಮಂತ್ರಿಗಳು ಬರೀ ದುಡ್ಡು ಹೊಡೆಯುವುದನ್ನು ಕಾಯಕ ಮಾಡಿಕೊಂಡಿದ್ದಾರೆ.
ಬೇರೆ ಏನನ್ನೂ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಸರ್ಕಾರವನ್ನು ಬದಲಿಸುವ ಅಗತ್ಯವನ್ನು ಮನಗಂಡು ಜನರು ನಿರ್ಧಾರ ಕೈಗೊಳ್ಳಬೇಕಾಗಿದೆ. ಜನವಿರೋಧಿ ಹಾಗೂ ಭ್ರಷ್ಟಾಚಾರಿ ಸರ್ಕಾರವನ್ನು ಕೂಡಲೇ ಕಿತ್ತೊಗೆಯಿರಿ ಎಂದು ಕರೆಕೊಟ್ಟರು.