ಬೆಂಗಳೂರು: ಪ್ರಾಥಮಿಕ ಆರೋಗ್ಯ ಕೇಂದ್ರಗಳು 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಮಾಡುವ ಜೊತೆಗೆ ವಿಶ್ವಬ್ಯಾಂಕ್ ನೆರವಿನೊಂದಿಗೆ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗುವುದು. ಇದಕ್ಕೆ ಪೂರಕವಾಗಿ ನೀತಿ, ನಿಯಮಗಳಲ್ಲಿ ಬದಲಾವಣೆ ತರಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಸಂಜೆ ಮಾಜಿ ಆರೋಗ್ಯ ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರು ಹಾಗೂ ವೈದ್ಯ ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 2,300ಕ್ಕೂ ಅಧಿಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. 30 ಸಾವಿರ ಜನರಿಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇರಬೇಕೆಂಬ ನಿಯಮವಿದೆ. ಆದರೆ ಕೆಲ ಜಿಲ್ಲೆಗಳಲ್ಲಿ ಈ ನಿಯಮದಂತೆ ಆಸ್ಪತ್ರೆ ಇಲ್ಲ. ವಿಶ್ವಬ್ಯಾಂಕ್ ಸಹಕಾರದಿಂದ ಮೂರು ವರ್ಷಗಳಲ್ಲಿ ಪಿಹೆಚ್ಸಿಗಳನ್ನು ನಿರ್ಮಿಸಲಾಗುವುದು. ಜೊತೆಗೆ ಈಗ ಇರುವ ಪಿಹೆಚ್ಸಿಗಳನ್ನು 24/7 ಸೇವೆ ನೀಡುವ ಕೇಂದ್ರಗಳಾಗಿ ಪರಿವರ್ತಿಸಲಾಗುವುದು ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಆರಂಭವಾಗಿ ದೊಡ್ಡ ಆಸ್ಪತ್ರೆಗಳವರೆಗೂ ಗುಣಮಟ್ಟದಲ್ಲಿ ರಾಜಿಯಾಗದಂತೆ ಕ್ರಮ ಕೈಗೊಳ್ಳಬೇಕಿದೆ. ಇದಕ್ಕಾಗಿ ಸಮಗ್ರವಾದ ಹೊಸ ನೀತಿ ರೂಪಿಸಲಾಗುತ್ತಿದೆ. ಕೆಲ ವೈದ್ಯರು ಗ್ರಾಮೀಣ ಪ್ರದೇಶಗಳಿಗೆ ಹೋಗಿ ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಾರೆ. ಆರೋಗ್ಯ ಸಿಬ್ಬಂದಿ ಸೇವೆ ಸಲ್ಲಿಸುವ ಪ್ರದೇಶದ ಆಧಾರದಲ್ಲಿ ಬಡ್ತಿ, ವೇತನ, ಮಕ್ಕಳಿಗೆ ಶಿಕ್ಷಣ ನೀಡುವ ಅಂಶಗಳನ್ನು ಈ ಹೊಸ ನೀತಿಯಲ್ಲಿ ಸೇರಿಸಲಾಗುವುದು ಎಂದು ವಿವರಿಸಿದರು.
ವೈದ್ಯರ ನೇಮಕ ಪ್ರಕ್ರಿಯೆ ಆರಂಭ:
1,250 ಎಂಬಿಬಿಎಸ್ ವೈದ್ಯರು, 950 ತಜ್ಞರು, 150 ದಂತ ವೈದ್ಯರು ಸೇರಿ 2,500 ವೈದ್ಯರ ನೇಮಕ ಪ್ರಕ್ರಿಯೆ ಆರಂಭವಾಗಿದೆ. ಜೊತೆಗೆ 1,500 ಹಿರಿಯ ರೆಸಿಡೆಂಟ್ ವೈದ್ಯರನ್ನು ನೇಮಿಸಲಾಗುವುದು. ಡಿಸೆಂಬರ್ ಅಥವಾ ಜನವರಿ ವೇಳೆಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾಸ್ಪತ್ರೆಗಳಲ್ಲಿ ಹುದ್ದೆಗಳು ಭರ್ತಿಯಾಗಲಿವೆ. ಅರೆ ವೈದ್ಯಕೀಯ, ನರ್ಸಿಂಗ್ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತರಲಾಗುವುದು ಎಂದರು.
ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸುವ ಉದ್ದೇಶವಿದ್ದು, ಅದಕ್ಕೆ ತಕ್ಕಂತೆ ನೀತಿಯಲ್ಲಿ ಬದಲಾವಣೆ ತರಲಾಗುವುದು ಎಂದರು.