ಬೆಂಗಳೂರು : ಮರುಬಳಕೆ ವಸ್ತುಗಳನ್ನೇ ಬಳಸಿ ನಿರ್ಮಾಣ ಮಾಡಿದ 14 ಅಡಿ ಎತ್ತರದ ವಿಶೇಷವಾದ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆ ನಗರದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. ಬಿಜೆಪಿ ಕಾರ್ಪೊರೇಟರ್ ಮೋಹನ್ ರಾಜು ಈ ಪ್ರತಿಮೆಯನ್ನು ನಿರ್ಮಾಣ ಮಾಡಿಸಿದ್ದಾರೆ. ಭಾನುವಾರದೊಳಗೆ ಪ್ರತಿಮೆ ನಗರಕ್ಕೆ ಬರಲಿದೆ ಎಂದಿದ್ದಾರೆ.
ಸೆಪ್ಟೆಂಬರ್ 17, ಶುಕ್ರವಾರದಂದು ಪ್ರಧಾನಿ ಮೋದಿ ಹುಟ್ಟುಹಬ್ಬ ನಿಮಿತ್ತ ಅಂದೇ ನಗರದ ಬೊಮ್ಮನಹಳ್ಳಿ ವಾರ್ಡ್ ಉದ್ಯಾನವನ ಒಂದರಲ್ಲಿ ಪ್ರತಿಷ್ಠಾಪನೆ ಮಾಡಲು ಸಿದ್ಧತೆಯಾಗಿದೆ ಎಂದು ತಿಳಿದು ಬಂದಿದೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಅಪ್ಪ-ಮಗ ಸೇರಿ, ಗುಜರಿ ವಸ್ತುಗಳನ್ನು ಬಳಸಿ ಎರಡು ತಿಂಗಳ ಕಾಲದಲ್ಲಿ ಪ್ರಧಾನಿ ಅವರ ಪ್ರತಿಮೆ ನಿರ್ಮಿಸಿದ್ದಾರೆ.

ಸುಮಾರು 2 ಟನ್ ಆಟೋಮೊಬೈಲ್ ಸ್ಕ್ಯ್ರಾಪ್ ಇದಕ್ಕೆ ಬಳಸಲಾಗಿದೆ. ಆಂಧ್ರದ ತೆನಾಲಿಯ ಕೆ.ವೆಂಕಟೇಶ್ವರ ರಾವ್ ಹಾಗೂ ಅವರ ಮಗ ರವಿಚಂದ್ರ ಈ ಪ್ರತಿಮೆ ನಿರ್ಮಿಸಿದ್ದಾರೆ. ಈ ಪ್ರತಿಮೆಗಾಗಿ, ಹೈದರಾಬಾದ್, ವಿಶಾಖಪಟ್ಟಣಂ, ಚೆನ್ನೈ, ಗುಂಟೂರಿನಿಂದ ಆಟೋಮೊಬೈಲ್ ತ್ಯಾಜ್ಯಗಳನ್ನು ಸಂಗ್ರಹಿಸಿ ತರಲಾಗಿತ್ತು. ಬೈಕ್ ಚೈನ್, ಗೇರ್ ವೀಲ್, ಕಬ್ಬಿಣದ ರಾಡ್ಗಳು, ಸ್ಕ್ರೂ, ನಟ್, ಬೋಲ್ಟ್‌ಗಳನ್ನು ಬಳಸಿ ಪ್ರತಿಮೆ ನಿರ್ಮಿಸಲಾಗಿದೆ.