ಬೆಂಗಳೂರು: ರಾಜ್ಯಾದ್ಯಂತ ನಾಳೆಯಿಂದ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಕೌಂಟ್ಡೌನ್ ಶುರುವಾಗಿದೆ. ಈಗಾಗಲೇ ಪರೀಕ್ಷಾ ಕೇಂದ್ರಗಳಲ್ಲಿ ಸರ್ಕಾರದ ಸೂಚನೆಯಂತೆ ಎಸ್ಒಪಿ ಜಾರಿ ಮಾಡಲಾಗಿದೆ. ಈ ಬಾರಿ ಒಟ್ಟು 6,84,255 ಅಭ್ಯರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಇದರಲ್ಲಿ ಬಾಲಕರು -3,46,936, ಬಾಲಕಿಯರು 3,37,319 ಇದ್ದಾರೆ. ರೆಗ್ಯುಲರ್ ವಿದ್ಯಾರ್ಥಿಗಳು 6,00,519, ಪುನರಾವರ್ತಿತ ವಿದ್ಯಾರ್ಥಿಗಳು 61,808, ಖಾಸಗಿ ವಿದ್ಯಾರ್ಥಿಗಳು 21,928 ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.
ವಿಭಾಗವಾರು ಮಾಹಿತಿ ಹೀಗಿದೆ:
- ಕಲಾ ವಿಭಾಗ -2,28, 167
- ವಾಣಿಜ್ಯ ವಿಭಾಗ- 2,45,519
- ವಿಜ್ಞಾನ ವಿಭಾಗ- 2,10,569
ರಾಜ್ಯಾದ್ಯಂತ ಒಟ್ಟು 1076 ಪರೀಕ್ಷಾ ಕೇಂದ್ರಗಳಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 83 ಪರೀಕ್ಷಾ ಕೇಂದ್ರಗಳಿವೆ. ರಾಮನಗರ ಜಿಲ್ಲೆಯಲ್ಲಿ ಅತೀ ಕಡಿಮೆ ಅಂದರೆ 13 ಪರೀಕ್ಷಾ ಕೇಂದ್ರಗಳಿವೆ.
ಅಕ್ರಮಗಳನ್ನು ತಡೆಯಲು ಪರೀಕ್ಷೆ ನಡೆಯುವ ಕೊಠಡಿಗಳಲ್ಲಿ ಸಿಸಿಟಿವಿ ಕಣ್ಗಾವಲು ಇರಲಿದ್ದು, ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಝೆರಾಕ್ಸ್ ಶಾಪ್ ಬಂದ್ ಇರಲಿದೆ. ಏಪ್ರಿಲ್ 22ರಿಂದ ಪ್ರಾರಂಭವಾಗಲಿರುವ ಪಿಯು ಪರೀಕ್ಷೆ ಮೇ 18 ರ ವರೆಗೂ ನಡೆಯಲಿದೆ. ನಾಳೆ ಮೊದಲ ದಿನ ವ್ಯವಹಾರ ಅಧ್ಯಯನ ನಡೆಯಲಿದೆ.
ಪರೀಕ್ಷಾ ವೇಳಾಪಟ್ಟಿ ಹೀಗಿದೆ:
ದಿನಾಂಕ | ವಿಷಯ |
22/04/2022 | ವ್ಯವಹಾರ ಅಧ್ಯಯನ |
23/04/2022 | ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ |
25/04/2022 | ಅರ್ಥಶಾಸ್ತ್ರ |
28/04/2022 | ಕನ್ನಡ |
04/05/2022 | ಭೂಗೋಳ ಶಾಸ್ತ್ರ, ಜೀವಶಾಸ್ತ್ರ, |
05/05/2022 | ಮಾಹಿತಿ ತಂತ್ರಜ್ಞಾನ, ರೀಟೈಲ್, ಅಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಂಡ್ ವೆಲ್ ನೆಸ್ |
06/05/2022 | ಇಂಗ್ಲಿಷ್ |
10/05/2022 | ಇತಿಹಾಸ, ಭೌತಶಾಸ್ತ್ರ |
12/05/2022 | ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ |
14/05/2022 | ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ |
17/05/2022 | ಐಚ್ಛಿಕ ಕನ್ನಡ, ಲೆಕ್ಕ ಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ |
18/05/2022 | ಹಿಂದಿ |
ಪರೀಕ್ಷಾ ಕೇಂದ್ರಗೊಳಗೆ ಹಿಜಾಬ್ ನಿಷೇಧ: ಎಸ್ಎಸ್ಎಲ್‌ಸಿ ಪರೀಕ್ಷೆಯಂತೆ ಪಿಯುಸಿ ಪರೀಕ್ಷೆಗೂ ಹಿಜಾಬ್ ನಿಷೇಧ ಮಾಡಿಲಾಗಿದೆ. ಎಲ್ಲಿ ಸಮವಸ್ತ್ರ ಇದೆಯೋ ಅಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಹಾಕಿಕೊಂಡು ಬರಲೇಬೇಕು. ಕಡ್ಡಾಯ ಇಲ್ಲದ ಕಡೆಗಳಲ್ಲಿ ಅಗತ್ಯ ಇಲ್ಲ. ಆದ್ರೆ ಪರೀಕ್ಷಾ ಕೇಂದ್ರಗಳಿಗೆ ಯಾವುದೇ ಧರ್ಮ ಸೂಚಕ ಬಟ್ಟೆಗಳನ್ನು ಧರಿಸಲು ಅವಕಾಶ ಇಲ್ಲ. ಹೈಕೋರ್ಟ್ ಸೂಚನೆಯಂತೆ ನಿಯಮ ಪಾಲನೆ ಮಾಡಲಾಗುತ್ತೆ ಎಂದು ಪರೀಕ್ಷಾ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ಎಂ.ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕರ್ನಾಟಕದಲ್ಲೂ ಆಪ್ ಆಡಳಿತದ ನಡೆಸಲಿದೆ: ಕೇಜ್ರಿವಾಲ್ ವಿಶ್ವಾಸ
ಕೋವಿಡ್ 4ನೇ ಅಲೆ ಭೀತಿ ಇರುವ ಕಾರಣಕ್ಕೆ ಸರ್ಕಾರದ ಮಾರ್ಗಸೂಚಿಯಂತೆ ನಿಯಮಪಾಲನೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ತೋರಿಸಿ ಕೆಎಸ್ಆರ್‌ಟಿಸಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.