ಬೆಂಗಳೂರು: ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳ ನೆರವಿನೊಂದಿಗೆ ರಾಜ್ಯಾದ್ಯಂತ ಅಂಧತ್ವ ನಿವಾರಣೆ ಮಾಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದರು.
ರಾಜಾಜಿನಗರದ ನಾರಾಯಣ ನೇತ್ರಾಲಯದಲ್ಲಿ ನೇತ್ರದಾನದ ಮಹತ್ವ, ಕುರುಡುತನ, ಕಾರ್ನಿಯಲ್ ಕಸಿ ಚಿಕಿತ್ಸೆ ಕುರಿತು ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಕಣ್ಣಿಲ್ಲದವರು 80 ಲಕ್ಷ ಮತ್ತು ದೃಷ್ಠಿದೋಷವುಳ್ಳವರು ಆರು ಕೋಟಿ ಜನರಿದ್ದಾರೆ. ಕಳೆದ 10 ತಿಂಗಳಿಂದ ಕೊರೊನಾ ಭೀತಿಯಿಂದ ಅಂಗಾಂಗ ದಾನ ಕುಗ್ಗಿದ್ದು, ನೇತ್ರದಾನಿಗಳ ಕೊರತೆಯಿಂದ ಅಂಧತ್ವ ನಿವಾರಣೆಗೂ ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರವಾಗಿ ನಾರಾಯಣ ನೇತ್ರಾಲಯದಂತಹ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳ ನೆರವಿನೊಂದಿಗೆ ವಿಶೇಷ ಶಿಬಿರ, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲಾ ವರ್ಗದವರಿಗೂ ಅಂಗಾಂಗ ಕಸಿ, ಮುಂತಾದ ಚಿಕಿತ್ಸೆಗಳು ದೊರೆಯಬೇಕು. ಇದಕ್ಕಾಗಿ ಈ ವಲಯಕ್ಕೆ ಸಹಕಾರ ನೀಡಲು ಸಿದ್ಧ ಎಂದು ಇದೇ ವೇಳೆ ಭರವಸೆ ನೀಡಿದರು.
ತಮಿಳುನಾಡಿನಲ್ಲಿ ಅಂಗಾಂಗ ದಾನದ ಬಗ್ಗೆ ಹೆಚ್ಚು ಒಲವಿದೆ. ರಾಜ್ಯದಲ್ಲಿ ಕೂಡ ಅಂಗಾಂಗ ದಾನದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಕುರುಡುತನ ತಡೆಗಟ್ಟಲು ಶ್ರಮಿಸಬೇಕು. ಚಿಕಿತ್ಸೆಗಿರುವ ಅತ್ಯಾಧುನಿಕ ತಂತ್ರಜ್ಞಾನ ಸಮರ್ಥವಾಗಿ ಬಳಸಿಕೊಳ್ಳಬೇಕು. ಸರ್ಕಾರವು ವಿಷನ್ ಗ್ರೂಪ್ ಮಾಡಿದ್ದು, ನೇತ್ರ ವಿಭಾಗಕ್ಕೆ ನಾರಾಯಣ ನೇತ್ರಾಲಯ ಅಧ್ಯಕ್ಷ ಡಾ. ಕೆ.ಭುಜಂಗ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ. ಅವರು ಚಿಕಿತ್ಸೆ ಸರಳೀಕರಣ, ವೆಚ್ಚ ಕಡಿತದಂತಹ ಅಂಶಗಳನ್ನು ಅಂಧತ್ವ ನಿವಾರಣೆಗೆ ನೀಡುವ ಸೂಕ್ತ ಸಲಹೆಗಳು ಆಧರಿಸಿ ಹೊಸ ನೀತಿ ರೂಪಿಸಲಾಗುತ್ತದೆ ಎಂದು ಹೇಳಿದರು.