ಬೆಂಗಳೂರು: ನಿನ್ನೆಯಷ್ಟೇ ಸಿಂಗಾಪುರದಲ್ಲಿ ಕುಳಿತು ರಾಜ್ಯ ಕಾಂಗ್ರೆಸ್ ಸರ್ಕಾರ ಬೀಳಿಸುವ ಆಪರೇಷನ್ ಪ್ರಯತ್ನ ನಡೆದಿದೆ ಎಂದು ಆರೋಪ ಮಾಡಿದ್ದ ಡಿಸಿಎಂ ಡಿ ಕೆ ಶಿವಕುಮಾರ್ ಇಂದು ಆ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಅಚ್ಚರಿಯ ಬೆಳವಣಿಗೆಯ ರೀತಿ ಇದು ಗೋಚರಿಸಿದೆ. ನಿನ್ನೆ ಮಾಧ್ಯಮಗಳ ಪ್ರಶ್ನೆಗೆ ರಾಜ್ಯ ಸರ್ಕಾರ ಪತನಗೊಳಿಸಲು ಸಿಂಗಪೂರದಲ್ಲಿ ಕುಳಿತು ಪ್ರಯತ್ನ ನಡೆಸುತ್ತಿದ್ದಾರೆ. ಇದರ ಮಾಹಿತಿ ನಮಗೆ ಇದೆ. ನಾವು ಇಂತಹ ಪ್ರಯತ್ನಕ್ಕೆ ಬೆಲೆ ಸಿಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದರು. ಆದರೆ, ಇಂದು ಆ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಡಿಸಿಎಂ ಡಿ ಕೆ ಶಿವಕುಮಾರ್ ನಿರಾಕರಿಸಿದರು.
ನಿನ್ನೆ ಎರಡೆರಡು ಬಾರಿ ಪ್ರತಿಕ್ರಿಯೆ ನೀಡಿದ್ದ ಡಿ ಕೆ ಶಿವಕುಮಾರ್ ಮಾತಿನಿಂದ ಕೆಲ ಕಾಂಗ್ರೆಸ್ ನಾಯಕರು ಸಹ ಕೆಲವೆಡೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಇಂದು ಇಂದು ಪ್ರಶ್ನೆ ಕೇಳುತ್ತಿದ್ದಂತೆ ಯಾವುದೇ ಪ್ರತಿಕ್ರಿಯೆ ನೀಡದೇ ಸ್ಥಳದಿಂದ ತೆರಳಿದರು. ಸದಾಶಿವನಗರದಿಂದ ಕುಮಾರಕೃಪ ಅತಿಥಿಗೃಹಕ್ಕೆ ತೆರಳುವ ಮುನ್ನ, ತಮ್ಮ ಮನೆ ಬಳಿ ಮಾಧ್ಯಮಗಳಿಗೆ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಸಿಂಗಾಪುರ ಆಪರೇಷನ್ ಬಗ್ಗೆ ಫುಲ್ ಸೈಲೆಂಟ್ ಆದ ಡಿಸಿಎಂ ಡಿ ಕೆ ಶಿವಕುಮಾರ್ ನಡೆ ಈಗ ಅಚ್ಚರಿಗೆ ಕಾರಣವಾಗಿದೆ.
ಸಚಿವರ ವಿರುದ್ಧ ಶಾಸಕರ ಪತ್ರ ವಿಚಾರ: ಇದಕ್ಕೂ ಮುನ್ನ ಸಚಿವರ ವಿರುದ್ಧ ಶಾಸಕರು ಪತ್ರ ಬರೆದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಉತ್ತರಿಸಿ, ಯಾರು ಸಹ ಪತ್ರ ಬರೆದಿಲ್ಲ. ಎಲ್ಲರೂ ಅವರವರ ಕ್ಷೇತ್ರದಲ್ಲಿ ಕೆಲಸ ಮಾಡ್ತಾ ಇದ್ದಾರೆ. ಗೆಲ್ಲಲಿ, ಸೋಲಲಿ ಅವರನ್ನು ಗಮನದಲ್ಲಿ ಇಡಬೇಕು ಎಂದು ಹೇಳಿದ್ದೇವೆ. ನಮ್ಮದು ಕೆಲ ಕಾರ್ಯಕ್ರಮಗಳಿವೆ. ಅಸೆಂಬ್ಲಿ ಇದ್ದ ಕಾರಣ ಚರ್ಚೆ ಮಾಡಲು ಆಗಿಲ್ಲ. ಅದರ ಬಗ್ಗೆ ಚರ್ಚೆ ಮಾಡಬೇಕು. ಭ್ರಷ್ಟಾಚಾರದ ಬಗ್ಗೆ ಕೆಲ ಕಡೆಯಿಂದ ಮಾತುಗಳು ಕೇಳಿ ಬರ್ತಾ ಇದೆ. ಪ್ರಜಾಪ್ರತಿನಿಧಿಗಳನ್ನು ಮಾಡಿದ್ದೇವೆ. ಅದರ ಬಗ್ಗೆ ಹುಡುಗರಿಗೆ ಮಾಹಿತಿ ಕೊಡಬೇಕು ಎಂದು ಸ್ಪಷ್ಟಪಡಿಸಿದರು.
ನಮ್ಮ ಗ್ಯಾರಂಟಿಗಳು ಜನರಿಗೆ ತಲುಪುತ್ತಿದೆಯೋ ಇಲ್ಲವಾ ಚರ್ಚೆ ಮಾಡಬೇಕು. ಎಲ್ಲರೂ ಬಹಳ ಆಸೆಯಲ್ಲಿ ಇದ್ದಾರೆ. ಆ ಮಾತು ಕೊಟ್ಟಿದ್ದೇವೆ. ನನ್ನ ಇಲಾಖೆಯಲ್ಲಿ ಹೋಲ್ಡ್ ಮಾಡಿ ಎಂದು ಹೇಳಿದ್ದೇನೆ. ಹತ್ತು, 100, 300 ಕೋಟಿ ಕೆಲಸ ಕೇಳ್ತಾ ಇದ್ದಾರೆ. ಸದ್ಯಕ್ಕೆ ಆಗಲ್ಲ ಹೋಲ್ಡ್ ಮಾಡಿ ಎಂದು ಹೇಳಿದ್ದೇವೆ. ವರ್ಗಾವಣೆ ಸಮಯ ಮಿತಿ ಇದೆ. ಸಮಯ ಮಿತಿಯಲ್ಲಿ ಮಾಡಲಾಗಿದೆ. ಉಳಿದಿದ್ದು ಸಿಎಂಗೆ ಬಿಡಲಾಗಿದೆ ಎಂದು ತಿಳಿಸಿದರು.
ನೈಸ್ ನಿರಾಶ್ರಿತರು ಡಿಕೆಶಿಗೆ ಭೇಟಿ: ನೈಸ್ ಯೋಜನೆಯಿಂದ ಭೂಮಿ ಕಳೆದುಕೊಂಡಿರುವ ಸೋಂಪುರ ರೈತರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಕುಮಾರಕೃಪಾ ಅತಿಥಿಗೃಹದಲ್ಲಿ ಮಂಗಳವಾರ ಭೇಟಿ ಮಾಡಿ ನಿವೇಶನ ಕೊಡಿಸುವಂತೆ ಮನವಿ ಮಾಡಿದರು. ಡಿಕೆಶಿ ಭೇಟಿ ಬಳಿಕ ಬಿಜೆಪಿ ಮುಖಂಡ ರುದ್ರೇಶ್ ಮಾತನಾಡಿ, ಸೋಂಪುರ ಗ್ರಾಮದ ಜಮೀನು ವಶ ಆಗಿ 20-25 ವರ್ಷ ಆಗಿದೆ. ನೈಸ್ನಿಂದ ನಮಗೆ ನಿವೇಶನ ಹಂಚಿಕೆ ಆಗಿಲ್ಲ. ಡಿಸಿಎಂ ಅವ್ರನ್ನೂ ಭೇಟಿ ಮಾಡಿದ್ದೇವೆ. ರೈತರಿಗೆ ಅನುಕೂಲ ಮಾಡಿ, ನಿವೇಶನ ಕೊಡಲಿ. ನಮ್ಮ ಗ್ರಾಮಸ್ಥರು ಇನ್ನು ಪ್ರೊಟೆಸ್ಟ್ ಮಾಡಿಲ್ಲ. ರೈತರಿಗೆ ಅನ್ಯಾಯ ಕೆಲವರು ಅಂತಾ ಬರೀ ಬಿಲ್ಡಪ್ ಕೊಡ್ತಿದ್ದಾರೆ. ದಯಮಾಡಿ ನಮ್ಮ ಸೋಂಪುರ ಗ್ರಾಮಕ್ಕೆ ಬಂದು ರೈತರ ಕಷ್ಟ ನೋಡಿ. ನಿವೇಶನಗಳು ಸಿಗದೇ ತೊಂದರೆ ಆಗ್ತಿದೆ, ಪರಿಹಾರವೂ ಸಿಗ್ತಿಲ್ಲ. ಡಿಕೆ ಶಿವಕುಮಾರ್ ಅವರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಇದನ್ನೂಓದಿ:ಶಾಸಕರು ದೂರು ನೀಡಿದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ: ಸಿಎಂ ಸಿದ್ದರಾಮಯ್ಯ