ಬೆಂಗಳೂರು: ರಾಜ್ಯ ಸರ್ಕಾರ ಅನ್ ಲಾಕ್ ಮಾರ್ಗಸೂಚಿ ರೂಪಿಸಿದೆ, ಇಲ್ಲಿಯೂ ನಮಗೆ ಒಳಗೆ ಕುಳಿತು ತಿನ್ನುವ ವ್ಯವಸ್ಥೆಗೆ ಅವಕಾಶ ಕೊಡಲಿಲ್ಲ. ಕುಳಿತು ತಿನ್ನುವ ವ್ಯವಸ್ಥೆಗೆ ಕೆಲವು ನಿರ್ಬಂಧಗಳಿಗೆ ಅನುಮತಿ ಕೊಡಬಹುದಿತ್ತು. ಬೇಸತ್ತು ಹೋದ ಬಹಳಷ್ಟು ಉದ್ದಿಮೆದಾರರಿಗೆ ಸ್ವಲ್ಪವಾದರೂ ಉಸಿರಾಡಲು ಅವಕಾಶವಾಗುತ್ತಿತ್ತು. ಆದರೆ, ಸರ್ಕಾರ ಬಹುಶಃ ಉದ್ದಿಮೆದಾರನ ಉಸಿರು ಬಿಗಿಯುವ ಕೆಲಸಕ್ಕೆ ಮುಂದಾಗಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಉದ್ದಿಮೆದಾರರ ಸಂಘದ ಅಧ್ಯಕ್ಷ ಪಿ.ಸಿ ರಾವ್ ಹೇಳಿದರು.
ಕಳೆದ ಒಂದೂವರೆ ವರ್ಷದಿಂದ ಕೋವಿಡ್-19 ಸಾಂಕ್ರಾಮಿಕ ಹೋಟೆಲ್ ಉದ್ದಿಮೆಯನ್ನು ಅಪಾರ ಸಂಕಷ್ಟಕ್ಕೆ ಸಿಲುಕಿಸಿದೆ. ಅದರಲ್ಲೂ ಎರಡನೇ ಅಲೆ ಕರ್ನಾಟಕದ ಹೋಟೆಲ್ ಉದ್ದಿಮ ಮತ್ತೆ ಚೇತರಿಸಿಕೊಳ್ಳಲಾಗದಷ್ಟು ನಷ್ಟಕ್ಕೆ ದೂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅವಿದ್ಯಾವಂತರೂ ಸೇರಿದಂತೆ ಲಕ್ಷಾಂತರ ಮಂದಿಗೆ ಜಾತಿ, ಮತ, ಪಂಗಡ, ಭಾಷೆ ಮತ್ತು ಇತರ ಯಾವುದೇ ಭೇದಭಾವಗಳಿಲ್ಲದೆ ಉದ್ಯೋಗ ನೀಡಿರುವ ಮತ್ತು ಅದೇ ರೀತಿಯಲ್ಲಿ ಸಮಾನತೆಯ ತಳಹದಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಕ್ಷೇತ್ರವಿದು. ಆದರೆ ಈಗ ಹೋಟೆಲ್ ಕಾರ್ಮಿಕವರ್ಗ ನಿರ್ಗತಿಕವಾಗಿದೆ. ಉದ್ದಿಮೆದಾರರು ದಾರಿಕಾಣದಾಗಿದ್ದಾರೆ. ಅನೇಕ ಹೋಟೆಲುಗಳು ಇನ್ನು ತೆರೆಯುವ ಭರವಸೆಯನ್ನೂ ಕಳೆದುಕೊಂಡುಬಿಟ್ಟಿವೆ ಎಂದು ಆತಂಕ ಹೊರ ಹಾಕಿದರು.
ಇಂತಹ ಅಸಹಾಯಕ ಪರಿಸ್ಥಿತಿಯಲ್ಲಿ, ನಮ್ಮ ಆತಿಥ್ಯ ಉದ್ಯಮದ ಸಂಕಷ್ಟಗಳ ನಿವಾರಣೆಗಾಗಿ ಸರ್ಕಾರ ಇದುವರೆಗೂ ಯಾವುದೇ ರೀತಿಯಲ್ಲಿ ಸಹಾನುಭೂತಿ ತೋರದಿರುವುದು ವಿಷಾದನೀಯ. ಇಷ್ಟೆಲ್ಲದರ ಸಂಕಷ್ಟಗಳ ಮಧ್ಯೆ, ನಮ್ಮ ಉದ್ಯಮ ಸದಾ ಸರ್ಕಾರದ ಜೊತೆಗೆ ಕೈ ಜೋಡಿಸಿ, ಅಗತ್ಯತೆಗೆ ಸ್ಪಂದಿಸುತ್ತಾ ಬಂದಿದೆ. ವಿಶೇಷವಾಗಿ, ಕೋವಿಡ್ ಸ್ಟೆಪ್ ಡೌನ್ ಆಸ್ಪತ್ರೆಯಾಗಿ, ಐಸೊಲೇಷನ್ ಕೇಂದ್ರಗಳಾಗಿ ಹಾಗೂ ಬಹಳಷ್ಟು ಜನರಿಗೆ ಊಟದ ವ್ಯವಸ್ಥೆ ಕಲ್ಪಿಸುವುದರಲ್ಲಿ ರಾಜ್ಯಾದ್ಯಂತ ಕಾರ್ಯಮುಖರಾಗಿದ್ದೆವು ಎಂದು ಲಾಕ್ ಡೌನ್ ಸಂದರ್ಭದ ಕೆಲಸ ಉದ್ಯಮದ ಕೆಲಸ ಕಾರ್ಯಗಳನ್ನು ವಿವರಿಸಿದರು.
ರಾಜ್ಯದಲ್ಲಿ ವರ್ಷಕ್ಕೆ 24,000 ಕೋಟಿ ಆದಾಯವನ್ನು ಆಥಿತ್ಯೋದ್ಯಮ ನೀಡುತ್ತಿದೆ. ಆದಾಗ್ಯೂ, ಹೋಟೆಲ್ ಉದ್ಯಮವೆಂದರೆ ಈ ರೀತಿಯ ಕಡೆಗಣಿಕೆ ಏಕೆ? ಈ ನಿಟ್ಟಿನಲ್ಲಿ ಬಹಳಷ್ಟು ಬಾರಿ ಸರ್ಕಾರಕ್ಕೆ, ಮುಖ್ಯಮಂತ್ರಿಯಿಂದ ಹಿಡಿದು ಎಲ್ಲಾ ಸಂಬಂಧಿಸಿದ ಮಂತ್ರಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಕೋರಿ ಆಗಿದೆ. ಆದರೂ ಯಾವುದೇ ರೀತಿಯ ಸಹಾಯ ನೀಡುವ ಸೂಚನೆಯೂ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಗಾಯದ ಮೇಲೆ ಬರೆ ಎಳೆದ ಹಾಗೆ, ಈಗ ವಿದ್ಯುತ್ ಬಿಲ್ಲಿನಲ್ಲಿ ಏಪ್ರಿಲ್ 1 ರಿಂದ ಪ್ರತಿ ಯೂನಿಟ್ ಗೆ 30 ಪೈಸೆ ಏರಿಕೆ ಘೋಷಣೆ ಮಾಡಿದ್ದಾರೆ. ಇಂಧನ, ಪೆಟ್ರೋಲ್, ಡೀಸೆಲ್ ಎಲ್ಲದರ ಬೆಲೆಯೂ ಗಗನ ಮುಖವಾಗಿದೆ. ಈಗ ಅಬಕಾರಿ ಸನ್ನದು ಶುಲ್ಕ ನವೀಕರಣ ಸಮಯ ಹತ್ತಿರ ಬಂದಿದ್ದು ಲಕ್ಷಗಟ್ಟಲೆ ಮುಂಗಡವಾಗಿ ಪಾವತಿಸಬೇಕಾಗಿದೆ ಎಂದರು.