ಬೆಂಗಳೂರು: ಕಪ್ಪತ್ತಗುಡ್ಡ ವನ್ಯಜೀವಿ ಧಾಮ ಸ್ಥಾನ ರದ್ದು ಮಾಡುವ ಪ್ರಸ್ತಾಪದಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಿಂದೆ ಸರಿದಿದ್ದು, ಉಪ ಚುನಾವಣೆ ಇರುವ ಕಾರಣದಿಂದ ಪಕ್ಷಕ್ಕೂ ಹಿನ್ನಡೆಯಾಗದಿರಲು ಈ ನಿಲುವು ತಳೆದಿದ್ದಾರೆ ಎನ್ನಲಾಗಿದೆ.
ಇಂದು ಮುಖ್ಯಮಂತ್ರಿಗಳು 12 ನೇ ರಾಜ್ಯ ವನ್ಯಜೀವಿ ಮಂಡಳಿಯ ಸಭೆ ನಡೆಸಿದರು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ವನ್ಯಜೀವಿ ಮಂಡಳಿ ಅಧಿಕಾರಿಗಳು ಭಾಗಿಯಾಗಿದ್ದು ಮಂಡಳಿ ಪ್ರಗತಿ ಸಂಬಂಧ ಸಿಎಂ ಚರ್ಚೆ ನಡೆಸಿದರು.
ಆದರೆ ಇಂದಿನ ವನ್ಯಜೀವಿ ಮಂಡಳಿ ಸಭೆಯಲ್ಲಿ ಕಪ್ಪತ್ತಗುಡ್ಡ ವನ್ಯಜೀವಿ ಧಾಮ ಸ್ಥಾನಮಾನ ರದ್ದು ಪ್ರಸ್ತಾವನೆ ಸಂಬಂಧ ಸಿಎಂ ಬಿಎಸ್ವೈ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ಈ ಹಿಂದೆ ಕಪ್ಪತ್ತಗುಡ್ಡ ವನ್ಯಜೀವಿ ಧಾಮ ಕುರಿತು ಮಾಡಿದ ಕ್ರಮದ ಬಗ್ಗೆ ವನ್ಯಜೀವಿ ಮಂಡಳಿ ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಎಂ ವನ್ಯಜೀವಿ ಧಾಮ ಸ್ಥಾನ ರದ್ದು ಮಾಡುವ ಬಗ್ಗೆ ಯಾವುದೇ ನಿರ್ಧಾರಕ್ಕೆ ಮುಂದಾಗಲಿಲ್ಲ. ರಾಜ್ಯದಲ್ಲಿ ಉಪ ಚುನಾವಣೆ ನಿಗದಿಯಾಗಿದ್ದು, ಒಂದು ವೇಳೆ ಈ ಬಗ್ಗೆ ಸರ್ಕಾರ ಏನಾದರೂ ತೀರ್ಮಾನ ಮಾಡಿದರೆ ಚುನಾವಣೆಯಲ್ಲಿ ಹಿನ್ನಡೆ ಆಗುವ ಆತಂಕದಿಂದ ಇಂದಿನ ಸಭೆಯಲ್ಲಿ ಯಾವುದೇ ತೀರ್ಮಾನ ಮಾಡಲಿಲ್ಲ ಎನ್ನಲಾಗಿದೆ.
ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು ಆನೆಗಳು ಗ್ರಾಮಗಳಿಗೆ, ರೈತರ ಹೊಲಗಳಿಗೆ ಬರದಂತೆ ರೈಲ್ವೇ ಹಳಿಗಳನ್ನು ಹಾಕಲಾಗುತ್ತಿದೆ ಹಾಗಾಗಿ ಇತ್ತೀಚೆಗೆ ಆನೆಗಳು ಹೊಲಗಳಿಗೆ ಬರುವುದು ಕಡಿಮೆಯಾಗಿದೆ ಅಂತ ಹೇಳಿದರು ಇನ್ನು ಆನೆ ಹಿಮ್ಮಟ್ಟಿಸುವ ಗಾರ್ಡ್ ಗಳ ಸಂಬಳ ಹೆಚ್ಚಿಸುವಂತೆ ಎಲ್ಲಾ ಅರಣ್ಯಧಿಕಾರಿಗಳು ಮನವಿ ಮಾಡಿದರು. ಇದಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದರು.
ಇದರ ಜೊತೆ ಕಾಡುಗಳಲ್ಲಿ ಇರುವ ರಸ್ತೆಗಳನ್ನು ಅಭಿವೃದ್ಧಿ ಮಾಡುವಂತೆ ಸೂಚಿಸಲಾಯಿತು ಪ್ರಾಣಿಗಳ ಹಲ್ಲೆಯಿಂದ ಸಾರ್ವಜನಿಕರು ಮೃತಪಟ್ಟರೆ ₹ 10 ಲಕ್ಷ ಪರಿಹಾರಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದರು.