ಬೆಂಗಳೂರು : ರಾಜ್ಯ ಒಕ್ಕಲಿಗರ ಸಂಘಕ್ಕೆ ನಾಳೆ (ಡಿ.12ರಂದು) ಚುನಾವಣೆ ನಡೆಯಲಿದ್ದು, ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಂಘದ ಅಧ್ಯಕ್ಷ ಸ್ಥಾನ ಗಿಟ್ಟಿಸುವ ಹಿನ್ನೆಲೆಯಲ್ಲಿ ಹಲವು ಅಭ್ಯರ್ಥಿಗಳು ತಮ್ಮದೇ ಸಿಂಡಿಕೇಟ್ ರಚಿಸಿಕೊಂಡಿದ್ದು, ತಾವು ಗೆಲ್ಲುವ ಜತೆಗೆ ತಮ್ಮವರನ್ನೂ ಗೆಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ಹರಸಾಹಸ ಮಾಡುತ್ತಿದ್ದು, ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಿಟ್ಟಿದೆ. ಸಂಘದಲ್ಲಿ ಗೆಲುವು ಸಾಧಿಸುವ ಮೂಲಕ ಒಕ್ಕಲಿಗ ಸಮುದಾಯದಲ್ಲಿ ಗುರುತಿಸಿಕೊಳ್ಳುವ ಉಮೇದಿನಲ್ಲಿ ಹಲವು ಘಟಾನುಘಟಿ ನಾಯಕರು ಅಖಾಡಕ್ಕೆ ಇಳಿದಿದ್ದಾರೆ.
ಮತದಾರರನ್ನು ಸೆಳೆಯಲು ವಿಧಾನಸಬೆ ಚುನಾವಣೆಯನ್ನೂ ಮೀರಿಸುವ ರೀತಿಯಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಹಣ, ಒಡವೆ, ಗಿಫ್ಟ್, ಬಾಡೂಟ ಸೇರಿದಂತೆ ವಿವಿಧ ಆಮಿಷಗಳನ್ನು ಒಡ್ಡುತ್ತಿರುವ ಅಭ್ಯರ್ಥಿಗಳು ತಲಾ 2ರಿಂದ 3 ಕೋಟಿ ಹಣ ಖರ್ಚು ಮಾಡುತ್ತಿರುವ ಮಾತು ಕೇಳಿ ಬರುತ್ತಿದೆ. ಅಲ್ಲದೇ, ಇಡೀ ಬಾರ್, ರೆಸಾರ್ಟ್ ಹಾಗೂ ಛತ್ರಗಳನ್ನೇ ಮತದಾರರ ಔತಣಕೂಟಗಳಿಗೆ ಬುಕ್ ಮಾಡುತ್ತಿರುವ ಮಾತುಗಳೂ ಕೇಳಿಬರುತ್ತಿವೆ.
ಅಖಾಡದಲ್ಲಿರುವ ಗಣ್ಯರು :
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಮಂಡಳಿ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಹಲವು ಘಟಾನುಘಟಿ ಮುಖಂಡರಿದ್ದಾರೆ. ಅವರಲ್ಲಿ ಪ್ರಮುಖವಾಗಿ ಮೇಲ್ಮನೆ ಬಿಜೆಪಿ ಸದಸ್ಯ ಅ. ದೇವೇಗೌಡ, ನಿವೃತ್ತ ಕುಲಪತಿ ಕೆ. ನಾರಾಯಣಗೌಡ, ವೈದ್ಯರಾದ ಡಾ. ಆಂಜಿನಪ್ಪ , ಮಾಜಿ ನಿರ್ದೇಶಕ ಪ್ರೊ. ನಾಗರಾಜ್, ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಕೆಂಚಪ್ಪಗೌಡ, ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್, ವಕೀಲ ಎನ್.ಎಂ. ಸೊಣ್ಣೇಗೌಡ ಮತ್ತಿತರರು ತಮ್ಮದೇ ಸಿಂಡಿಕೇಟ್ ಮಾಡಿಕೊಂಡು ಸ್ಪರ್ಧೆಗಿಳಿದಿದ್ದಾರೆ.
ಈ ಮುಖಂಡರನ್ನು ಗೆಲ್ಲಿಸಲು ರಾಜಕೀಯ ಪಕ್ಷಗಳ ನಾಯಕರು ಕೂಡ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಬಣ ರಾಜಕೀಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ನುಸುಳಿರುವುದಕ್ಕೆ ಸಮುದಾಯದ ಹಿರಿಯ ಮುಖಂಡರಿಂದ ಆಕ್ಷೇಪವೂ ವ್ಯಕ್ತವಾಗಿದೆ. ಟೀಕೆಗೆ ತಲೆಕೆಡಿಸಿಕೊಳ್ಳದ ಅಭ್ಯರ್ಥಿಗಳು ಗೆಲುವಿನ ಕಡೆಗಷ್ಟೇ ನೋಡುತ್ತಿದ್ದಾರೆ.
35 ನಿರ್ದೇಶಕ ಸ್ಥಾನಗಳಿಗೆ 221 ಅಭ್ಯರ್ಥಿಗಳು :
ಸಂಘದ ನಿರ್ದೇಶಕ ಮಂಡಳಿಯಲ್ಲಿರುವ 35 ಹುದ್ದೆಗಳಿಗೆ ಒಟ್ಟು 221 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, 5.21 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇನ್ನು 35 ಸ್ಥಾನಗಳಲ್ಲಿ 15 ಸ್ಥಾನಗಳಿಗೆ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಿಂದ ಆಯ್ಕೆ ನಡೆಯಲಿದೆ.
ಈ 15 ಸ್ಥಾನಗಳಿಗೆ 141 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಉಳಿದ 20 ನಿರ್ದೇಶಕ ಸ್ಥಾನಗಳಲ್ಲಿ ಮೈಸೂರಿನಿಂದ 3, ಮಂಡ್ಯ 4, ಹಾಸನ 3, ತುಮಕೂರು 2, ಚಿತ್ರದುರ್ಗ 1, ಕೋಲಾರ-ಚಿಕ್ಕಬಳ್ಳಾಪುರ 3, ದಕ್ಷಿಣ ಕನ್ನಡ-ಉಡುಪಿ 1, ಕೊಡಗು 1, ಶಿವಮೊಗ್ಗ- ಉತ್ತರ ಕನ್ನಡ 1, ಚಿಕ್ಕಮಗಳೂರಿಂದ 1 ಸ್ಥಾನಕ್ಕೆ ಆಯ್ಕೆ ನಡೆಯಲಿದೆ.
ಮತಗಟ್ಟೆಗಳು :
ರಾಜ್ಯದ 11 ಜಿಲ್ಲೆಗಳಿಂದ 35 ಸ್ಥಾನಗಳಿಗೆ ಆಯ್ಕೆ ಮಾಡಲು ಮತದಾನಕ್ಕೆ ಒಟ್ಟು 1,049 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದ್ದು, ಮತ ಚಲಾಯಿಸಿದವರ ಎಡಗೈ ಕಿರು ಬೆರಳಿಗೆ ಶಾಹಿ ಹಾಕಲಾಗುತ್ತದೆ.
ಒಟ್ಟು 5,20,721 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮತ ಎಣಿಕೆಯು ಡಿ.15ರ ಬೆಳಗ್ಗೆ 9 ಗಂಟೆಯಿಂದ ಆರಂಭವಾಗಲಿದೆ. ಬೆಂಗಳೂರಿನ ಮತಗಳನ್ನು ಅರಮನೆ ಮೈದಾನದಲ್ಲಿ ಎಣಿಕೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಉಳಿದ ಜಿಲ್ಲೆಗಳ ಮತ ಎಣಿಕೆಯು ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಚುನಾವಣಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದ್ದಾರೆ.