ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣಾ ಸಿದ್ಧತೆ ಆರಂಭಿಸಿರುವ ಕೇಸರಿ ಪಡೆ, ಅಧಿಕಾರದ ಗದ್ದುಗೆ ಉಳಿಸಿಕೊಳ್ಳಲು ಪೂರಕವಾಗಿ ಕೇಶವಕೃಪಾದಿಂದ ಬಂದ ಸಂದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯದ ನಾಯಕರಿಗೆ ರಾಜ್ಯ ಪ್ರಶಿಕ್ಷಣ ವರ್ಗದಲ್ಲಿ ಸೂಚನೆ ನೀಡಲಾಗಿದೆ.
ಬಿಜೆಪಿ ಪಕ್ಷದ ರಾಜ್ಯ ಪದಾಧಿಕಾರಿಗಳು, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು, ಜಿಲ್ಲಾ ಅಧ್ಯಕ್ಷರು ಮತ್ತು ಜಿಲ್ಲಾ ಪ್ರಭಾರಿಗಳಿಗೆ ರಾಜ್ಯ ಬಿಜೆಪಿ ನಾಯಕರು ಸಂಘದ ನೀತಿಪಾಠಗಳನ್ನು ಬೋಧಿಸಿದ್ದು, ಪ್ರತಿಪಕ್ಷಗಳ ಟೀಕೆಗಳನ್ನು ಸಮರ್ಥವಾಗಿ ಎದುರಿಸಿ, ಸರ್ಕಾರವನ್ನು ಸಮರ್ಥಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಏಳದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಮೂರು ದಿನಗಳ ರಾಜ್ಯ ಪ್ರಶಿಕ್ಷಣ ವರ್ಗದಲ್ಲಿ ಪಕ್ಷದ ತತ್ತ್ವ, ಸಿದ್ಧಾಂತಗಳ ಭೂಮಿಕೆ ಸಂಬಂಧ ಮಾರ್ಗದರ್ಶನ ನೀಡಿದ್ದು, ಶಾರೀರಿಕ ಮತ್ತು ಬೌದ್ಧಿಕವಾಗಿ ಗುಣಮಟ್ಟದ ಕಾರ್ಯಕರ್ತರನ್ನು ಸಿದ್ಧಗೊಳಿಸುವ ನಿಟ್ಟಿನಲ್ಲಿ ಅಗತ್ಯ ತರಬೇತಿ ನೀಡಲಾಯಿತು. ಈ ವೇಳೆ ಸಂಘ ಪರಿವಾರದಿಂದ ಬಂದ ಸಂದೇಶಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿ ಜವಾಬ್ದಾರಿ ಹೊತ್ತ ಎಲ್ಲರೂ ತಪ್ಪದೇ ಸಂಘದ ಸಲಹೆ ಪಾಲಿಸಬೇಕು ಎಂದು ತಾಕೀತು ಮಾಡಲಾಯಿತು ಎನ್ನಲಾಗಿದೆ.
ಸಂಘದ ಸಲಹೆ ಪಾಲನೆ ಟಾಸ್ಕ್: ರಾಜ್ಯ ಬಿಜೆಪಿ ಸರ್ಕಾರದ ಇಮೇಜ್ ಹೆಚ್ಚಿಸುವ ಕೆಲಸ ಮಾಡಬೇಕು, ಸರ್ಕಾರ ಜಾರಿಗೆ ತಂದಿರುವ ಜನಪರ ಕಾರ್ಯಕ್ರಮಗಳ ಮಾಹಿತಿಯನ್ನು ಜನರಿಗೆ ನೀಡಬೇಕು, ಯೋಜನೆಗಳನ್ನು ಜನರಿಗೆ ತಲುಪಿಸಬೇಕು, ಕಾರ್ಯಕರ್ತರನ್ನು ಈ ಕಾರ್ಯಕ್ಕೆ ಸಮರ್ಥವಾಗಿ ಬಳಸಿಕೊಳ್ಳಬೇಕು, ಈ ಬಗ್ಗೆ ಟಾಸ್ಕ್ ನೀಡಿ ಮುಂದಿನ ನಾಲ್ಕೈದು ತಿಂಗಳು ಅವಿಶ್ರಾಂತವಾಗಿ ಕೆಲಸ ಮಾಡಬೇಕು ಎಂದು ಸಭೆಯಲ್ಲಿ ಸೂಚನೆ ನೀಡಲಾಯಿತು.
ಇದನ್ನೂ ಓದಿ: ಮೊದಲು ದೇಶ, ನಂತರ ಪಾರ್ಟಿ ಎಂಬ ಧ್ಯೇಯ ಹೊಂದಿರುವ ಏಕೈಕ ಪಾರ್ಟಿ ಬಿಜೆಪಿ: ಸಿಎಂ ಬಸವರಾಜ ಬೊಮ್ಮಾಯಿ
ಹಳೆ ಮೈಸೂರು ಟಾರ್ಗೆಟ್: ಹಳೆ ಮೈಸೂರು ಪ್ರಾಂತ್ಯಕ್ಕೆ ಈ ಬಾರಿ ವಿಶೇಷ ಆದ್ಯತೆ ನೀಡಬೇಕು ಎಂದು ಸಂಘದಿಂದ ಬಂದ ಸೂಚನೆ ಕುರಿತು ಸಭೆಯಲ್ಲಿ ಹೆಚ್ಚಿನ ಚರ್ಚೆ ನಡೆಸಲಾಯಿತು. ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ, ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆ, ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ವಿಷಯವನ್ನು ಲಾಭ ಮಾಡಿಕೊಳ್ಳಬೇಕು ಎನ್ನುವ ಕುರಿತು ಚರ್ಚಿಸಲಾಗಿದೆ.
ಮೀಸಲಾತಿ, ಕೆಂಪೇಗೌಡ ಪ್ರತಿಮೆ ವಿಷಯಗಳನ್ನು ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪ್ರಸ್ತಾಪಿಸಿ, ಇದರ ಲಾಭ ಪಕ್ಷಕ್ಕಾಗುವಂತೆ ಮಾಡಬೇಕು, ಈ ಸಂಬಂಧ ಪದಾಧಿಕಾರಿಗಳು ಬೂತ್ ಮಟ್ಟದ ಪ್ರಮುಖರಿಗೆ ಅಗತ್ಯ ಸಲಹೆ ಸೂಚನೆ ನೀಡಬೇಕು ಎಂದು ಪ್ರಶಿಕ್ಷಣ ವರ್ಗದಲ್ಲಿ ನಿರ್ದೇಶನ ಮಾಡಿದ್ದು, ಹಳೆ ಮೈಸೂರು ಭಾಗದಲ್ಲಿ ಟಾರ್ಗೆಟ್ 40 ಸ್ಥಾನದ ಗುರಿಯೊಂದಿಗೆ ಚುನಾವಣಾ ತಯಾರಿ ಆರಂಭಿಸಲು ಸೂಚಿಸಲಾಯಿತು. 150 ಕ್ಕೆ ಟಾರ್ಗೆಟ್ 40 ಬಹಳ ಮುಖ್ಯ ಎನ್ನುವ ವಿಷಯವನ್ನು ಸಂಘ ಪರಿವಾರದ ನಾಯಕರ ಸಲಹೆಯಂತೆ ಪದಾಧಿಕಾರಿಗಳಿಗೆ ತಿಳಿಸಿ ಮನದಟ್ಟು ಮಾಡಿಕೊಡಲಾಯಿತು.
ಇದನ್ನೂ ಓದಿ: ಬಿಎಸ್ವೈ ತವರು ಜಿಲ್ಲೆಯಲ್ಲಿ ರಾಜ್ಯ ಪ್ರಶಿಕ್ಷಣ ವರ್ಗ: ಶಿವಮೊಗ್ಗಕ್ಕೆ ತೆರಳಿದ ಬಿಜೆಪಿ ನಾಯಕರು
ಲಾಭವಿದ್ದರೆ ಮಾತ್ರ ಆಪರೇಷನ್: ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಸೇರುವವರ ಸಂಖ್ಯೆ ಹೆಚ್ಚಾಗುತ್ತದೆ, ಹಳೆ ಮೈಸೂರು ಭಾಗದಲ್ಲಿ ಪಕ್ಷದ ಬೆಳವಣಿಗೆಗೆ ಸೂಕ್ತ ನಾಯಕರನ್ನು ಸೇರಿಸಿಕೊಳ್ಳಬೇಕು. ಅನುಕೂಲವಾಗಲಿದೆ ಎಂದರೆ ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳಿ, ಕೆಲವೆಡೆ ಅನಗತ್ಯವಿದೆ. ಆದರೆ, ಇದು ಎಲ್ಲೆಡೆ ಅನಿವಾರ್ಯವಲ್ಲ ಎನ್ನುವುದನ್ನು ನೆನಪಿಡಿ ಎಂದು ಸಂಘದ ಸಲಹೆಯಂತೆ ಆಪರೇಷನ್ಗೆ ಕಡಿವಾಣ ಹಾಕುವ ಕುರಿತು ಸೂಚನೆ ನೀಡಲಾಯಿತು. ಪಕ್ಷ ಸೇರ್ಪಡೆಗೆ ಅನಗತ್ಯ ಆಶ್ವಾಸನೆ ನೀಡದೆ ಮೊದಲೇ ಪಕ್ಷದ ನಾಯಕರೊಂದಿಗೆ ಚರ್ಚಿಸಬೇಕು ಎಂದು ಸೂಚಿಸಲಾಯಿತು.
ಕೌಂಟರ್ ಕೊಡಿ: ಚುನಾವಣೆ ಸಮೀಪದಲ್ಲಿದೆ, ಈ ಸಂದರ್ಭದಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ನಿರಂತರವಾಗಿ ಸರ್ಕಾರದ ವಿರುದ್ಧ ಟೀಕೆಗಳು ಕೇಳಿ ಬರುತ್ತಿವೆ. ಪಕ್ಷದ ನಾಯಕರ ವಿರುದ್ಧ ನೇರ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ತಿರುಗೇಟು ನೀಡುವಲ್ಲಿ ನಾಯಕರು ಹಿಂದೆ ಬಿದ್ದಿದ್ದಾರೆ. ಸರ್ಕಾರದಲ್ಲಿರುವವರು ಮಾತ್ರ ಸಮರ್ಥನೆ ಮಾಡಿಕೊಂಡರೆ ಸಾಲಲ್ಲ, ಪಕ್ಷದ ನಾಯಕರು, ಕಾರ್ಯಕರ್ತರು ಕೂಡ ಪ್ರತಿಪಕ್ಷಗಳ ಆರೋಪಕ್ಕೆ ಕೌಂಟರ್ ಕೊಡಬೇಕು. ಆ ಮೂಲಕ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡುವುದನ್ನು ತಡೆಯಬೇಕು ಎಂದು ಸೂಚಿಸಲಾಯಿತು ಎನ್ನಲಾಗಿದೆ.
ಇದನ್ನೂ ಓದಿ: ಚುನಾವಣಾ ಅಖಾಡಕ್ಕೆ ಕೇಸರಿ ಪಡೆ ತಾಲೀಮು, ನ.25ರಿಂದ ರಾಜ್ಯ ಪ್ರಶಿಕ್ಷಣ ವರ್ಗ: ನಿರ್ಮಲ್ ಕುಮಾರ್ ಸುರಾನ
ಚಿಲುಮೆ ಗಂಭೀರವಾಗಿ ಪರಿಗಣಿಸಿ: ಮತದಾರರ ಪಟ್ಟಿ ಪ್ರಕರಣದಲ್ಲಿ ಪಕ್ಷದ ಪದಾಧಿಕಾರಿಗಳು ಬಹಳ ಎಚ್ಚರಿಕೆಯಿಂದ ಇರಬೇಕು, ಚುನಾವಣೆ ಸಮೀಪಕ್ಕೆ ಬಂದಾಗ ಇದರ ನಕಾರಾತ್ಮಕ ಪರಿಣಾಮ ಬಿಜೆಪಿ ಮೇಲೆ ಆಗುವಂತೆ ಮಾಡಲು ಪ್ರತಿಪಕ್ಷಗಳು ಸಜ್ಜಾಗಲಿವೆ. ಹಾಗಾಗಿ, ಈ ವಿಚಾರದಲ್ಲಿ ಮೈ ಮರೆಯದೆ ಪ್ರತಿಯೊಂದು ಹೇಳಿಕೆಗೂ ತಕ್ಷಣವೇ ಪ್ರತಿಕ್ರಿಯೆ ನೀಡಬೇಕು, ಸರ್ಕಾರದ ಪಾತ್ರವಿಲ್ಲ ಎನ್ನುವುದನ್ನು ಪದೇ ಪದೇ ಜನರ ಸ್ಮೃತಿಪಟಲದಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಲಾಯಿತು.
ಕಮಿಷನ್ ಆರೋಪದಲ್ಲಿ ಎಚ್ಚರಿಕೆ: ಸರ್ಕಾರದ ವಿರುದ್ಧ ಕೇಳಿ ಬಂದಿದ್ದ 40 ಪರ್ಸೆಂಟ್ ಕಮಿಷನ್ ಕೇಸ್ ಈಗ ಸದ್ದಿಲ್ಲದಂತಾಗಿದ್ದರೂ ಪಕ್ಷ ಈ ವಿಚಾರದಲ್ಲಿ ಮೈ ಮರೆಯಬಾರದು, ಯಾವಾಗ ಬೇಕಾದರೂ ಈ ವಿಷಯದ ಚರ್ಚೆ ಮತ್ತೆ ಮುನ್ನಲೆಗೆ ಬರಲಿದೆ. ಹಾಗಾಗಿ, ಇದಕ್ಕೆ ಕೌಂಟರ್ ನೀಡಲು ಸನ್ನದ್ಧರಾಗಿರಬೇಕು ಎಂದು ಸೂಚಿಸಲಾಯಿತು.