ಬೆಂಗಳೂರು : ಭಾರತೀಯ ರಿಸರ್ವ್ ಬ್ಯಾಂಕ್ನಿಂದ (ಆರ್‌ಬಿಐ) 2,000 ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್ಗಳಲ್ಲಿಯೂ ಈ ನೋಟುಗಳನ್ನು ತೆಗೆದುಕೊಳ್ಳದಂತೆ ಸೂಚನೆ ನೀಡಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸಂಸ್ಥೆಗಳು ನೋಟುಗಳನ್ನು ಪಡೆಯುವುದಾಗಿ ಸ್ಪಷ್ಟಪಡಿಸಿವೆ. ಭಾನುವಾರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸ್ಪಷ್ಟೀಕರಣ ನೀಡಿದ್ದು, ಕೆಎಸ್‌ಆರ್‌ಟಿಸಿ ಬಸ್ಗಳಲ್ಲಿ ನಿರ್ವಾಹಕರಿಗೆ 2,000 ರು ನೋಟುಗಳನ್ನು ತೆಗೆದುಕೊಳ್ಳಬಾರದು ಎಂದು ಆದೇಶಿಸಿಲ್ಲ ಎಂದು ಹೇಳಿದೆ.
ಸಾರಿಗೆ ಬಸ್ಗಳಲ್ಲಿ ಪ್ರಯಾಣಿಕರಿಂದ 2 ಸಾವಿರ ರೂಪಾಯಿಯ ನೋಟುಗಳನ್ನು ತೆಗೆದುಕೊಳ್ಳದಂತೆ ನಿರ್ವಾಹಕರಿಗೆ ಸೂಚಿಸಲಾಗಿದೆ ಎಂಬುದು ಸುಳ್ಳು. ಪ್ರಯಾಣಿಕರಿಂದ 2 ಸಾವಿರ ನೋಟುಗಳನ್ನು ಸಂಚಾರದ ವೇಳೆಯಲ್ಲಿ ನಿರ್ವಾಹಕರು ಸ್ವೀಕರಿಸುತ್ತಿದ್ದಾರೆ ಎಂದು ತಿಳಿಸಿದೆ.
ಹೊಸಕೋಟೆ ಘಟಕದಿಂದ ತಪ್ಪು ಆದೇಶ: ಬಿಎಂಟಿಸಿ ಕೇಂದ್ರ ಕಚೇರಿಯಿಂದ ಬಸ್ನಲ್ಲಿ ನಿರ್ವಾಹಕರು 2000 ರು ನೋಟುಗಳನ್ನು ತೆಗೆದುಕೊಳ್ಳಬಾರದು ಎಂದು ಯಾವುದೇ ಆದೇಶ ಹೊರಡಿಸಿಲ್ಲ. ಹೊಸಕೋಟೆ ಘಟಕದಿಂದ ಮಾತ್ರ ಈ ರೀತಿ ತಪ್ಪಾದ ಆದೇಶ ನೀಡಲಾಗಿತ್ತು. ತದನಂತರ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಮಾಹಿತಿ ನೀಡಿದೆ.
ನೋಟು ವಿನಿಮಯಕ್ಕೆ ಆತುರ ಬೇಡ: ಇನ್ನೊಂದೆಡೆ, ಎರಡು ಸಾವಿರ ರೂಪಾಯಿ ನೋಟನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹಿಂಪಡೆದಿದೆ. ಅದನ್ನು ವಿನಮಯ ಮಾಡಿಕೊಳ್ಳುವಲ್ಲಿ ಯಾವುದೇ ಆತುರ ಬೇಡ. ನೀಡಿರುವ ಗಡುವಿನ ದಿನಾಂಕದೊಳಗೆ ಹಣವನ್ನು ಬದಲಿಸಿಕೊಳ್ಳಲೇಬೇಕೆಂದಿಲ್ಲ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸೋಮವಾರ (ಮೇ 22-2023) ರಂದು ಹೇಳಿದ್ದರು. ಈ ಮೂಲಕ ನೋಟಿನ ಬದಲಾವಣೆಗೆ ನೀಡಲಾಗಿದ್ದ ಗಡುವು ವಿಸ್ತರಿಸುವ ಸುಳಿವನ್ನು ಅವರು ನೀಡಿದ್ದರು.
ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದ ಅವರು, ಎರಡು ಸಾವಿರ ರುಪಾಯಿ ವಿನಿಮಯಕ್ಕೆ ಸೆಪ್ಟೆಂಬರ್ 30 ಗಡುವು ನೀಡಲಾಗಿದೆ. ಅಂದರೆ ಬದಲಾವಣೆಗೆ ಇನ್ನೂ ನಾಲ್ಕು ತಿಂಗಳು ಸಮಯವಿದೆ. ಇವತ್ತಿನಿಂದ ಹಣ ಬದಲಿ ಆರಂಭವಾಗಿದೆ. ಜನರು ಹಣ ವಿನಿಮಯ ಮಾಡಿಕೊಳ್ಳಲು ಬ್ಯಾಂಕ್‌ಗಳಿಗೆ ಹೋಗುವ ಅಗತ್ಯವಿಲ್ಲ. ಈ ಪ್ರಕ್ರಿಯೆಯಲ್ಲಿ ಉದ್ಭವಿಸುವ ಎಲ್ಲಾ ಸಮಸ್ಯೆಗಳ ಬಗ್ಗೆ ಆರ್‌ಬಿಐ ಸೂಕ್ಷ್ಮವಾಗಿ ಗಮನ ಹರಿಸುವ ಕೆಲಸ ಮಾಡುತ್ತದೆ ಎಂದು ಹೇಳಿದ್ದರು.
ಯಾವುದೇ ಮುಖಬೆಲೆಯ ಹಣವನ್ನು ಹಿಂತೆಗೆದುಕೊಳ್ಳುವ ನಿರ್ಧಾರವು ರಿಸರ್ವ್ ಬ್ಯಾಂಕ್‌ನ ಕರೆನ್ಸಿ ನಿರ್ವಹಣಾ ಕಾರ್ಯಾಚರಣೆಗಳ ಭಾಗವಾಗಿದೆ. ಇದು ಕ್ಲೀನ್ ಆರ್ಥಿಕತೆ ನೀತಿಗೆ ಅನುಗುಣವಾಗಿರುತ್ತದೆ. ಎಲ್ಲ ಪ್ರಕ್ರಿಯೆಗಳು ಸುಗಮವಾಗಿ ಸಾಗಲು ದಿನಾಂಕವನ್ನು ನಿಗದಿ ಮಾಡಲಾಗಿದೆ. ಈಗ ಚಲಾವಣೆಯಲ್ಲಿರುವ ಹೆಚ್ಚಿನ 2 ಸಾವಿರ ಮುಖಬೆಲೆಯ ನೋಟುಗಳು ಸೆಪ್ಟೆಂಬರ್ 30 ರೊಳಗೆ ಆರ್‌ಬಿಐಗೆ ಹಿಂತಿರುಗಲಿವೆ ಎಂದು ದಾಸ್ ತಿಳಿಸಿದ್ದರು.
ಈಗಾಗಲೇ ಪೆಟ್ರೋಲ್ ಪಂಪ್‌ಗಳಲ್ಲಿ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದು ಹೆಚ್ಚಾಗಿದೆ. ಇದಕ್ಕಾಗಿ ಇತರ ಮುಖಬೆಲೆಯ ನೋಟುಗಳನ್ನು ಸಾಕಷ್ಟು ದಾಸ್ತಾನು ಮಾಡಲಾಗುತ್ತಿದೆ. ಇಂದಿನಿಂದ ಬ್ಯಾಂಕ್‌ಗಳಲ್ಲಿ ಎರಡು ಸಾವಿರದ ನೋಟುಗಳ ವಿನಿಮಯ ಆರಂಭವಾಗಿದೆ. ಜನರನ್ನು ಅವಸರಕ್ಕೆ ಈಡುಮಾಡುವುದು ಬೇಡ ಎಂದು ಅವರು ಸಲಹೆ ನೀಡಿದ್ದರು.
ನೋಟುಗಳ ನಿರಾಕರಣೆ ಬೇಡ: 2,000 ನೋಟುಗಳನ್ನು ಹಿಂಪಡೆಯಲು ಆದೇಶ ನೀಡಲಾಗಿದೆ. ಆದರೂ ಅವುಗಳು ಈಗಲೂ ಕಾನೂನುಬದ್ಧವಾಗಿವೆ. ವ್ಯಾಪಾರ ಹಾಗೂ ವ್ಯವಹಾರದಲ್ಲಿ ಈ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಬಾರದು. ನೋಟುಗಳನ್ನು ಬ್ಯಾನ್ ಮಾಡಲಾಗಿದೆ ಎಂಬ ಕಾರಣಕ್ಕಾಗಿ ಅವುಗಳನ್ನು ನಿರಾಕರಣೆ ಮಾಡುವುದು ಬೇಡ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ದೇಶಾದ್ಯಂತ 2,000ದ ನೋಟು ಬದಲಾವಣೆ ಆರಂಭ: ಮೊದಲ ದಿನ ಕಾಣದ ಜನಜಂಗುಳಿ