ಮಹದೇವಪುರ: ಅಪ್ಪಟ ಗ್ರಾಮೀಣ ಕ್ರೀಡೆ ಖೋ-ಖೋ ರಾಜ್ಯದ ಮಟ್ಟದ ಪಂದ್ಯಾವಳಿಗಳಿಗೆ ಚಾಲನೆ ದೊರೆತಿದೆ. ಕ್ರೀಡೆಗಳಲ್ಲಿ ಉತ್ತಮ ಪ್ರತಿಭೆ ಹೊಂದಿರುವ ಕ್ರೀಡಾ ಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇ.5 ರಷ್ಟು ಮೀಸಲಾತಿ ನೀಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈಗಾಗಲೇ ಮನವಿ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆಯ ಛೇರ್ಮನ್ ಹಾಗೂ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ ಹೇಳಿದರು.
ಕ್ಷೇತ್ರದ ವರ್ತೂರು ವಾರ್ಡ್ನ ಗುಂಜೂರು ಗ್ರಾಮದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆ ಮತ್ತು ಬೆಂಗಳೂರು ನಗರ ಜಿಲ್ಲಾ ಖೋ-ಖೋ ಸಂಸ್ಥೆಯ ಸಹಯೋಗದೊಂದಿಗೆ ಸಚಿವ ಅರವಿಂದ್ ಲಿಂಬಾವಳಿ ಅವರ ನೇತೃತ್ವದಲ್ಲಿ ರಾಜ್ಯ ಮಟ್ಟದ ಹೊನಳು ಬೆಳಕಿನ ಖೋ-ಖೋ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
2028ರ ಒಲಂಪಿಕ್ಸ್ಅನ್ನು ಪ್ರಧಾನಮಂತ್ರಿ ಮಿಷನ್ ಘೋಷಣೆ ಮಾಡಿದೆ. ಅದಕ್ಕೆ ಕರ್ನಾಟಕ ರಾಜ್ಯವನ್ನು ಸಜ್ಜು ಮಾಡಬೇಕಿದೆ. ಹಾಗಾಗಿ ಕ್ರೀಡಾ ಪ್ರಾಧಿಕಾರಕ್ಕೆ ವಿಶೇಷ ಸವಲತ್ತು ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ತಾಲೂಕಿಗೆ ಒಬ್ಬರು ತರಬೇತಿದಾರರನ್ನ, ಜಿಲ್ಲೆಗೆ ಒಬ್ಬ ಅನುಭವಿ ಕ್ರೀಡಾ ಅಧಿಕಾರಿಯನ್ನು ನೇಮಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಕ್ರೀಡಾಪಟುಗಳನ್ನು ಗುರುತಿಸಿ ಇನ್ನು 7 ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಆಟಕ್ಕೆ ಸಜ್ಜುಗೊಳಿಸಬೇಕೆಂದು ಕ್ರೀಡಾಪ್ರಾಧಿಕಾರ ಆಸೆ ಇಟ್ಟುಕೊಂಡಿದೆ ಎಂದು ಸಿಎಂ ಬಳಿ ತಿಳಿಸಿದ್ದೇನೆ. ಅವರು ಸಹ ಒಪ್ಪಿಕೊಂಡಿದ್ದಾರೆ. ಮುಂದಿನ ಬಜೆಟ್ನಲ್ಲಿ ಜಾರಿಗೆ ಬರಬಹುದು ಎಂದರು.
ಇದೇ ಮೊದಲ ಬಾರಿಗೆ ಬೆಂಗಳೂರು ಪೂರ್ವ ತಾಲೂಕಿನಲ್ಲಿ ಮಹದೇವಪುರ ಕ್ಷೇತ್ರ ಗುಂಜೂರಿನ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆ ವತಿಯಿಂದ ರಾಜ್ಯಮಟ್ಟದ ಅಂತರ್ ಜಿಲ್ಲಾ ಖೋ-ಖೋ ಪಂದ್ಯಾವಳಿ ಆರಂಭವಾಗಿದೆ. ಪುರುಷರು ಹಾಗೂ ಮಹಿಳಾ ವಿಭಾಗದಲ್ಲಿ ಇಂದಿನಿಂದ ಮೂರು ದಿನಗಳವರೆಗೆ ಈ ಪಂದ್ಯ ನಡೆಯಲಿದೆ.
ಪ್ರಥಮವಾಗಿ ರಾಜ್ಯ ಮಟ್ಟದಲ್ಲಿ ಖೋ-ಖೋ ಕ್ರೀಡೆ ಆಯೋಜಿಸಲಾಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 20 ಜಿಲ್ಲಾ ತಂಡಗಳು, 400 ಕ್ರೀಡಾಪಟುಗಳು 30 ಅಂಪೈರ್ಗಳು ಭಾಗವಹಿಸಿದ್ದಾರೆ. ಈ ಪಂದ್ಯಾವಳಿ ಪ್ರತಿಭೆಗಳ ಅನಾವರಣಕ್ಕೆ ಬೃಹತ್ ವೇದಿಕೆಯಾಗಿದೆ. ಇದೇ ತಿಂಗಳು ಮಹಾರಾಷ್ಟ್ರದಲ್ಲಿ ನಡೆಯುವ ಅಂತಾರಾಷ್ಟ್ರೀಯ ಪಂದ್ಯಾವಳಿಗೆ ಉತ್ತಮವಾಗಿ ಆಡುವ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗುತ್ತದೆ.
ಕಳೆದ ಐದಾರು ವರ್ಷಗಳ ಹಿಂದೆ ರಾಷ್ಟ್ರೀಯ ಭೂಪಟದಲ್ಲಿ ಕರ್ನಾಟಕ ಎರಡು ಮತ್ತು ಮೂರನೇ ಸ್ಥಾನದಲ್ಲಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಏಳು ಎಂಟನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಪ್ರಥಮ ಸ್ಥಾನದಲ್ಲಿ ಕಾಣಿಸಬೇಕು. ಅದಕ್ಕೆ ನಮ್ಮ ಸರ್ಕಾರ ಮತ್ತು ಕ್ರೀಡಾಪಟುಗಳ ಪೋಷಕರು ಕ್ರೀಡೆಯನ್ನು ಉತ್ತೇಜಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬೆಂಗಳೂರು ಪೂರ್ವ ತಾಲೂಕು ದಂಡಾಧಿಕಾರಿ ಅಜಿತ್ ರೈ, ರಾಜ್ಯ ಖೋ ಖೋ ಸಂಸ್ಥೆಯ ರಾಜ್ಯ ಗೌರವ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ, ಕ್ಷೇತ್ರದ ಬಿಜೆಪಿ ಅಧ್ಯಕ್ಷ ಹಾಗೂ ಆಯೋಜಕ ಮನೋಹರ್ ರೆಡ್ಡಿ, ಮಾಜಿ ಪಾಲಿಕೆ ಸದಸ್ಯ ಪುಷ್ಪ ಮಂಜುನಾಥ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.