ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇದೆ ಎಂದು ಕಮಿಷನ್ ಆಸೆಗಾಗಿ ರಾಜ್ಯ ಸರ್ಕಾರ ಕೃತಕ ಅಭಾವ ಸೃಷ್ಟಿ ಮಾಡುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರಾದ ಕೆ.ಸಿ. ವೇಣುಗೋಪಾಲ ಮತ್ತು ಸುರ್ಜೇವಾಲಾಗೆ ಕಮಿಷನ್ ಕಳಿಸುವುದಕ್ಕಾಗಿ ಕೃತಕ ಅಭಾವ ಸೃಷ್ಟಿ ಮಾಡಿ ವಿದ್ಯುತ್ ಖರೀದಿ ಹೆಸರಿನಲ್ಲಿ ಕಮಿಷನ್ ಕಬಳಿಸಲು ಮುಂದಾಗಿದೆ ಎಂದು ಆರೋಪಿಸಿದರು.
1627 ಮಿಲಿಯನ್ ಯುನಿಟ್ ವಿದ್ಯುತ್ ಐದು ತಿಂಗಳಲ್ಲಿ ಖರೀದಿ ಮಾಡಿದ್ದಾರೆ. ಏಳು ಗಂಟೆ ವಿದ್ಯುತ್ ಕೊಟ್ಟರೂ 28 ಕೋಟಿ ಯುನಿಟ್ ವಿದ್ಯುತ್ ಬೇಕು. 25 ಕೋಟಿ ಯುನಿಟ್ ವಿದ್ಯುತ್ ಉತ್ಪಾದನೆ ಆಗಿದೆ ಎಂದು ಹೇಳ್ತಿದ್ದಾರೆ. ನಾನು ಹೇಳಿದಂತೆ ಇತರ ಮೂಲಗಳಿಂದ ಸರಿಯಾಗಿ ಉತ್ಪಾದನೆ ಮಾಡಿದ ಐದು ಕೋಟಿ ಯೂನಿಟ್ ಹೆಚ್ಚುವರಿ ವಿದ್ಯುತ್ ಬಳಕೆ ಮಾಡಬಹುದು. ಖರೀದಿ ಮಾಡುವುದು ಬೇಡ ನಾವೇ ಉತ್ಪಾದನೆ ಮಾಡಬಹುದು. ಗ್ಯಾರೆಂಟಿ ಕಡೆ ಗಮನ ಕೊಟ್ಟ ಕಾಂಗ್ರೆಸ್ನವರು ವಿದ್ಯುತ್ ಉತ್ಪಾದನೆ ಬಗ್ಗೆ ಮರೆತಿದ್ದಾರೆ. ಈಗ ಕಮಿಷನ್ಗಾಗಿ ಕೃತಕ ಅಭಾವ ಸೃಷ್ಟಿ ಮಾಡ್ತಿದ್ದಾರಾ? ನನ್ನ ಕಾಲದಲ್ಲಿ ಎರಡು ಅವಧಿಯಲ್ಲೂ ಒಂದು ರೂಪಾಯಿ ಅವ್ಯವಹಾರ ಆಗಿಲ್ಲ ಎಂದು ತಿಳಿಸಿದರು.
ಕೃತಕ ಸೃಷ್ಟಿ ಹಿಂದೆ ಇರೋದು ಸರ್ಕಾರ. ಜಾರ್ಜ್ಗೆ ದುಡ್ಡಿನ ಅವಶ್ಯಕತೆ ಇಲ್ಲ. ಪಾವಗಡ ಸೋಲಾರ್ ಪಾರ್ಕ್ ಯಾಕೆ ಸರ್ಕಾರ ಮಾಡಲಿಲ್ಲ. ಯಾರ ಬೇನಾಮಿಗಳು ಅದರ ಹಿಂದೆ ಇದ್ದಾರೆ. ಏಳು ನಿಮಿಷ ಅರ್ಜಿ ಸಲ್ಲಿಕೆಗೆ ಅವಕಾಶ ಇತ್ತು. 9.12 ರೂಪಾಯಿ ಗ್ರಾಹಕರಿಗೆ ಚಾರ್ಜ್ ಮಾಡ್ತಿದ್ದು, ಕರೆಂಟ್ ಈಗ ದುಬಾರಿ ಮಾಡಿದ್ದಾರೆ. ವಿದ್ಯುತ್ ಖರೀದಿ ಬಗ್ಗೆ ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಲಿ. ಪ್ರತಿ ತಿಂಗಳಿಗೆ ಎಷ್ಟು ಖರ್ಚು ಆಗ್ತಿದೆ ಎಂದು ಹೇಳಲಿ ಎಂದು ಆಗ್ರಹಿಸಿದರು.
ಯಾರಿಗೆ ಬೆಂಬಲ ನೀಡಲು ಹೋಗಿದ್ದೀರಿ - ಕುಮಾರಸ್ವಾಮಿ ಪ್ರಶ್ನೆ?: ರಾಜ್ಯದಲ್ಲಿ ಬರಗಾಲವಿದ್ದರೂ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯವನ್ನು ವೀಕ್ಷಣೆ ಮಾಡಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವರು ತೆರಳಿದ್ದಕ್ಕೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬರಗಾಲದ ನಡುವೆ ಐದಾರು ತಾಸು ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ಪೈಕಿ ಯಾರಿಗೆ ಬೆಂಬಲ ನೀಡಲು ಹೋಗಿದ್ದೀರಾ? ಎಂದು ಅವರು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪಾಕಿಸ್ತಾನಕ್ಕೆ ಬೆಂಬಲ ಕೊಡಲು ಹೋಗಿದ್ದರೋ? ಅಥವಾ ಆಸ್ಟ್ರೇಲಿಯಾಗೋ? ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನದ ಮ್ಯಾಚ್ ನೋಡಲು ಪಟಾಲಂ ಜೊತೆಗೆ ಹೋಗಿದ್ದಾರೆ. ಇಂಡಿಯಾ ಹಾಗೂ ಪಾಕಿಸ್ತಾನದ ನಡುವೆ ಮ್ಯಾಚ್ ಇದ್ದರೆ ಭಾರತಕ್ಕೆ ಸಪೋರ್ಟ್ ಕೊಡಲು ಹೋಗಿದ್ದಾರೆ ಎಂದು ಹೇಳಬಹುದು. ಆದರೆ, ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾದ ನಡುವಿನ ಪಂದ್ಯಕ್ಕೆ ಹೋಗುವ ಅಗತ್ಯ ಏನಿತ್ತು? ಎಂದು ಪ್ರಶ್ನಿಸಿದರು.
ಹಾಗಾದರೆ ಬೆಂಗಳೂರಿನಲ್ಲಿ ನಡೆದ ಪಂದ್ಯಕ್ಕೆ ಹೋಗುವುದು ತಪ್ಪೇ? ಎಂದು ಪ್ರಶ್ನಿಸಿದಾಗ, ಕ್ರಿಕೆಟ್ ನೋಡುವುದು ತಪ್ಪಲ್ಲ. ಆದರೆ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದೆ. ಮತ್ತೊಂದು ಕಡೆಯಲ್ಲಿ ವಿದ್ಯುತ್ ಸಮಸ್ಯೆ ಇದೆ. ಹೀಗಿರುವಾಗ ಏಳೆಂಟು ಗಂಟೆಗಳ ಕಾಲ ಹೋಗಿ ಮ್ಯಾಚ್ ನೋಡುವುದು ಸರಿಯಾ? ಎಂದು ಪ್ರಶ್ನಿಸಿದರು. ಶುಕ್ರವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವೆ ಕ್ರಿಕೆಟ್ ಪಂದ್ಯಾಟ ನಡೆದಿತ್ತು. ಈ ಪಂದ್ಯಾಟ ವೀಕ್ಷಣೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ತೆರಳಿದ್ದರು. ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು.
ಇದನ್ನೂ ಓದಿ : ರಾಜ್ಯದ ರಸ್ತೆ ಸಾರಿಗೆ ನಿಗಮಗಳಿಗೆ 5600 ಬಸ್ ಖರೀದಿ: ಮುಖ್ಯಮಂತ್ರಿ ಸೂಚನೆ