ಬೆಂಗಳೂರು: ಬಿಪಿಎಲ್ ಕಾರ್ಡ್ದಾರರಿಗೆ ಮಾಸಿಕ 10 ಕೆ.ಜಿ. ಅಕ್ಕಿ ವಿತರಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಲು ಚಿಂತಿಸುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ತಿಳಿಸಿದರು.
ರಾಜ್ಯದಲ್ಲಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು, ಅರ್ಜಿದಾರರ ಮನವಿ ಪರಿಶೀಲನೆ ಹಂತದಲ್ಲಿ ಇದ್ದಲ್ಲಿ ಮೇ ಮತ್ತು ಜೂನ್ ತಿಂಗಳಿಗೆ ಪ್ರತಿ ಮಾಸಿಕಕ್ಕೆ ಉಚಿತವಾಗಿ ನೀಡಲಾಗುವುದು. ಬಿಪಿಎಲ್ ಅರ್ಜಿದಾರರಿಗೆ 10 ಕೆಜಿ ಅಕ್ಕಿ ಉಚಿತ ಮತ್ತು ಎಪಿಎಲ್ ಕಾರ್ಡ್ ಅರ್ಜಿದಾರರಿಗೆ ಪ್ರತಿ ಕೆ.ಜಿ.ಗೆ 15 ರೂ.ಯಂತೆ 10 ಕೆ.ಜಿ ಅಕ್ಕಿ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಮೇ ಮತ್ತು ಜೂನ್ ತಿಂಗಳಿಗೆ ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳಿಗೆ ರಾಜ್ಯದಿಂದ ನೀಡಲಾಗುತ್ತಿರುವ 5 ಕೆ.ಜಿ. ಆಹಾರ ಧಾನ್ಯದ ಜೊತೆಗೆ 5 ಕೆ.ಜಿ ಅಕ್ಕಿ ಸೇರಿಸಿ ಒಟ್ಟು 10 ಕೆ.ಜಿ ಆಹಾರ ಧಾನ್ಯ ನೀಡಲಾಗುತ್ತದೆ. ಪ್ರತಿ ಪಡಿತರ ಚೀಟಿಗೆ 2 ಕೆ.ಜಿ ಗೋದಿ ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ಪಡಿತರ ಚೀಟಿಗೆ 35 ಕೆ.ಜಿ ಆಹಾರ ಧಾನ್ಯದ ಜೊತೆಗೆ 5 ಕೆ.ಜಿ ಅಕ್ಕಿ ಸೇರಿಸಿ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಇಲಾಖೆ ರಾಜ್ಯದಲ್ಲಿ ಕೋವಿಡ್ 19 ಎರಡನೇ ಅಲೆ ಹಿನ್ನಲೆಯಲ್ಲಿ ಪಡಿತರ ಚೀಟಿದಾರರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಿಸುವ ವಿಧಾನಗಳ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಅದರಂತೆ ಚಾಲ್ತಿಯಲ್ಲಿರುವ ಪಡಿತರ ಚೀಟಿಗಳಿಗೆ ನ್ಯಾಯಬೆಲೆ ಅಂಗಡಿಗಳು ಬಯೋಮೆಟ್ರಿಕ್ ಅಥವಾ ಆಧಾರ್ ಒಟಿಪಿ, ವಿನಾಯಿತಿ ಸೌಲಭ್ಯ ಮತ್ತು ಪೊರ್ಟೇಬಿಲಿಟಿ ಸೇರಿ ಯಾವುದಾದರು ಒಂದು ವಿಧಾನದಲ್ಲಿ ಪಡಿತರ ವಿತರಿಸಬಹುದು. ಸೀಲ್ ಡೌನ್ ಆಗಿರುವ ವಲಯದಲ್ಲಿ ಅನಿವಾರ್ಯತೆ ಇದ್ದರೆ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಮ್ಯಾನ್ಯುವಲ್ ಆಧಾರದಲ್ಲೂ ಪಡಿತರ ವಿತರಿಸಬಹುದಾಗಿದೆ. ಮಾಸಾಂತ್ಯದೊಳಗೆ ಮಾಹಿತಿಯನ್ನು ತಂತ್ರಾಶದಲ್ಲಿ ಅಪ್ ಲೋಡ್ ಮಾಡಬೇಕು ಎಂದು ಸೂಚಿಸಲಾಗಿದೆ.