ಬೆಂಗಳೂರು: ಜಿಲ್ಲಾಡಳಿತಗಳು ಕೋವಿಡ್ ಸಂಬಂಧ ಪ್ರತ್ಯೇಕ ಮಾರ್ಗಸೂಚಿ ಹೊರಡಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಬೆಂಗಳೂರಿನಿಂದ ಮೈಸೂರು ಜಿಲ್ಲೆಗೆ ಬರುವವರು ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರುವುದು ಕಡ್ಡಾಯ ಎಂಬ ಆದೇಶ ಹೊರಡಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಇಲಾಖಾ ಮುಖ್ಯಸ್ಯರು, ಜಿಲ್ಲಾಡಳಿತಗಳು, ಪ್ರಾಧಿಕಾರಗಳು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ನಗರ ಪಾಲಿಕೆಗಳು ಹಾಗೂ ಸ್ಥಳೀಯ ಸಂಸ್ಥೆಗಳು ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿತ ಯಾವುದೇ ಪ್ರತ್ಯೇಕ ಆದೇಶಗಳನ್ನು ತಮ್ಮ ಹಂತದಲ್ಲಿ ಹೊರಡಿಸತಕ್ಕದ್ದಲ್ಲ ಎಂದು ನಿರ್ದೇಶನ ನೀಡಿದೆ.
![ರಾಜ್ಯ ಸರ್ಕಾರದ ಆದೇಶ ಪ್ರತಿ](https://etvbharatimages.akamaized.net/etvbharat/prod-images/kn-bng-04-covidorders-cmnodmust-script-7201951_09042021000708_0904f_1617907028_55.jpg)
ಈಗಾಗಲೇ ಇಂತಹ ಆದೇಶ, ಸೂಚನೆಗಳನ್ನು ಹೊರಡಿಸಿದ್ದಲ್ಲಿ ತಕ್ಷಣವೇ ಹಿಂಪಡೆಯಬೇಕು. ಯಾವುದೇ ನಿರ್ದಿಷ್ಟ ಪ್ರಸ್ತಾವನೆಗಳು ಇದ್ದಲ್ಲಿ, ಅವುಗಳನ್ನು ಸರ್ಕಾರಕ್ಕೆ ಸಲ್ಲಿಸಿದಲ್ಲಿ ಪ್ರಸ್ತಾವನೆ ಕುರಿತು ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಸಮಾಲೋಚಿಸಿ ಕಂದಾಯ ಇಲಾಖೆಯಿಂದ (ವಿಪತ್ತು ನಿರ್ವಹಣೆ) ಸೂಕ್ತ ನಿರ್ದೇಶನ ನೀಡಲಾಗುವುದು. ಈ ಸೂಚನೆಗಳನ್ನು ಎಲ್ಲಾ ಪ್ರಾಧಿಕಾರಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಏಪ್ರಿಲ್ ಅಂತ್ಯಕ್ಕೆ ರಾಜಕೀಯ ಬದಲಾವಣೆ.. ಪಕ್ಷ ಬಯಸಿದ್ರೆ ಸಿಎಂ ಹುದ್ದೆಗೇರಲು ಸಿದ್ಧ: ಯತ್ನಾಳ್ ಹೊಸ ಬಾಂಬ್
ಕೋವಿಡ್-19 ಸೋಂಕು ಪ್ರಸರಣ ತಡೆಗಟ್ಟುವ ಸಂಬಂಧ ವಹಿಸಬೇಕಾದ ಕ್ರಮಗಳ ಕುರಿತು ಕಾರ್ಯವಿಧಾನದಲ್ಲಿ ಏಕರೂಪತೆ ಮತ್ತು ದೃಢತೆ ತರಲು ಕೇಂದ್ರ ಸರ್ಕಾರ ಅನುಸರಿಸುತ್ತಿರುವ ವಿಧಾನವನ್ನೇ ರಾಜ್ಯ ಸರ್ಕಾರವು ಪಾಲಿಸಬೇಕು. ಕೆಂಟೈನ್‌ಮೆಂಟ್, ಪ್ರಯಾಣಿಕ ಮತ್ತು ಸರಕು ವಾಹನಗಳ ಸಂಚಾರ, ಗುಂಪುಗಾರಿಕೆ ನಿರ್ಬಂಧ ಹೇರುವುದು, ಅನುಮತಿ ನೀಡಿದ ಅಥವಾ ನೀಡಲಾಗದ ಚಟುವಟಿಕೆಗಳು ಮತ್ತು ಸಂಬಂಧಿತ ವಿಷಯಗಳನ್ನು ಕುರಿತು ಯಾವುದೇ ಸೂಚನೆ ಮತ್ತು ನಿರ್ದೇಶನವನ್ನು ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ) ಶಾಖೆಯಿಂದ ರಾಜ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಮುಖ್ಯ ಕಾರ್ಯದರ್ಶಿಯವರ ಸಹಿಯಲ್ಲಿ ಮಾತ್ರ ಹೊರಡಿಸಬೇಕು ಎಂದಿದೆ.
ಎಲ್ಲಾ ಆದೇಶಗಳನ್ನು ಮುಖ್ಯಮಂತ್ರಿ ಅವರ ಅನುಮೋದನೆ ಪಡೆದೇ ಹೊರಡಿಸಬೇಕು. ಸದರಿ ಆದೇಶಗಳಿಗೆ ಸಂಬಂಧ ವಿವರಣೆ ನೀಡಬಹುದೇ ವಿನಹ ಹೊಸ ನಿರ್ಬಂಧಗಳನ್ನು ಹೇರಿಸುವ ಬಗ್ಗೆ ಯಾವುದೇ ಸಚಿವರಾಗಲಿ, ಅಧಿಕಾರಗಳಾಗಲಿ ಪತ್ರಿಕಾ ಹೇಳಿಕೆ ನೀಡಬಾರದು. ಜೊತೆಗೆ ಮುಖ್ಯ ಕಾರ್ಯದರ್ಶಿ ಅವರು ಹೊರಡಿಸುವಂತಹ ಆದೇಶಗಳ ಆಧಾರದ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಯಾವುದೇ ಇಲಾಖೆಗಳು ನಿರ್ದಿಷ್ಟವಾದ ಪ್ರಮಾಣಿತ ಕಾರ್ಯ ವಿಧಾನ (ಎಸ್ಒಪಿ) ಹೊರಡಿಸಬೇಕು ಎಂದು ಸೂಚಿಸಲಾಗಿದೆ.