ಬೆಂಗಳೂರು: 2022-23 ಸಾಲಿನಲ್ಲಿ ರಾಜ್ಯ ಸರ್ಕಾರ ಆರ್ಬಿಐ ಮೂಲಕ ಮೊದಲ ಸಾಲ ಎತ್ತುವಳಿ ಪ್ರಕ್ರಿಯೆ ಆರಂಭಿಸಿದೆ. ಆರ್ಥಿಕ ವರ್ಷದ ಆರು ತಿಂಗಳು ಕಳೆದಿದ್ದು, ರಾಜ್ಯದ ಸಾಲದ ಸ್ಥಿತಿಗತಿ ಹೇಗಿದೆ ಎಂಬ ವರದಿ ಇಲ್ಲಿದೆ.
ಈ ಬಾರಿಯೂ ರಾಜ್ಯ ಸರ್ಕಾರ ಹಣಕಾಸು ನಿರ್ವಹಣೆಗೆ ನೆಚ್ಚಿಕೊಂಡಿರುವುದು ಸಾಲವನ್ನು. ಕೋವಿಡ್ ಬಳಿಕ ಆರ್ಥಿಕ ಚೇತರಿಕೆ ಉತ್ತಮವಾಗಿದ್ದು, ಈ ವರ್ಷ ತೆರಿಗೆ ಸಂಗ್ರಹ ನಿರೀಕ್ಷೆಗಿಂತ ಉತ್ತಮ ಪ್ರಮಾಣದಲ್ಲಿ ಆಗುತ್ತಿದೆ. 2022-23 ಸಾಲಿನಲ್ಲಿ ರಾಜ್ಯ ಸರ್ಕಾರ ಅಂದಾಜು ಸುಮಾರು 72,000 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿದೆ.
ರಾಜ್ಯ ಸರ್ಕಾರ ಪ್ರಮುಖವಾಗಿ ಆರ್ಬಿಐ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಸಾಲ ಎತ್ತುವಳಿ ಮಾಡುತ್ತದೆ. ಕಳೆದ ಎರಡು ತ್ರೃಮಾಸಿಕದಲ್ಲಿ ರಾಜ್ಯ ಸರ್ಕಾರ ಆರ್ಬಿಐ ಮೂಲಕ ಸಾಲ ಎತ್ತುವಳಿ ಮಾಡಿರಲಿಲ್ಲ. ನವೆಂಬರ್ 15ರಂದು ರಾಜ್ಯ ಸರ್ಕಾರ ಮೊದಲ ಸಾಲ ಎತ್ತುವಳಿ ಮಾಡಿದೆ.
ಆರ್ಥಿಕ ವರ್ಷದ ಮೊದಲ ಸಾಲ ಎತ್ತುವಳಿ: ಆರ್ಬಿಐ ಮೂಲಕ ರಾಜ್ಯ ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ರಾಜ್ಯ ಅಭಿವೃದ್ಧಿ ಸಾಲದ ರೂಪದಲ್ಲಿ ಬಹುತೇಕ ಸಾಲ ಎತ್ತುವಳಿ ಮಾಡುತ್ತದೆ. ನ.15ರಂದು ರಾಜ್ಯ ಸರ್ಕಾರ ಮೊದಲ ಸಾಲ ಎತ್ತುವಳಿ ಮಾಡಿದೆ. 4,000 ಕೋಟಿ ರೂಪಾಯಿ ಸಾಲ ಮಾಡಿದೆ.
ಈ ಬಾರಿ ಒಟ್ಟು 72,089 ಕೋಟಿ ಸಾಲ ಮಾಡಲು ಬೊಮ್ಮಾಯಿ ಸರ್ಕಾರ ಯೋಜಿಸಿದೆ. ಆ ಪೈಕಿ 67,911 ಕೋಟಿ ರೂ. ಮುಕ್ತ ಮಾರುಕಟ್ಟೆ ಮೂಲಕ ಸಾಲ ಮಾಡಲು ಮುಂದಾಗಿದೆ. ಕಳೆದ ಎರಡು ತ್ರೈಮಾಸಿಕದಲ್ಲಿ ಆರ್ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ಸಾಲವನ್ನು ಮಾಡಿರಲಿಲ್ಲ. ಈಗ ಮೂರನೇ ತ್ರೈಮಾಸಿಕದಿಂದ ರಾಜ್ಯ ಸರ್ಕಾರ ಸಾಲ ಎತ್ತುವಳಿ ಮಾಡಲು ಆರಂಭಿಸಿದೆ. ಮೂರನೇ ತ್ರೈ ಮಾಸಿಕದಲ್ಲಿ ರಾಜ್ಯ ಸರ್ಕಾರ 19,000 ಕೋಟಿ ರೂ. ಸಾಲ ಎತ್ತಲು ಮುಂದಾಗಿದೆ.
ರಾಜ್ಯ ಸರ್ಕಾರ ಅಕ್ಟೋಬರ್ 11 ರಿಂದ ಮಾರುಕಟ್ಟೆ ಸಾಲವನ್ನು ಎತ್ತುವಳಿ ಮಾಡುವುದಾಗಿ ಆರ್ಬಿಐಗೆ ತಿಳಿಸಿತ್ತು. ಆ ಮೂಲಕ ಅಕ್ಟೋಬರ್ ತಿಂಗಳಲ್ಲಿ ಒಟ್ಟು 3,000 ಕೋಟಿ ಸಾಲ ಮಾಡಲು ಉದೇಶಿಸಿತ್ತು. ಆದರೆ ಅಕ್ಟೋಬರ್ನಲ್ಲಿ ಆರ್ಬಿಐ ಮೂಲಕ ಸಾಲ ಮಾಡಿರಲಿಲ್ಲ.
ನವೆಂಬರ್ ತಿಂಗಳಲ್ಲಿ ಮುಕ್ತ ಮಾರುಕಟ್ಟೆಯಿಂದ 8,000 ಕೋಟಿ ರೂ. ಸಾಲ ಮಾಡುವುದಾಗಿ ತಿಳಿಸಿತ್ತು. ಆದರೆ, ನ.15ರಂದು 4,000 ಕೋಟಿ ರೂ. ಸಾಲ ಮಾಡಿದೆ. ನ.22ರಂದು 2,000 ಕೋಟಿ ಹಾಗೂ ನ. 29ರಂದು 2,000 ಕೋಟಿ ಸಾಲ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಡಿಸೆಂಬರ್ ತಿಂಗಳಲ್ಲಿ ಒಟ್ಟು 8,000 ಕೋಟಿ ರೂ. ಸಾಲ ಮಾಡುವುದಾಗಿ ತಿಳಿಸಿದೆ. ಅದರಂತೆ ಡಿ.6, ಡಿ. 13, ಡಿ.20 ಹಾಗೂ ಡಿ.27ಕ್ಕೆ ತಲಾ 2,000 ಕೋಟಿ ರೂಪಾಯಿಯಂತೆ ಸಾಲ ಎತ್ತುವಳಿ ಮಾಡಲು ನಿರ್ಧರಿಸಿದೆ.
3,152 ಕೋಟಿ ರೂ. ಸಾರ್ವಜನಿಕ ಸಾಲ: ಆರ್ಬಿಐ ಮೂಲಕ ನವೆಂಬರ್ನಲ್ಲಿ ಮೊದಲ ಸಾಲ ಎತ್ತುವಳಿ ಮಾಡಿರುವುದರ ಜೊತೆಗೆ ಈ ಆರ್ಥಿಕ ವರ್ಷದಲ್ಲಿ ಕಳೆದ ಆರು ತಿಂಗಳಲ್ಲಿ ರಾಜ್ಯ ಸರ್ಕಾರ 3,152.89 ಕೋಟಿ ರೂ. ಸಾರ್ವಜನಿಕ ಸಾಲ ಮಾಡಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ರಾಜ್ಯ ಸರ್ಕಾರ ಕಡಿಮೆ ಸಾರ್ವಜನಿಕ ಸಾಲದ ಮೊರೆ ಹೋಗಿದೆ. ಕಳೆದ ವರ್ಷ ಸೆಪ್ಟೆಂಬರ್ ವೇಳೆಗೆ 9,475.96 ಕೋಟಿ ರೂ. ಸಾರ್ವಜನಿಕ ಸಾಲವನ್ನು ಮಾಡಿತ್ತು. ಈ ಬಾರಿ ಆರು ತಿಂಗಳಲ್ಲಿ 3,152.89 ಕೋಟಿ ರೂ. ಸಾರ್ವಜನಿಕ ಸಾಲ ಮಾಡಿದೆ.
ಉಳಿದಂತೆ ಬಹುತೇಕ ಸಾಲವನ್ನು ಆರ್ಬಿಐ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಎತ್ತುವಳಿ ಮಾಡಲು ನಿರ್ಧರಿಸಿದೆ. ಕೊನೆಯ ತ್ರೈಮಾಸಿಕದಲ್ಲಿ ಹೆಚ್ಚಿನ ಸಾಲವನ್ನು ಎತ್ತುವಳಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಡಿ.19ರಿಂದ ಬೆಳಗಾವಿಯಲ್ಲಿ ಅಧಿವೇಶನ.. ಶ್ರೀಗಂಧ ನೀತಿಗೆ ಸಚಿವ ಸಂಪುಟ ಸಭೆ ಅನುಮೋದನೆ