ಬೆಂಗಳೂರು: ಹೆಚ್ಚುವರಿಯಾಗಿ 22 ಬರಪೀಡಿತ ತಾಲೂಕುಗಳನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ರಾಜ್ಯದ 31 ಜಿಲ್ಲೆಗಳ 236 ತಾಲೂಕುಗಳ ಪೈಕಿ 216 ತಾಲೂಕುಗಳು ಬರಪೀಡಿತವಾಗಿವೆ. 189 ತೀವ್ರ ಬರಪೀಡಿತ ತಾಲೂಕು, 17 ಸಾಧಾರಣ ಬರಪೀಡಿತ ತಾಲೂಕುಗಳಾಗಿವೆ. ಕೇಂದ್ರ ಸರ್ಕಾರದ ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳನ್ವಯ ಜಿಲ್ಲಾಧಿಕಾರಿಗಳಿಗೆ ನೀಡಿರುವ ಬೆಳೆ ಹಾನಿ ಸಮೀಕ್ಷೆಯ ವರದಿ ಆಧರಿಸಿ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.
ಹೆಚ್ಚುವರಿ 22 ಬರಪೀಡಿತ ತಾಲೂಕುಗಳ ಪೈಕಿ 17 ತಾಲೂಕು ತೀವ್ರ ಬರಪೀಡಿತವಾಗಿದ್ದು, 4 ತಾಲೂಕು ಸಾಧಾರಣ ಬರಪೀಡಿತವಾಗಿವೆ. ಈ ಹಿಂದೆ ಘೋಷಣೆ ಮಾಡಿದ್ದ 195 ತಾಲೂಕುಗಳ ಪೈಕಿ 161 ತಾಲೂಕುಗಳು ಬರಪೀಡಿತವಾಗಿದ್ದವು. ಸಾಧಾರಣ ಬರಪೀಡಿತವೆಂದು ಗುರುತಿಸಲಾಗಿದ್ದ 34 ತಾಲೂಕುಗಳ ಪೈಕಿ 22 ತಾಲೂಕುಗಳ ಬಗ್ಗೆ ಜಿಲ್ಲಾಧಿಕಾರಿಗಳು ನೀಡಿರುವ ವರದಿ ಆಧರಿಸಿ 11 ತಾಲೂಕುಗಳು ತೀವ್ರ ಬರ ಹಾಗೂ 11 ಸಾಧಾರಣ ಬರ ಎಂದು ಘೋಷಿಸುವ ಅರ್ಹತೆ ಪಡೆದಿದೆ ಎಂದು ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಸೆಪ್ಟೆಂಬರ್ ಅಂತ್ಯದವರಿಗೆ ಬರ ಪರಿಸ್ಥಿತಿ ಕಂಡು ಬಂದ 28 ತಾಲೂಕುಗಳ ಪೈಕಿ 18 ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ 4 ಸಾಧಾರಣ ಬರಪೀಡಿತ ಎಂದು ಗುರುತಿಸಲಾಗಿದೆ. ಹೆಚ್ಚುವರಿ 22 ಬರಪೀಡಿತ ತಾಲೂಕುಗಳ ಪೈಕಿ ಬೆಳಗಾವಿ, ಖಾನಾಪುರ, ಚಾಮರಾಜನಗರ, ಅಳ್ನಾವರ, ಅಣ್ಣೀಗೇರಿ, ಕಲಘಟಗಿ, ಮುಂಡರಗಿ, ಆಲೂರು, ಅರಸೀಕೆರೆ, ಹಾಸನ, ಬ್ಯಾಡಗಿ, ಹಾನಗಲ್, ಶಿಗ್ಗಾವಿ, ಪೊನ್ನಂಪೇಟೆ, ಕೆಆರ್ ನಗರ, ಹೆಬ್ರಿ ಹಾಗೂ ದಾಂಡೇಲಿ ತೀವ್ರ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ.
ಯಳಂದೂರು, ಮೂಡಿಗೆರೆ, ತರೀಕೆರೆ, ಸಿದ್ದಾಪುರ ಸಾಧಾರಣ ಬರಪೀಡಿತ ತಾಲೂಕುಗಳಾಗಿವೆ. ಸೆಪ್ಟೆಂಬರ್ನಲ್ಲಿ ತಾಲೂಕುಗಳನ್ನು 34 ಸಾಧಾರಣ ಬರಪೀಡಿತವೆಂದು ಘೋಷಿಸಲಾಗಿತ್ತು. ಆ ತಾಲೂಕುಗಳಲ್ಲಿ ಮರುಬೆಳೆ ಸಮೀಕ್ಷೆ ಅನ್ವಯ 11 ತಾಲೂಕುಗಳು ತೀವ್ರ ಬರಪೀಡಿತವಾಗಿವೆ.
ಅವುಗಳೆಂದರೆ ಬೆಂಗಳೂರು ಉತ್ತರ, ಗುಂಡ್ಲುಪೇಟೆ, ಹನೂರು, ಬೇಲೂರು, ಚನ್ನರಾಯಪಟ್ಟಣ, ಹೊಳೇನರಸೀಪುರ, ಸೋಮವಾರಪೇಟೆ, ಮಾಲೂರು, ದೇವದುರ್ಗ, ಮಸ್ಕಿ, ತುಮಕೂರು.
ಸಾಧಾರಣ ಬರಪೀಡಿತ ತಾಲೂಕುಗಳೆಂದರೆ ಕೊಳ್ಳೇಗಾಲ, ಕೊಪ್ಪ, ನರಸಿಂಹರಾಜಪುರ, ಶೃಂಗೇರಿ, ಮಂಗಳೂರು, ಮೂಡಬಿದರೆ, ಸಕಲೇಶಪುರ, ಚನ್ನಪಟ್ಟಣ, ಮಾಗಡಿ, ಬ್ರಹ್ಮಾವರ ಹಾಗೂ ಕಾರವಾರ ತಾಲೂಕುಗಳು.
ಮುಂಗಾರು ಹಂಗಾಮಿನಲ್ಲಿ ಬರಪೀಡಿತವಾಗಿರುವ 216 ತಾಲೂಕುಗಳಲ್ಲಿ ಬರ ನಿರ್ವಹಣೆ ಕಾರ್ಯಕ್ರಮವನ್ನು ಜಿಲ್ಲಾಕಾರಿಗಳು ಮುಂದಿನ 6 ತಿಂಗಳವರೆಗೆ ಕೈಗೊಳ್ಳಬೇಕಾಗಿದೆ. ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಬರ ಪರಿಹಾರ ಮಾರ್ಗಸೂಚಿ ಅನ್ವಯ ಬರಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ.
ಇದನ್ನೂ ಓದಿ: ಒಂದು ತಿಂಗಳೊಳಗೆ ಶೇ. 50ರಷ್ಟು ಬಾಕಿ ಮೊತ್ತ ಬಿಡುಗಡೆ ಮಾಡಿ: ಸರ್ಕಾರಕ್ಕೆ ಗಡುವು ನೀಡಿದ ಕೆಂಪಣ್ಣ