ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅತ್ಯುನ್ನತ ಸೇವೆ/ಸಾಧನೆ ಮಾಡಿದ ರಾಜ್ಯ ಸರ್ಕಾರಿ ಅಧಿಕಾರಿಗಳು/ನೌಕರರಿಗೆ ನೀಡುವ 'ಸರ್ವೋತ್ತಮ ಸೇವಾ ಪ್ರಶಸ್ತಿ' ಘೋಷಿಸಲಾಗಿದೆ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ ರಾಜ್ಯ ಸರ್ಕಾರದ ಅರ್ಹ 10 ಅಧಿಕಾರಿಗಳು/ನೌಕರರಿಗೆ 2020-21ನೇ ಸಾಲಿನ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದ್ದು. ಪ್ರತಿ ಪ್ರಶಸ್ತಿಯು ರೂ 25,000/- (ಇಪ್ಪತ್ತೈದು ಸಾವಿರ ರೂಪಾಯಿಗಳು) ಗಳ ಪ್ರೋತ್ಸಾಹ ಧನ ಹಾಗೂ ಪ್ರಶಸ್ತಿ ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ.
ಪ್ರಶಸ್ತಿ ಪುರಸ್ಕೃತರಾದ ಆರ್ ಚಂದ್ರಶೇಖರ್, ಸರ್ಕಾರದ ಉಪ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ. ಗಂಗಾರಮ್ ಪಿಡಿಒ ದೊಡ್ಡಜಾಲ ಗ್ರಾಮ ಪಂಚಾಯಿತಿ, ಬಿ.ಎನ್ ಗಿರೀಶ್ ತಹಶೀಲ್ದಾರ್ ದಾವಣಗೆರೆ, ಬಸಲಿಂಗಯ್ಯ ಆರ್.ಹಿರೇಮಠ್, ಅಬಕಾರಿ ಇಲಾಖೆ ಆಯುಕ್ತರು, ಜಿ.ಹರ್ಷ ಪ್ರಥಮ ದರ್ಜೆ ಸಹಾಯಕರು, ಹೆಚ್.ಪಿ ಹೇಮಾವತಿ ಶುಶ್ರುತಾಧಿಕಾರಿ ಸಿ.ವಿ. ರಾಮನ್ ಸರ್ಕಾರಿ ಆಸ್ಪತ್ರೆ, ಎಂ. ಆಂಜನೇಯ ಹಿರಿಯ ಆರೋಗ್ಯ ಸಹಾಯಕ ವಿಜಯನಗರ ಜಿಲ್ಲೆ, ಚಂದ್ರಮತಿ ಎಂ.ಹೆಗ್ಗಡೆ ಶುಶ್ರುತ ಅಧೀಕ್ಷಕರು ಶಿವಮೊಗ್ಗ, ಡಾ.ಟಿ.ಎಸ್ ಲತಾ ಸಾರ್ವಜನಿಕ ಸಂಪರ್ಕ ಅಧಿಕಾರಿ, ಚಂದ್ರಶೇಖರ್ ನಾಯಕ್ ಉಪ ನಿರ್ದೇಶಕರು ಉಡುಪಿ ಅವರಿಗೆ ಪ್ರಶಸ್ತಿ ಪ್ರಮಾಣ ಪತ್ರ, ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ.

ಈ ಯೋಜನೆಯಲ್ಲಿ ಜಿಲ್ಲಾವಾರು, ಇಲಾಖಾವಾರು ಮತ್ತು ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿಗಳನ್ನು ಪ್ರದಾನ ಮಾಡುವ ಬಗ್ಗೆ ಸರ್ಕಾರ ಮಾರ್ಗಸೂಚಿಗಳನ್ನು ಹೂರಡಿಸಿದೆ. ಸುತ್ತೋಲೆಯಲ್ಲಿ ರಾಜ್ಯ ಸರ್ಕಾರದ ಇಲಾಖೆ ಮತ್ತು ಜಿಲ್ಲಾವಾರು ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮ ನಿರ್ದೇಶನವನ್ನು ಆನ್ಲೈನ್ ಮೂಲಕ ಸಲ್ಲಿಸುವಂತೆ ಸೂಚಿಸಲಾಗಿತ್ತು.
ಆಯ್ಕೆ ಸಮಿತಿ ಸಭೆಯಲ್ಲಿ 2020-21ನೇ ಸಾಲಿನಲ್ಲಿ ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆನ್ಲೈನ್ ಮೂಲಕ ಸ್ವೀಕೃತವಾದ ಅರ್ಜಿಗಳನ್ನು ಆಯಾ ಇಲಾಖೆಗಳಿಗೆ ಶಿಫಾರಸಿಗಾಗಿ ಕಳುಹಿಸಿದ್ದು, ಇಲಾಖಾ ಕಾರ್ಯದರ್ಶಿಗಳಿಂದ ಅನುಮೋದಿತವಾಗಿ ಬಂದ ಅರ್ಜಿಗಳನ್ನು ಸಮಿತಿ ಸಭೆಯಲ್ಲಿ ಮಂಡಿಸಲಾಯಿತು.
ಅಧಿಕಾರಿ/ನೌಕರರ ವಿರುದ್ಧ ಯಾವುದೇ ಇಲಾಖಾ ವಿಚಾರಣೆ/ಲೋಕಾಯುಕ್ತ ತನಿಖೆ/ನ್ಯಾಯಾಂಗ ತನಿಖೆ/ಕ್ರಿಮಿನಲ್ ಮೊಕದ್ದಮೆಗಳು ಬಾಕಿ ಇರುವುದಿಲ್ಲ ಎಂದು ಇಲಾಖಾ ವತಿಯಿಂದ ನೀಡಿದ ವರದಿಗಳನ್ನು ಆಯ್ಕೆ ಸಮಿತಿಯು ಗಮನಿಸಿತು.
ನಾಮನಿರ್ದೇಶನಗಳಲ್ಲಿ ಸಂಬಂಧಿಸಿದ ಅಧಿಕಾರಿ/ನೌಕರರು ಸಲ್ಲಿಸಿದ ವಿನೂತನ ಸೇವೆ, ನಾಗರೀಕರಿಗೆ ಅನುಕೂಲಕರವಾದ ಗುಣಾತ್ಮಕ ಸೇವೆ, ಸರ್ಕಾರದ ಯೋಜನೆಗಳನ್ನು ನಾಗರೀಕರಿಗೆ ತಲುಪಿಸುವಲ್ಲಿ ಶ್ರಮಿಸಿರುವ ಬಗ್ಗೆ ವರದಿಯನ್ನು ಸಮಿತಿಯು ಕೂಲಂಕಷವಾಗಿ ಪರಿಶೀಲಿಸಿತು.
ಇದನ್ನೂ ಓದಿ: ರಾಯಚೂರಿನ ಎಲ್ಲ ಮೊರಾರ್ಜಿ ಶಾಲೆಗಳನ್ನ ಕೋವಿಡ್ ಕೇರ್ ಸೆಂಟರ್‌ಗಳಾಗಿ ಪರಿವರ್ತಿಸಿ : ಡಿಸಿಎಂ ಸವದಿ ಸೂಚನೆ