ಬೆಂಗಳೂರು: ರೈತ ಹೋರಾಟಕ್ಕೆ ಮಣಿದು ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಿದೆ. ಆದರೆ ಇತ್ತ ರಾಜ್ಯ ಸರ್ಕಾರ ಕೇಂದ್ರದ ಕಾಯ್ದೆ ಅನ್ವಯ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಲು ಒಲವು ಹೊಂದಿಲ್ಲ.
ರೈತರ ನಿರಂತರ ಹೋರಾಟಕ್ಕೆ ಕೊನೆಗೂ ಮಣಿದ ಕೇಂದ್ರ ಸರ್ಕಾರ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದೆ. ಇದೀಗ ರಾಜ್ಯ ಸರ್ಕಾರವೂ ರಾಜ್ಯದಲ್ಲಿ ತಂದಿರುವ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ರಾಜ್ಯ ಸರ್ಕಾರ ಕೇಂದ್ರದ ಕಾಯ್ದೆ ಅನ್ವಯ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿತ್ತು. ಆದರೆ, ಆದರಂತೆ ವರ್ತಕರು ನೇರವಾಗಿ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ ಎಪಿಎಂಸಿ ಪ್ರಾಂಗಣಗಳ ಹೊರಗೆ ನಡೆಯುವ ಕೃಷಿ ಉತ್ಪನ್ನಗಳ ಮಾರಾಟದ ಮೇಲೆ ಸೆಸ್ ವಿಧಿಸುವುದನ್ನು ರದ್ದುಪಡಿಸಲಾಗಿದೆ. ಎರಡು ಬಾರಿ ಸುಗ್ರೀವಾಜ್ಞೆ ಹೊರಡಿಸಿ ಕೊನೆಗೆ ವಿಧಾನಮಂಡಲದ ಒಪ್ಪಿಗೆ ಪಡೆದು ಕಾಯಿದೆ ಜಾರಿಯಾಗಿದೆ. ಕಳೆದ ಡಿಸೆಂಬರ್ನಲ್ಲಿ ರೈತರ ವಿರೋಧದ ಮಧ್ಯೆ ರಾಜ್ಯ ಸರ್ಕಾರ ಈ ವಿವಾದಿತ ಕಾಯ್ದೆಯನ್ನು ಜಾರಿಗೆ ತಂದಿತ್ತು.
ಕೇಂದ್ರ ಜಾರಿಗೊಳಿಸಿದ್ದ ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ಮಾರಾಟ (ಉತ್ತೇಜನ- ಸೌಲಭ್ಯ) ಕಾಯ್ದೆ (ಕೃಷಿ ಮಾರುಕಟ್ಟೆ ಕಾಯ್ದೆ)ಯಂತೆ ರಾಜ್ಯ ಸರಕಾರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಕಾಯ್ದೆಯನ್ನು ಕಳೆದ ಡಿಸೆಂಬರ್ ಜಾರಿಗೊಳಿಸಿದೆ. ಕೇಂದ್ರ ಸರ್ಕಾರ ಕೃಷಿ ಮಾರುಕಟ್ಟೆ ಕಾಯ್ದೆಯನ್ನು ರದ್ದುಗೊಳಿಸಿದೆ. ರಾಜ್ಯ ಸರ್ಕಾರವೂ ಅದೇ ರೀತಿ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸುವಂತೆ ರೈತರು ಆಗ್ರಹಿಸಿದ್ದಾರೆ.
ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ಧತಿ ಅನುಮಾನ:
ಕೇಂದ್ರ ಸರ್ಕಾರ ರದ್ದುಪಡಿಸಿದ ರೀತಿಯಲ್ಲಿ ರಾಜ್ಯ ಸರ್ಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದತಿಗೆ ಒಲವು ಹೊಂದಿಲ್ಲ. ಸದ್ಯ ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದುಗೊಳಿಸದಿರುವ ತೀರ್ಮಾನಕ್ಕೆ ಬಂದಿದೆ.
ರಾಜ್ಯದಲ್ಲಿ ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ಯಾವುದೇ ಪ್ರಬಲವಾದ ಹೋರಾಟ ನಡೆದಿಲ್ಲ. ಜೊತೆಗೆ ರೈತರಿಗೆ ಈ ತಿದ್ದುಪಡಿ ಕಾಯ್ದೆಯಿಂದ ಹೆಚ್ಚಿನ ಅನುಕೂಲವಾಗಿದೆ. ಹೀಗಾಗಿ ರಾಜ್ಯದಲ್ಲಿ ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದುಗೊಳಿಸದಿರುವ ಚಿಂತನೆಗೆ ಸರ್ಕಾರ ಬಂದಿದೆ ಎಂದು ಕಾನೂನು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಕಾಯ್ದೆಯ ಅನ್ವಯ ರಾಜ್ಯ ಸರ್ಕಾರ ಕೆಲ ತಿದ್ದುಪಡಿಯೊಂದಿಗೆ ರಾಜ್ಯದಲ್ಲೂ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದೆ. ಇದರಿಂದ ರಾಜ್ಯದ ರೈತರಿಗೆ ಯಾವುದೇ ಅನಾನುಕೂಲ ಆಗಿಲ್ಲ. ಹೀಗಾಗಿ ಕಾಯ್ದೆ ರದ್ದತಿಯ ಅಗತ್ಯತೆ ಇಲ್ಲ ಎಂಬ ಮನೋಭಾವ ಸರ್ಕಾರಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಕಾದು ನೋಡುವ ತಂತ್ರವನ್ನು ಸರ್ಕಾರ ಅನುಸರಿಸುತ್ತಿದೆ. ಇತರ ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಿಲ್ಲ. ಇತ್ತ ಕರ್ನಾಟಕವೂ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸದಿರಲು ತೀರ್ಮಾನಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ದುರ್ಮರಣ.. CCTVಯಲ್ಲಿ ದೃಶ್ಯ ಸೆರೆ