ಬೆಂಗಳೂರು: ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನಾ ಸಮಾವೇಶವನ್ನು ವರ್ಚುವಲ್ ರ‍್ಯಾಲಿ ಮೂಲಕ ಆಯೋಜನೆ ಮಾಡಿದಂತೆಯೇ ರಾಜ್ಯ ಸರ್ಕಾರದ ಒಂದು ವರ್ಷದ ಸಾಧನಾ ಸಮಾವೇಶವನ್ನು ವರ್ಚುವಲ್ ರ‍್ಯಾಲಿ ಮೂಲಕ ಆಯೋಜನೆ ಮಾಡಲು ರಾಜ್ಯ ಬಿಜೆಪಿ ನಿರ್ಧರಿಸಿದೆ.
ಕೊರೊನಾ ಹಿನ್ನಲೆ ಯಾವುದೇ ರಾಜಕೀಯ ಸಭೆ ಸಮಾರಂಭಗಳಿಗೆ ಅನುಮತಿ ಇಲ್ಲದೇ ಇರುವುದು ಹಾಗು ಸಮಾವೇಶ ನಡೆಸಲು ಪೂರಕ ವಾತಾವರಣ ಇಲ್ಲದೇ ಇರುವುದರಿಂದ ವರ್ಚುವಲ್ ರ‍್ಯಾಲಿಗೆ ಬಿಜೆಪಿ ಮುಂದಾಗಿದೆ. ಜುಲೈ 26 ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಒಂದು ವರ್ಷ ಪೂರ್ಣಗೊಳ್ಳುತ್ತಿದೆ. ಅಂದು ವರ್ಚುವಲ್ ರ‍್ಯಾಲಿ ಮೂಲಕ ಸಮಾವೇಶ ನಡೆಸಿ ಸರ್ಕಾರದ ಸಾಧನೆಯನ್ನು ಜನರ ಮುಂದಿಡುವ ಚಿಂತನೆ ನಡೆಸಿದೆ.
ಆನ್ಲೈನ್ನಲ್ಲೇ ಸಭೆ!
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆ ಹಮ್ಮಿಕೊಳ್ಳಲಾಗುತ್ತಿರುವ ವರ್ಚುವಲ್ ಸಮಾವೇಶದ ಕುರಿತು ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಡಿಯೋ ಸಂವಾದ ನಡೆಸುವ ಮೂಲಕ ಪೂರ್ವಸಿದ್ಧತಾ ಸಭೆ ನಡೆಸಿದರು.
ಭಾನುವಾರ ಸರ್ಕಾರದ ವತಿಯಿಂದ ವಿಧಾನಸೌಧದಲ್ಲಿ ಸಾಂಕೇತಿಕವಾಗಿ ಸರಳ ಸಮಾರಂಭದ ಮೂಲಕ ಸರ್ಕಾರದ ಸಾಧನಾ ಕಿರುಹೊತ್ತಿಗೆ ಬಿಡುಗಡೆಯಾಗಲಿದೆ. ಅಂದೇ ಬಿಜೆಪಿವತಿಯಿಂದ ವರ್ಚುವಲ್ ರ‍್ಯಾಲಿ ಸಮಾವೇಶ ದೊಡ್ಡ ಮಟ್ಟದಲ್ಲಿ ನಡೆಯಲಿದೆ.