ಬೆಂಗಳೂರು: ರಾಜ್ಯದ ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಮೇವು ಮತ್ತು ಆಹಾರ ಒದಗಿಸುವ ಜಾನುವಾರು ಶಿಬಿರ ಆರಂಭದ ಬಗ್ಗೆ ತಪ್ಪು ಮಾಹಿತಿ ನೀಡಿದ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದ್ದಕ್ಕೆ ತೀವ್ರ ಅಸಮಾಧಾನಗೊಂಡ ಮುಖ್ಯ ನ್ಯಾಯಮೂರ್ತಿ ಓಕಾ ಅವರಿದ್ದ ವಿಭಾಗೀಯ ಪೀಠ, ಪಶು ಸಂಗೋಪನೆ ಇಲಾಖೆಯ ಕಾರ್ಯದರ್ಶಿ ರಶ್ಮಿ ಮಹೇಶ್ ನ್ಯಾಯಾಲಯಕ್ಕೆ ಖುದ್ದಾಗಿ ಈ ತಿಂಗಳ 26ರಂದು ಹಾಜರಾಗುವಂತೆ ಆದೇಶ ನೀಡಿದೆ.
ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಸಮರ್ಪಕ ನೀರು ಆಹಾರ ಕೊಡಲಾಗುತ್ತಿಲ್ಲ ಎಂದು ಆರೋಪಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಎ. ಮಲ್ಲಿಕಾರ್ಜುನ್ ಸಲ್ಲಿಸಿದ್ದರು. ಈ ಅರ್ಜಿಯನ್ನ ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್‌ನ ಕಾನೂನು ಸೇವಾ ಪ್ರಾಧಿಕಾರ, ಸದಸ್ಯರ ತಂಡ ರಚಿಸಿ ಗೋಶಾಲೆ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಲು ಆದೇಶ ನೀಡಿತ್ತು.
ಪರಿಶೀಲನೆ ನಡೆಸುವಾಗ ರಾಜ್ಯ ಸರ್ಕಾರ ಹಲವೆಡೆ ಜಾನುವಾರ ಶಿಬಿರಗಳನ್ನ ಆರಂಭ ಮಾಡದೇ ಇರುವುದು ಬೆಳಕಿಗೆ ಬಂತು. ಈ ಬಗ್ಗೆ ಸಮಿತಿ ನ್ಯಾಯಾಲಕ್ಕೆ ವರದಿ ಒಪ್ಪಿಸಿತ್ತು. ಸರ್ಕಾರ ನೀಡಿದ ಮಾಹಿತಿ ತಪ್ಪು ಇರುವುದನ್ನ ಮನಗಂಡ ನ್ಯಾಯಾಲಯ ಪಶುಸಂಗೋಪನೆ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡು ಅರ್ಜಿ ವಿಚಾರಣೆ ಮುಂದೂಡಿದೆ.