ಬೆಂಗಳೂರು: ಶೃತಿ ಬೆಳ್ಳಕ್ಕಿ, ಮಹೇಶ್ ಹೆಗಡೆ ಬಂಧನದ ಮೂಲಕ ರಾಜ್ಯ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡುತ್ತಿದೆ. ವಿರೋಧಿಗಳನ್ನು ಮಟ್ಟಹಾಕಲು ಗೃಹ ಸಚಿವ ಎಂ.ಬಿ.ಪಾಟೀಲ್ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಶಾಸಕ ಸಿ.ಟಿ.ರವಿ ಆರೋಪಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಸ್ವತಂತ್ರ ಧರ್ಮ ವಿಚಾರದಲ್ಲಿ ರಾಜಕೀಯ ದುರುದ್ದೇಶ ನಡೆಯುತ್ತಿದೆ ಎನ್ನುವ ಭಾಷಣ ಹಂಚಿಕೊಂಡಿದ್ದಕ್ಕೆ ಶೃತಿ ಬೆಳ್ಳಕ್ಕಿ ಅವರನ್ನು ಬಂಧಿಸಲಾಯಿತು. ಇದೇ ವಿಚಾರ ಸಂಬಂಧ ಸಾಮಾಜಿಕ ಜಾಲತಾಣ ಪೋಸ್ಟ್ ಕಾರ್ಡ್ ಸಂಪಾದಕ ಮಹೇಶ್ ಹೆಗಡೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಇದು ಅಧಿಕಾರದ ದುರ್ಬಳಕೆ ಮಾತ್ರವಲ್ಲ, ಸರ್ಕಾರದ ದ್ವಂದ್ವ ನಿಲುವನ್ನು ಕೂಡ ಬಹಿರಂಗೊಳಿಸಿದೆ. ಶ್ರೀರಾಮಚಂದ್ರನ ಬಗ್ಗೆ ಅವಹೇಳನಕಾರಿಯಾಗಿ ಬರೆಯುವ ಸಾಹಿತಿ ಭಗವಾನ್ಗೆ ರಕ್ಷಣೆ ಕೊಡಲಾಗುತ್ತದೆ. ಆದರೆ ಇನ್ನೊಂದು ಕಡೆ ಧರ್ಮದ ವಿಚಾರದಲ್ಲಿ ಮಾಹಿತಿಯನ್ನು ಹಂಚಿಕೊಂಡ ಹೆಣ್ಣುಮಗಳನ್ನು ಬಂಧಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದಿಂದ ಅಧಿಕಾರ ದುರ್ಬಳಕೆ ನಡೆಯುತ್ತಿದೆ. ರಾಜಕೀಯ ವಿರೋಧಿಗಳ ವಿರುದ್ಧ ಗೃಹ ಸಚಿವ ಎಂ.ಬಿ.ಪಾಟೀಲ್ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಬಿಜೆಪಿ ಖಂಡಿಸಲಿದೆ. ಎಲ್ಲದಕ್ಕೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಯಿತು ಎಂದು ಬೊಬ್ಬೆ ಹೊಡೆಯುವವರು ಈಗ ಎಲ್ಲಿ ಹೋಗಿದ್ದಾರೆ? ಏನು ಮಾಡುತ್ತಿದ್ದಾರೆ? ಇದೆಲ್ಲಾ ಅವರ ಕಣ್ಣಿಗೆ ಕಾಣುತ್ತಿಲ್ಲವೇ? ಯಾಕೆ ಮೌನವಾಗಿದ್ದೀರಿ ಎಂದು ಕಿಡಿಕಾರಿದರು.