ಬೆಂಗಳೂರು: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಾಲ್ಗೊಂಡರು.
ಸಮಾರಂಭದಲ್ಲಿ ಮಾತನಾಡಿ, ಈ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯದ್ದು ಮಹಿಳಾ ವಿರೋಧಿ ಸರ್ಕಾರ. ಸ್ತ್ರೀ ವಿರೋಧಿ ಬಜೆಟ್ ಮಂಡಿಸಿದ್ದಾರೆ. ನಾವು ಹೆಣ್ಣು ಕುಟುಂಬದ ಕಣ್ಣು ಎಂದು ಬೇಕಾದಷ್ಟು ಕಾರ್ಯಕ್ರಮ ಆರಂಭಿಸಿದ್ದೆವು ಎಂದರು.
ಇಡೀ ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದೆವು. ಆದರೆ, ಕಳೆದ ಚುನಾವಣೆಯಲ್ಲಿ ಬಿಜೆಪಿಯವರು ಮಹಿಳೆಯರ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ ಕೊಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದರು. ಮಹಿಳೆಯರಿಗೆ 2 ಲಕ್ಷದವರೆಗೂ ಸಾಲ, ಬಡ ಮಹಿಳೆಯರಿಗೆ ಸ್ಮಾರ್ಟ್ ಫೋನ್ ವಿತರಣೆ ಎಂಬ ಭರವಸೆಗಳನ್ನು ನೀಡಿದ್ದರು. 3 ಗ್ರಾಂ ತಾಳಿ, 25 ಸಾವಿರ ಹಣ ನೀಡುವುದಾಗಿ ಹೇಳಿದ್ದರು ಎಂದು ಟೀಕಿಸಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಭಾರತ-ಜಪಾನ್ ಜಂಟಿ ಸೇನಾ ಸಮರಾಭ್ಯಾಸ; ಮೈನವಿರೇಳಿಸುವ ಸೈನಿಕರ ಸಾಹಸ
ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ದೇಶದಲ್ಲೇ ದೊಡ್ಡ ಪರಿವರ್ತನಾ ಹೆಜ್ಜೆ ಇಟ್ಟಿದ್ದಾರೆ. ಅವರ ತಂದೆ ರಾಜೀವ್ ಗಾಂಧಿ ಅವರು ಮಹಿಳೆಯರಿಗೆ ಮೀಸಲಾತಿಯಂತಹ ಕ್ರಾಂತಿಕಾರಿ ಬದಲಾವಣೆಗೆ ಪ್ರಯತ್ನ ಮಾಡಿದ್ದರು. ನಾವು ನಮ್ಮ ಪ್ರಣಾಳಿಕೆಯಲ್ಲಿ ಶೇ. 33 ರಷ್ಟು ಮೀಸಲಾತಿ ನೀಡುತ್ತೇವೆ ಎಂದು ಹೇಳಿದ್ದು, ರಾಜ್ಯಸಭೆಯಲ್ಲಿ ಬಿಲ್ ಪಾಸ್ ಆಗಿ ಲೋಕಸಭೆಯಲ್ಲಿ ಬಿಜೆಪಿ ಇನ್ನೂ ಕಾರ್ಯರೂಪಕ್ಕೆ ತಂದಿಲ್ಲ ಎಂದರು.