ಬೆಂಗಳೂರು: ರಾಜಧಾನಿ ಬೆಂಗಳೂರನ್ನು ಕೇಂದ್ರೀಕರಿಸಿಕೊಳ್ಳುವ ಬದಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು ಪೂರಕವಾಗುವಂತೆ 2019ರ ನವೆಂಬರ್ ತಿಂಗಳಲ್ಲಿ ನೂತನ ಕೈಗಾರಿಕಾ ನೀತಿಯನ್ನು ಪ್ರಕಟಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ನಗರದ ಖನಿಜ ಭವನದಲ್ಲಿ ಇಲಾಖೆಯ ಉನ್ನತಾಧಿಕಾರಿಗಳ ಜತೆ ಸುದೀರ್ಘ ಚರ್ಚೆ ನಡೆಸಿದ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ನೂತನ ಕೈಗಾರಿಕಾ ನೀತಿಯಲ್ಲಿ ಅಳವಡಿಕೆಯಾಗಬೇಕಾದ ಅಂಶಗಳ ಕುರಿತು ಸೂಚನೆ ನೀಡಿದರು.
2014 ರಿಂದ 2019 ರವರೆಗಿನ ಕೈಗಾರಿಕಾ ನೀತಿ ಅವಧಿ ಪೂರೈಸುತ್ತಿದ್ದು, ಈ ಹಿನ್ನೆಲೆಯಲ್ಲಿ ಹೊಸ ಕೈಗಾರಿಕಾ ನೀತಿಯನ್ನು ಪ್ರಕಟಿಸಬೇಕಿದೆ. ನೂತನ ಕೈಗಾರಿಕಾ ನೀತಿಯನ್ನು ಪ್ರಕಟಿಸುವಾಗ ಬೆಂಗಳೂರನ್ನು ಕೇಂದ್ರೀಕರಿಸಿಕೊಳ್ಳುವ ಬದಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗುವಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಲಿ ಎಂದರು.
ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಜಗದೀಶ್ ಶೆಟ್ಟರ್, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೈಗಾರಿಕೆಗಳು ಬರಬೇಕು. ಆಯಾ ಜಿಲ್ಲೆಗಳಲ್ಲಿ ಯಾವ ರೀತಿಯ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂಬುದನ್ನು ಅಧ್ಯಯನ ಮಾಡಬೇಕು. ಇದಕ್ಕೆ ಪೂರಕವಾಗಿ ಕೈಗಾರಿಕೋದ್ಯಮಿಗಳು, ಸಾರ್ವಜನಿಕರ ಜತೆ ಚರ್ಚೆ ನಡೆಸಬೇಕು. ಆರ್ಥಿಕವಾಗಿ ಹಿಂದುಳಿದ ಜಿಲ್ಲೆಗಳಿಗೆ ಆದ್ಯತೆ ನೀಡಿದರೆ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಅಲ್ಲಿನ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗುತ್ತದೆ ಎಂದು ಹೇಳಿದರು.