ಬೆಂಗಳೂರು: ಕೋವಿಡ್ ಪ್ರಕರಣ ಶೇ.2 ಕ್ಕಿಂತ ಹೆಚ್ಚಾದರೆ ಕಠಿಣ ನಿಯಮ ಜಾರಿಗೊಳಿಸಲು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವೈಜ್ಞಾನಿಕವಾದಂತಹ, ಅಂಕಿ- ಅಂಶ ಸಮೇತವಾಗಿ ಸಭೆಯಲ್ಲಿ ಕೋವಿಡ್ ಸ್ಥಿತಿಗತಿ ಅವಲೋಕಿಸಲಾಗಿದೆ. ಪಕ್ಕದ ರಾಜ್ಯ ಕೇರಳ ಕೋವಿಡ್ ಸ್ಥಿತಿಗತಿ ಬಗ್ಗೆ ವಿವರವಾಗಿ ಚರ್ಚೆ ಮಾಡಲಾಗಿದೆ. ಕೋವಿಡ್ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇವೆ. ಶೇ.2 ಪಾಸಿಟಿವಿಟಿ ದರ ಹೆಚ್ಚಾದರೆ, ಆಕ್ಸಿಜನ್ ಬೆಡ್ ಶೇ.10 ಆಕ್ಯುಪೈ ಆದರೆ ಕಠಿಣ ನಿಯಮ ಹೇರಲು ಸೂಚನೆ ನೀಡಲಾಗಿದೆ ಎಂದರು.
ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ, ಹಾಸನ, ಕೊಡಗು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಾಮರಾಜನಗರ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರಲ್ಲಿ ಪಾಸಿಟಿವಿಟಿ ದರ ಹೆಚ್ಚಿದೆ. ಇಲ್ಲಿ ಟೆಸ್ಟಿಂಗ್ ಮತ್ತು ಲಸಿಕೆ ಹೆಚ್ಚಾಗಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿದರು.
ಗಡಿ ಗ್ರಾಮಗಳಲ್ಲಿ ಕಡ್ಡಾಯ ಟೆಸ್ಟಿಂಗ್
ಕೇರಳ ಮತ್ತು ಮಹಾರಾಷ್ಟ್ರ ಗಡಿ ಜಿಲ್ಲೆಗಳ 10 ಕಿಮೀ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಕಡ್ಡಾಯ ಟೆಸ್ಟಿಂಗ್ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಕಲಬುರಗಿ, ತುಮಕೂರು, ರಾಯಚೂರು, ಬೀದರ್, ಹಾವೇರಿ, ವಿಜಯಪುರ ಇತರ ಜಿಲ್ಲೆಗಳಲ್ಲಿ ಟೆಸ್ಟಿಂಗ್ ಹೆಚ್ಚಿಸಬೇಕು ಎಂದು ನಿರ್ದೇಶಿಸಲಾಗಿದೆ ಎಂದರು.
6 ಜೀನೋಮ್ ಟೆಸ್ಟಿಂಗ್ ಲ್ಯಾಬ್ ಪ್ರಾರಂಭಿಸಲು ತೀರ್ಮಾನ ಮಾಡಲಾಗಿದೆ. ಮೂರು ವಾರದಲ್ಲಿ ಲ್ಯಾಬ್ ಪ್ರಾರಂಭವಾಗಲಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ಕಲಬುರಗಿ, ಬೆಳಗಾವಿಯಲ್ಲಿ ಲ್ಯಾಬ್ ಆರಂಭಿಸುತ್ತೇವೆ ಎಂದು ತಿಳಿಸಿದರು.
ಪಾಸಿಟಿವಿಟಿ ದರ ಶೇ.2 ಕಡಿಮೆ ಇರುವ ಕಡೆ ಶಾಲೆ ಆರಂಭ:
ಶೆ.2 ಪಾಸಿಟಿವಿಟಿ ದರ ಕಡಿಮೆ ಇರುವ ಕಡೆ ಶಾಲೆ ಆರಂಭ ಮಾಡಲಾಗುತ್ತದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಜಿಲ್ಲಾವಾರು ಪಾಸಿಟಿವಿಟಿ ದರ ನೋಡಿಕೊಂಡು ತೀರ್ಮಾನ ಕೈಗೊಳ್ಳಲು ಸೂಚಿಸಲಾಗಿದೆ. ಗಡಿ ಜಿಲ್ಲೆಗಳಲ್ಲೂ ಶೇ.2 ಪಾಸಿಟಿವಿಟಿ ದರ ಕಡಿಮೆ ಇದ್ದರೆ ಶಾಲೆ ಆರಂಭಿಸಲು ಸೂಚಿಸಲಾಗಿದೆ. ಗಡಿ ಪಕ್ಕದ ತಾಲೂಕುಗಳಲ್ಲಿ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಆದ್ಯತೆ ಮೇರೆಗೆ ಶಿಕ್ಷಕರಿಗೆ ಲಸಿಕೆ
ಶಾಲಾ ಶಿಕ್ಷಕರಿಗೆ ಹಾಗೂ ಪೋಷಕರಿಗೆ ಆದ್ಯತೆ ಮೇರೆಗೆ ಲಸಿಕೆ ಹಾಕುತ್ತೇವೆ. ಆಗಸ್ಟ್ 23ಕ್ಕೆ ನಿಗದಿಯಂತೆ 9-12 ತರಗತಿ ಆರಂಭವಾಗಲಿದೆ. ಅದಕ್ಕೆ ಬೇಕಾದ ಮಾರ್ಗಸೂಚಿ ಹೊರಡಿಸಲಾಗುತ್ತದೆ. 14.89 ಲಕ್ಷ ಲಸಿಕೆ ಲಭ್ಯವಿದೆ. 30 ಲಕ್ಷ ಈ ತಿಂಗಳಾಂತ್ಯಕ್ಕೆ ಬರಲಿದೆ. ಮುಂದಿನ ವಾರ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾಗಿ ಹೆಚ್ಚಿನ ಲಸಿಕೆಗೆ ಬೇಡಿಕೆ ಇಡುತ್ತೇವೆ. ಎರಡನೇ ಅಲೆ ಇನ್ನೂ ಮುಗಿದಿಲ್ಲ. ಮೂರನೇ ಅಲೆ ಆರಂಭ ಆಗಿಲ್ಲ ಎಂದು ತಜ್ಞರು ಹೇಳಿದ್ದಾರೆ ಎಂದರು.
ಕೇರಳದವರು ನಮ್ಮ ಮೇಲೆ ಕೇಸ್ ಹಾಕಿದ್ದಾರೆ
ಗಡಿ ನಿರ್ಬಂಧ ಸಂಬಂಧ ಕೇರಳದವರು ನಮ್ಮ ಮೇಲೆ ಕೇಸ್ ಹಾಕಿದ್ದಾರೆ. ಕೇರಳದಲ್ಲೇ ಮೊದಲ ಅಲೆ ಬಂದಿದ್ದು, ಎರಡನೇ ಅಲೆಯೂ ಕೇರಳದಲ್ಲೇ ಕಾಣಿಸಿಕೊಂಡಿದೆ. ನಮ್ಮ ರಾಜ್ಯದ ಜನರ ಆರೋಗ್ಯ ಕಾಪಾಡುವುದು ನಮ್ಮ ಜವಾಬ್ದಾರಿ. ಜನರ ಜೀವ ಮತ್ತು ಜೀವಮದ ನಿರ್ವಹಣೆಯ ಜವಾಬ್ದಾರಿ ಸರ್ಕಾರದ ಮೇಲಿದೆ. ಹೀಗಾಗಿ ನಾವು ಕೋರ್ಟ್ ನಲ್ಲಿ ಹೋರಾಡುತ್ತೇವೆ ಎಂದರು.