ಯಲಹಂಕ: ನಾನು ನನ್ನ ಪರಿವಾರ, ನನ್ನ ಬೂತ್ ಎಂಬ ಸಂಕಲ್ಪದೊಂದಿಗೆ ಬೂತ್ ಟಾಸ್ಕ್ ಫೋರ್ಸ್ ಮೂಲಕ ಮನೆ ಮನೆ ಸರ್ವೆ ಮಾಡಿ ಸೋಂಕಿತರನ್ನ ಪತ್ತೆ ಮಾಡುವ ಅಭಿಯಾನಕ್ಕೆ ಯಲಹಂಕದಲ್ಲಿ ವೈದಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಚಾಲನೆ ನೀಡಿದರು.
ರಾಜ್ಯಾದ್ಯಂತ ಕೋವಿಡ್-19 ರುದ್ರ ತಾಂಡವವಾಡುತ್ತಿದೆ. ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ 17 ಸಾವಿರ ಗಡಿಯಲ್ಲಿದೆ. ಸೋಂಕನ್ನ ಶೀಘ್ರವಾಗಿ ಪತ್ತೆ ಹಚ್ಚಿ ನಿಯಂತ್ರಣಕ್ಕೆ ತಂದು ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ನಾನು ನನ್ನ ಪರಿವಾರ, ನನ್ನ ಬೂತ್ ಎಂಬ ಸಂಕಲ್ಪದೊಂದಿಗೆ ಬೂತ್ ಟಾಸ್ಕ್ ಫೋರ್ಸ್ ಮೂಲಕ ಮನೆ ಮನೆ ಸರ್ವೆ ಮಾಡಿ ಸೋಂಕಿತರನ್ನ ಪತ್ತೆ ಮಾಡುವ ಅಭಿಯಾನಕ್ಕೆ ಸಚಿವ ಡಾ.ಕೆ ಸುಧಾಕರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವರು, ರಾಜ್ಯದಲ್ಲಿ ವಿನೂತನ ಕಾರ್ಯಕ್ರಮವಾದ ರ‍್ಯಾಪಿಡ್ ಟೆಸ್ಟ್ ಮೂಲಕ ಸೋಂಕಿತರನ್ನ ಪತ್ತೆ ಮಾಡುವ ಅಭಿಯಾನವನ್ನು ಪ್ರಾರಂಭ ಮಾಡಲಾಗಿದೆ. ಮನೆ ಮನೆಗೆ ತೆರಳಿ ಸೋಂಕಿತರನ್ನು ಪತ್ತೆ ಹಚ್ಚಿ ಪರೀಕ್ಷೆ ಮಾಡಲಾಗುವುದು. ಈ ಪರೀಕ್ಷೆಯಲ್ಲಿ ಕೇವಲ 20 ನಿಮಿಷದಲ್ಲಿ ಫಲಿತಾಂಶ ಕೈ ಸೇರಲಿದೆ. ಹೀಗಾಗಿ ರೋಗಪತ್ತೆ ಬಹಳಷ್ಟು ಸುಲಭವಾಗಲಿದೆ ಎಂದರು.
ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೂತ್ ಮಟ್ಟದಲ್ಲಿ ಟಾಸ್ಕ್ ಪೋರ್ಸ್ ರಚಿಸಲಾಗಿದೆ. ಪ್ರತಿ ಬೂತ್ ನಲ್ಲಿ 10 ಜನರನ್ನ ಪಟ್ಟಿ ಮಾಡಲಾಗಿದೆ. ಮೂರರಿಂದ ಐದು ಜನರ ತಂಡ ಎಲ್ಲ ಮನೆಗಳಿಗೂ ಭೇಟಿ ನೀಡಿ ಸ್ವ್ಯಾಬ್ ಟೆಸ್ಟ್ ಮಾಡಿಸಲು ಪ್ರತ್ಯೇಕ ಜವಾಬ್ದಾರಿ ನೀಡಲಾಗಿದೆ. 20 ನಿಮಿಷಗಳಲ್ಲೇ ಕೋವಿಡ್ -19 ಫಲಿತಾಂಶ ಬರುವುದರಿಂದ ರೋಗ ಪತ್ತೆ ಸುಲಭವಾಗಲಿದೆ. ನಾಗರಿಕರು ಸಹಕಾರ ನೀಡಬೇಕು. ವೈರಸ್ ನಿಯಂತ್ರಣಕ್ಕೆ ಬರುವವರೆಗೂ ಟೆಸ್ಟಿಂಗ್ ಮುಂದುವರೆಸಲಾಗುವುದು ಎಂದು ತಿಳಿಸಿದರು.
ಯಲಹಂಕ ಕ್ಷೇತ್ರಾದ್ಯಂತ ಕೋವಿಡ್ ಟಾಸ್ಕ್ ಪೋರ್ಸ್ ತಂಡ ರಚಿಸಲಾಗಿದೆ. 2 ಸಾವಿರ ಜನ ಅಧಿಕಾರಿಗಳು 6 ಸಾವಿರ ಜನರ ಸ್ವಯಂಸೇವಕರ ತಂಡ ರಚಿಸಲಾಗಿದೆ. ಪ್ರತಿ ಮನೆಗೆ ಭೇಟಿ ನೀಡಿ ಥರ್ಮಲ್ ಸ್ಕ್ಯಾನ್, ಆಕ್ಸಿಜನ್ ಚೆಕ್ ಮಾಡಲಾಗುವುದು. ಸಮೀಕ್ಷೆ ಪೂರ್ಣಗೊಂಡ ನಂತರ ರೋಗದ ಲಕ್ಷಣ ಇರುವವರಿಗೆ ಸ್ವ್ಯಾಬ್ ಟೆಸ್ಟ್ ಮಾಡಿಸಲಾಗುವುದು ಈ ಮೂಲಕ ಕೊರೊನಾವನ್ನು ಮುಕ್ತ ಮಾಡಲು ಸಂಕಲ್ಪ ಮಾಡಲಾಗಿದೆ ಎಂದು ತಹಶೀಲ್ದಾರ್ ರಘುಮೂರ್ತಿ ತಿಳಿಸಿದರು.