ಬೆಂಗಳೂರು: ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಕೈಬಿಟ್ಟಿದೆ. ಆದರೆ ರಾಜ್ಯ ಸರ್ಕಾರ ಅದನ್ನು ಜಾರಿಗೊಳಿಸಲು ಮುಂದಾಗಿರುವ ನಿರ್ಧಾರವನ್ನು ಹಿಂಪಡೆಯಲು ರಾಜ್ಯ ರೈತ ಸಂಘ ಮತ್ತು ಹಸಿರು ಸೇವೆ ಸಂಘ ಸೆಪ್ಟೆಂಬರ್ 12 ರಂದು ವಿಧಾನಸೌಧ ಮುತ್ತಿಗೆ ಚಳವಳಿಯನ್ನು ಹಮ್ಮಿಕೊಂಡಿವೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇಲ್ಲದ ಕಾನೂನು ರಾಜ್ಯದಲ್ಲಿ ಜಾರಿಗೆ ತರುವ ಮೂಲಕ ರೈತರನ್ನು ನಾಶ ಮಾಡಲು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮುಂದಾಗಿದೆ. ಹೈನುಗಾರಿಕೆ ರೈತರ ಕೈತಪ್ಪಿಸಿ ಬಂಡವಾಳ ಶಾಹಿಗಳಿಗೆ ನೀಡಲು ತಿದ್ದುಪಡಿ ಮಾಡಿದ್ದಾರೆ. ಗೋಶಾಲೆ ದೊಡ್ಡ ಪ್ರಮಾಣ ಮಾಡಿದವರಿಗೆ ಶೇ.50ರಷ್ಟು ಸಹಾಯ ಮಾಡುವ ನೀತಿ ಜಾರಿಗೆ ತಂದು, ವಿದೇಶಿ ಹಾಲು ಮಾರುಕಟ್ಟೆ ತೆರೆಯಲು ಹವಣಿಸುತ್ತಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಕೃಷಿ ಫಲವತ್ತಾದ ಭೂಮಿಯನ್ನು ಮುಟ್ಟುಗೋಲು ಹಾಕುವುದು ಸಂಪೂರ್ಣವಾಗಿ ಕೈ ಬಿಡಬೇಕು. ವಿವಿಧ ಕಾರಣಗಳಿಗೆ ರೈತರು ಸರ್ಕಾರವನ್ನು ಎಚ್ಚರಿಸುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 12 ರಂದು 10,000 ಅಧಿಕ ರೈತರು ವಿಧಾನಸೌಧ ಮುತ್ತಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
10,000 ಕೋಟಿ ವಿಪತ್ತು ನಿಧಿ ರಾಜ್ಯಕ್ಕೆ ಬರಲಿ : ಅತಿವೃಷ್ಠಿಯಿಂದ ರೈತರ ಜೀವನ ಬೀದಿಗೆ ಬಿದ್ದಿದೆ. ರೈತರಿಗೆ ಪರಿಹಾರವಾಗಿ ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಪತ್ತು ನಿಧಿ ಸುಮಾರು 10,000 ಕೋಟಿ ರೂ ರಾಜ್ಯಕ್ಕೆ ತರುವ ಮೂಲಕ ಕಣ್ಣೀರಿನಲ್ಲಿ ಕೈ ತೊಳೆಯುವ ರೈತರಿಗೆ ನೆರವಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಇದನ್ನೂ ಓದಿ : ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನಸ್ಪಂದನ ಕಾರ್ಯಕ್ರಮಕ್ಕೆ ಕ್ಷಣಗಣನೆ