ಬೆಂಗಳೂರು: ಲಾಕ್ಡೌನ್ ಬಳಿಕ ಬಳಿಕ ಸ್ಥಗಿತಗೊಂಡಿದ್ದ ಕೋರ್ಟ್ ಕಲಾಪಗಳು ಜೂನ್ 1ರಿಂದ ಮತ್ತೆ ಆರಂಭಗೊಳ್ಳಲಿವೆ. ಈ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ನೋಟಿಫಿಕೇಷನ್ ಹೊರಡಿಸಿದ್ದಾರೆ.
ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಕಾರ್ಯ ಕಲಾಪಗಳನ್ನು ಸ್ಥಗಿತಗೊಳಿಸಿದ್ದ ರಾಜ್ಯದ ಎಲ್ಲ ಕೋರ್ಟ್ಗಳು ಜೂನ್ 1ರಿಂದ ಮತ್ತೆ ಕಾರ್ಯಾರಂಭ ಮಾಡಲಿವೆ. ಬೆಂಗಳೂರಿನ ಹೈಕೋರ್ಟ್ ಪ್ರಧಾನ ಪೀಠ, ಧಾರವಾಡ ಮತ್ತು ಕಲ್ಬುರ್ಗಿ ಪೀಠಗಳು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳು ಕೌಟುಂಬಿಕ ನ್ಯಾಯಾಲಯಗಳು ಕಾರ್ಮಿಕ ನ್ಯಾಯಾಲಯಗಳು ಜೂನ್ 1ರಿಂದ ಕೆಲಸ ಆರಂಭಿಸಲಿವೆ. ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮೊದಲಿಗೆ ಸೀಮಿತ ಕೋರ್ಟ್ ಗಳ ಕಾರ್ಯಾರಂಭಕ್ಕೆ ಅನುಮತಿ ನೀಡಲು ಹೈಕೋರ್ಟ್ ಉದ್ದೇಶಿಸಿದೆ.
ನ್ಯಾಯಾಲಯಗಳ ಕಾರ್ಯಾರಂಭಕ್ಕೆ ಸಂಬಂಧಿಸಿದ ಸ್ಪಷ್ಟ ಮಾಹಿತಿಯನ್ನು ಮೇ 26ರಂದು ಹೈಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರಕಟಿಸಲಾಗುವುದು ಎಂದು ನೋಟಿಫಿಕೇಷನ್ನಲ್ಲಿ ತಿಳಿಸಲಾಗಿದೆ.