ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಮುಂದಿನ ಮೇ ತಿಂಗಳಲ್ಲಿ ಜರುಗಲಿದ್ದು, ಗುಜರಾತ್ ಫಲಿತಾಂಶ ರಾಜ್ಯದಲ್ಲಿ ಮರುಕಳಿಸದಂತೆ ತಡೆಗೆ ಕಾಂಗ್ರೆಸ್ ನಾಯಕರು ಈಗಿನಿಂದಲೇ ಎಚ್ಚೆತ್ತು ವಿಧಾನಸಭೆ ಸಂಗ್ರಾಮಕ್ಕೆ ಸಜ್ಜಾಗುತ್ತಿದ್ದಾರೆ. ರಾಜ್ಯದ ಮತದಾರರನ್ನು ತಮ್ಮೆ ಕಡೆಗೆ ಸೆಳೆಯಲು ಜನಪ್ರಿಯ ಕಾರ್ಯಕ್ರಮದ ಭರವಸೆ ಹಾಗೂ ಹೊಸ ಕಾರ್ಯತಂತ್ರಗಳನ್ನು ರೂಪಿಸಲು ತೀರ್ಮಾನಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕರ ನಡುವೆ ಸಾಮರಸ್ಯವಿಲ್ಲ, ಒಗ್ಗಟ್ಟು ಕಡಿಮೆಯಾಗಿದೆ, ಪಕ್ಷ ಬಿಡಲು ಹಲವು ಶಾಸಕರು, ಮಾಜಿ ಸಚಿವರು ಮುಂದಾಗಿರುವುದು, ಪಕ್ಷ ಅಧಿಕಾರಕ್ಕೆ ಬರುವ ಮುನ್ನ ಮುಂದಿನ ಸಿಎಂ ಆಗಲು ಹಲವರು ಪ್ರಯತ್ನ ನಡೆಸಿದ್ದಾರೆ. ಟಿಕೆಟ್ಗೆ ಪ್ರತಿ ಕ್ಷೇತ್ರದಲ್ಲಿ 5 ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಲ್ಲಿ ಪ್ರಬಲ ಪೈಪೋಟಿ ಏರ್ಪಟಿದ್ದು, ಒಂದೊಮ್ಮೆ ಟಿಕೆಟ್ ಲಭಿಸದಿದ್ದರೆ ಬಂಡಾಯ ಏಳಲಿದ್ದಾರೆ... ಈ ರೀತಿ ಸಾಲು ಸಾಲು ಋಣಾತ್ಮಕ ಅಂಶಗಳು ಮತದಾರರ ಮೇಲೆ ಪ್ರಭಾವ ಬೀರುತ್ತಿವೆ.
ಪಕ್ಷದ ಕಾರ್ಯಕರ್ತರಲ್ಲೂ ಸಹ ಹಿಂದಿನ ಉತ್ಸಾಹ ಇಲ್ಲ ಎಂಬ ಅಂಶ ಅರಿತಿದ್ದು, ಪಕ್ಷದ ಬಲವರ್ಧನೆ ಹಾಗೂ ಕಾರ್ಯಕರ್ತರಲ್ಲಿ ಆತ್ಮ ವಿಶ್ವಾಸ ತುಂಬುವ, ಮತದಾರರ ನಂಬಿಕೆ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್ ಮುಂದಾಗಿದೆ.
ಇದುವರೆಗೂ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿಯುವ, ಭ್ರಷ್ಟಾಚಾರ ಹಾಗೂ ವಿವಿಧ ಸಚಿವರ ವಿರುದ್ಧ ಆರೋಪ ಮಾಡುವ ಪಾತ್ರವನ್ನೂ ಪಕ್ಷ ನಿಭಾಯಿಸುತ್ತಿದೆ. ಕಾಂಗ್ರೆಸ್ ಅಧಿಕಾರದ ವೇಳೆ ಜಾರಿಗೊಳಿಸಿದ್ದ ಜನಪ್ರಿಯ ಕಾರ್ಯಕ್ರಮಗಳ ವಿವರ ನೀಡುವುದಕ್ಕೆ ಸೀಮಿತವಾಗಿದ್ದ ಕಾಂಗ್ರೆಸ್ ನಾಯಕರು ಮುಂದೆ ತಾವು ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಎಂಬ ವಿವರ ನೀಡಲು ತೀರ್ಮಾನಿಸಿದ್ದಾರೆ.
ಪ್ರವಾಸ ಕೈಗೊಂಡು ಭರವಸೆ ತೀರ್ಮಾನ: ಪಕ್ಷದ ಪ್ರಣಾಳಿಕೆ ಘೋಷಣೆ ಮಾಡುವ ಮುನ್ನ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಸಮೀಕ್ಷೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿರುವ ಭರವಸೆ ಮೊದಲೇ ನೀಡಲು ತೀರ್ಮಾನಿಸಿದ್ದಾರೆ. ರಾಜ್ಯ ರಾಜಧಾನಿ ಮಾಹಿತಿ ತಂತ್ರಜ್ಞಾನ ಹಬ್ ಆಗಿದೆ. ಸ್ಟಾರ್ಟ್ ಅಪ್ ರಾಜಧಾನಿ ಎನಿಸಿಕೊಂಡಿದೆ. ದೇಶ ವಿದೇಶಗಳ ಸಾಕಷ್ಟು ಕಂಪನಿಗಳು ನಗರದಲ್ಲಿ ನೆಲೆಗೊಂಡಿದ್ದು, ಅವರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವ ಭರವಸೆಯನ್ನು ಕಾಂಗ್ರೆಸ್ ನೀಡಲು ತೀರ್ಮಾನಿಸಿದೆ.
ಕೋವಿಡ್ ನಿಂದ ಸಾಕಷ್ಟು ಯುವಕರು ಉದ್ಯೋಗ ಕಳೆದುಕೊಂಡಿದ್ದು, ರಾಜ್ಯದ ಆರ್ಥಿಕ ಸ್ಥಿತಿ ಸಹ ಹದಗೆಟ್ಟಿದೆ. ರಾಜ್ಯವನ್ನು ಆರ್ಥಿಕವಾಗಿ ಸದೃಢಗೊಳಿಸುವ ಜತೆಗೆ ಉದ್ಯೋಗಾವಕಾಶ ಸೃಷ್ಟಿಸುವ ನಿಟ್ಟಿನಲ್ಲಿ ಹೊಸ ಕೈಗಾರಿಕೆಗಳು ಹಾಗೂ ಕಂಪನಿಗಳನ್ನು ಸ್ಥಾಪಿಸುವ ಭರವಸೆಯನ್ನು ಕಾಂಗ್ರೆಸ್ ನೀಡಲು ಚಿಂತನೆ ನಡೆಸಿದೆ.
ಬಹಳಷ್ಟು ಜನ ನಗರದಿಂದ ಗ್ರಾಮೀಣ ಭಾಗಗಳಿಗೆ ತೆರಳಿದ್ದು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಥವರನ್ನ ಉತ್ತೇಜಿಸುವ ಹಾಗೂ ಹೊಸ ಆವಿಷ್ಕಾರವನ್ನು ಕಡಿಮೆ ಬೆಲೆಗೆ ಇವರಿಗೆ ತಲುಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ.
ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ಬಹಳಷ್ಟು ಬದಲಾವಣೆ ಕಾಣುತ್ತಿದೆ. ಸಾವಯವ ಕೃಷಿ ಪದ್ಧತಿ ಹಾಗೂ ಗ್ರಾಮೀಣ ಭಾಗದಲ್ಲಿ ಯಂತ್ರೋಪಕರಣಗಳ ಬಳಕೆ ಮೂಲಕ ಕೃಷಿ ಚಟುವಟಿಕೆ ಜನಪ್ರಿಯವಾಗುತ್ತಿದೆ. ಇದನ್ನು ಹೆಚ್ಚಾಗಿ ಉತ್ತೇಜಿಸಲು ತೀರ್ಮಾನಿಸಲಾಗಿದೆ.
ಮುಂದಿನ ವಾರ ಸಭೆ: ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಪ್ರಸ್ತಾಪ ಮಾಡದಿರಲು ತೀರ್ಮಾನಿಸಿದ ಕಾಂಗ್ರೆಸ್ ನಾಯಕರು, ಒಂದೊಮ್ಮೆ ಸರ್ಕಾರ ಅಧಿಕಾರಕ್ಕೆ ಬಂದ್ರೆ ವಿವಿಧ ಕ್ಷೇತ್ರಗಳಲ್ಲಿಅನುಭವ ಇರುವವರನ್ನುಸಚಿವರನ್ನಾಗಿ ನೇಮಿಸುವ, ಅವರಿಗೆ ಸೂಕ್ತ ಹಾಗೂ ಉತ್ತಮ ರೀತಿಯಲ್ಲಿ ಸಹಕರಿಸುವ ಅಧಿಕಾರಿಗಳನ್ನು ನೀಡುವ ನಿಟ್ಟಿನಲ್ಲಿಯೂ ಚಿಂತನೆ ನಡೆಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಂಬರುವ ಲೋಕಸಭೆ ಚುನಾವಣೆ ವೇಳೆಗೆ ಉತ್ತಮ ಕಾರ್ಯ ಮಾಡುವ ಜತೆಗೆ ಜನ ಮನ್ನಣೆ ಗಳಿಸಿ ಹೆಚ್ಚು ಸಂಸದರನ್ನು ಲೋಕಸಭೆಗೆ ಕಳಿಸಿಕೊಡುವ ನಿಟ್ಟಿನಲ್ಲಿ ಚಿಂತನ ಮಂಥನ ನಡೆದಿದೆ.
ಯಾವ ಮಾದರಿ ಆರಂಭದ ಒಂದು ವರ್ಷ ಕಾರ್ಯ ನಿರ್ವಹಿಸಬೇಕು ಎಂದು ರಾಜ್ಯ ಕಾಂಗ್ರೆಸ್ ನಾಯಕರು ಚರ್ಚೆ ಆರಂಭಿಸಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಪಕ್ಷ ಆಂತರಿಕ ಬಲವರ್ಧನೆ ಮಾಡಿಕೊಂಡು ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಕಾರ್ಯ ಕ್ಕೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ಜನರಿಗೆ ನೀಡಬೇಕಾಗಿರುವ ಭರವಸೆ ಕುರಿತು ತಜ್ಞರೊಂದಿಗೆ ಚರ್ಚಿಸಲು ತೀರ್ಮಾನಿಸಿದೆ. ಎಲ್ಲವೂ ಅಂದುಕೊಂಡಂತೆ. ಆದರೆ ಮುಂದಿನ ವಾರ ನಗರದಲ್ಲಿ ಕಾಂಗ್ರೆಸ್ ಪಕ್ಷದ ಮಹತ್ವದ ಸಭೆ ಹಮ್ಮಿಕೊಳ್ಳಲು ತೀರ್ಮಾನಿಸಿದೆ.
ಕಾಂಗ್ರೆಸ್ಗೆ ಅಧಿಕಾರ ವಿಶ್ವಾಸ : ರಾಜ್ಯದಲ್ಲಿ ಬಿಜೆಪಿ ಸರ್ಕಾರದ ದುರಾಡಳಿತ ಹಾಗೂ ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದಾರೆ. ಬದಲಾವಣೆ ಬಯಸುತ್ತಿರುವ ಜನರಿಗೆ ಕಾಂಗ್ರೆಸ್ ಒಂದು ಆಶಾಕಿರಣ. ಬಿಜೆಪಿ ಸರ್ಕಾರವನ್ನು ಹಿಂದೆ ಕಿತ್ತೊಗೆದ ಮಾದರಿ ಈ ಸಾರಿಯೂ ಜನ ಒಂದು ಸೂಕ್ತ ನಿರ್ಧಾರ ಕೈಗೊಂಡು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ.
ಸುಳ್ಳು ಭರವಸೆಗಳನ್ನ ಹಿಂದೆಯೂ ನೀಡಿರಲಿಲ್ಲ ಮುಂದೆಯೂ ನೀಡುವುದಿಲ್ಲ. ಈ ಸಾರಿ ನಾವು ಏನು ಮಾಡಲಿದ್ದೇವೆ ಎಂಬುದನ್ನು ಜನರಿಗೆ ಮನಮುಟ್ಟುವಂತೆ ತಲುಪಸಿಲಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಭರವಸೆ ನೀಡಿದಂತೆ ನಡೆದುಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ:ಮೋದಿ ಮನವಿಗೆ ಗುಜರಾತ್ ಮಣೆ; ಹಿಮಾಚಲದಲ್ಲಿ ನಡೆಯದ ಕೇಸರಿ ಕಮಾಲ್: ಕಾರಣಗಳಿವು..