ಬೆಂಗಳೂರು: ಲೋಕಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಯನ್ನು ಬಿಜೆಪಿ ಅಧ್ಯಕ್ಷರು ಹೇಳಿ ಮಾಡಿಸಿದ ಹಾಗಿದೆ ಎಂದು ಡಿಸಿಎಂ ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ವಸ್ತು ಸ್ಥಿತಿ ದೇಶದಲ್ಲಿ ಬೇರೆ ರೀತಿಯಲ್ಲಿದೆ. ಇಂತಹ ಸಂದರ್ಭದಲ್ಲಿ 300 ಸ್ಥಾನಗಳು ಬರುತ್ತೆ ಅಂತ ಹೇಳಿಸಿಕೊಂಡು ಬಿಜೆಪಿ ಸಮಾಧಾನಪಟ್ಟುಕೊಳ್ಳುತ್ತಿದೆ. ಫಲಿತಾಂಶ ಬಂದ ಬಳಿಕ ಚಿತ್ರಣ ಗೊತ್ತಾಗುತ್ತೆ. ಈ ಬಾರಿ ಯುಪಿಎ ಅಧಿಕಾರಕ್ಕೆ ಬರುವ ಎಲ್ಲಾ ಸಾಧ್ಯತೆಗಳು ಇವೆ. ನಿನ್ನೆ ದೆಹಲಿ ಸಭೆಯಲ್ಲೂ ಚರ್ಚೆ ಮಾಡಿದ್ದೇವೆ. ಅಲ್ಲಿ ಸಿಕ್ಕ ಮಾಹಿತಿ ಪ್ರಕಾರ ಯುಪಿಎ ಮತ್ತೆ ಅಧಿಕಾರಕ್ಕೆ ಬರುತ್ತೆ. ಕರ್ನಾಟಕದಲ್ಲಿ 18 ಸೀಟು ಬಿಜೆಪಿಗೆ ಬರುತ್ತೆ ಅಂದರೆ ನಂಬಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಇನ್ನು ನನಗೆ ಎಗ್ಸಿಟ್ ಪೋಲ್ನಲ್ಲಿ ವಿಶ್ವಾಸ ಇಲ್ಲ. ಗ್ರೌಂಡ್ ರಿಯಾಲಿಟಿ ಬೇರೆ ರೀತಿಯಲ್ಲಿದೆ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ 20 ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ. ಇದು ನಮ್ಮ ಲೆಕ್ಕಾಚಾರ, ವಾತಾವರಣ ಕೂಡಾ ಹಾಗೆಯೇ ಇದೆ. ಚುನಾವಣಾ ಪ್ರಚಾರ ಆಧರಿಸಿ ನಾವು ಹೇಳ್ತಿದ್ದೇವೆ. ಇಂತಹಾ ಸಂದರ್ಭಗಳಲ್ಲಿ 18 ಸೀಟು ಬಿಜೆಪಿಗೆ ಬರುತ್ತೆ ಅಂತ ಹೇಳೋದ್ರಲ್ಲಿ ಅರ್ಥ ಏನಿದೆ? ಇಂತಹಾ ಸಂದರ್ಭದಲ್ಲಿ ಕೇಂದ್ರದಲ್ಲಿ ಮುನ್ನೂರು ಸ್ಥಾನಗಳು ಬರುತ್ತೆ ಅಂತ ಹೇಳಿಸಿಕೊಂಡು ಬಿಜೆಪಿ ಸಮಾಧಾನಪಟ್ಟುಕೊಳ್ಳುತ್ತಿದೆ. ಫಲಿತಾಂಶ ಬಂದ ಬಳಿಕ ಚಿತ್ರಣ ಗೊತ್ತಾಗುತ್ತೆ ಎಂದು ಹೇಳಿದರು.
ದೋಸ್ತಿ ಸುಭದ್ರ :
ಸಮೀಕ್ಷೆ ಮಾದರಿ ಫಲಿತಾಂಶ ಬಂದರೆ ದೋಸ್ತಿಗಳ ಮೇಲಿನ ಪರಿಣಾಮ ವಿಚಾರ ಕುರಿತು ಕೇಳಿದ ಪ್ರಶ್ನೆಗೆ, ಆಗೋದಕ್ಕೆ ಸಾಧ್ಯವಿಲ್ಲ ಅಂದ ಮೇಲೆ, ನಾನು ಯಾವುದೇ ಊಹೆ ಮಾಡೋಕೆ ಹೋಗುವುದಿಲ್ಲ. ರಾಜಕಾರಣ ಹೇಗಿರುತ್ತೆ ಅಂದರೆ ಪರಿಸ್ಥಿತಿ ಫಲಿತಾಂಶ ಬಂದರೆ ಯಾವ್ಯಾವ ಲೆಕ್ಕಾಚಾರ ಯಾರು ಹಾಕಿದ್ದಾರೆ ನೋಡಬೇಕು. ಸರ್ಕಾರ ಸುಭದ್ರವಾಗಿರುತ್ತೆ ಎಂದರು.
ಇವಿಎಂ ಹ್ಯಾಕ್ ಬಗ್ಗೆ ಇಡೀ ದೇಶದಲ್ಲಿ ಮಾತುಗಳಿವೆ. ಕಳೆದ ಬಾರಿ ಕೂಡಾ ಅದನ್ನು ಮಾತನಾಡಿದ್ದೆವು. ಕಾಂಗ್ರೆಸ್ ನೇತೃತ್ವದಲ್ಲಿ ಅನೇಕ ಪಕ್ಷಗಳು ರಾಷ್ಟ್ರಪತಿ ಹಾಗೂ ಎಲೆಕ್ಷನ್ ಕಮಿಟಿ ಭೇಟಿ ಮಾಡಿದ್ದೆವು. ಬ್ಯಾಲೆಟ್ ಪೇಪರ್ ಬೇಕು ಅಂತ ಹೇಳಿದ್ದೆವು. ಅದನ್ನು ಅವರು ತಳ್ಳಿ ಹಾಕಿದ್ದಾರೆ. ಬಹಳಷ್ಟು ಜನ ಇವಿಎಂ ಹ್ಯಾಕ್ ಆಗೋದನ್ನು ತೋರಿಸಿಕೊಟ್ಟಿದ್ದಾರೆ. ನಮಗೂ ಕೂಡಾ ಅದೇ ರೀತಿಯ ಅನುಮಾನಗಳಿವೆ. ಇದೆಲ್ಲಾ ಹಿನ್ನೆಲೆಯಲ್ಲಿ ಸಮೀಕ್ಷೆ ನೋಡಿದರೆ ಯಾವ ರೀತಿ ಆಗುತ್ತೆ ಅಂತ ಹೇಳಕ್ಕಾಗಲ್ಲ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರ ಪ್ರತಿಕ್ರಿಯೆ:
ಚುನಾವಣಾ ಮತದಾನೋತ್ತರ ಸಮೀಕ್ಷೆ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿದ್ದು, ಈ ಸಮೀಕ್ಷೆಗಳು ವಾಸ್ತವಕ್ಕೆ ಹತ್ತಿರವಾಗಿಲ್ಲ. ಮೋದಿಯವರು ಅಭಿವೃದ್ಧಿಪರ ಆಡಳಿತ ಕೊಡಲಿಲ್ಲ. ಮೋದಿಯವರು ಪ್ರಚಾರದಲ್ಲೇ ಆಡಳಿತ ಮಾಡಿದ್ದಾರೆ. ಸಾಕಷ್ಟು ಸಮಸ್ಯೆಗಳಿದ್ರೂ ಅವರಿಗೆ ಇಷ್ಟೊಂದು ಅಂಕಿ ಸಂಖ್ಯೆ ತೋರಿಸ್ತಿರೋದು ಆಶ್ಚರ್ಯ. ಎಷ್ಟೋ ಎಕ್ಸಿಟ್ ಪೋಲ್ ಗಳು ನಿಜವಾಗಲ್ಲ. ಮೊನ್ನೆ ಆಸ್ಟ್ರೇಲಿಯದಲ್ಲೂ ಯಾವುದೇ ಎಕ್ಸಿಟ್ ಪೋಲ್ ಸಮೀಕ್ಷೆಗಳು ನಿಜ ಹೇಳಲಿಲ್ಲ. ಚುನಾವಣೋತ್ತರ ಸಮೀಕ್ಷೆಗಳು ತಪ್ಪು ಅಥವಾ ಸುಳ್ಳು ಅಂತ ಹೇಳಲ್ಲ. ಕರ್ನಾಟಕದಲ್ಲಿ ಈ ಸಮೀಕ್ಷೆಗಳು ತೋರಿಸಿರುವುದಕ್ಕಿಂತ ಹೆಚ್ಚು ಸ್ಥಾನಗಳನ್ನು ನಾವು ಪಡೆಯುತ್ತೇವೆ. ರಾಜ್ಯದಲ್ಲಿ ತೋರಿಸಿರುವುದಕ್ಕಿಂತಲೂ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದರು.
ಇನ್ನಷ್ಟು ಬರಬಹುದಿತ್ತು:
ಎರಡೂ ಪಕ್ಷಗಳು ಇನ್ನೂ ಚೆನ್ನಾಗಿ ಕೆಲಸ ಮಾಡಿದ್ದರೆ, ಇನ್ನಷ್ಟು ಸೀಟು ಗೆಲ್ಲಬಹುದಿತ್ತು. ಈ ಸಮೀಕ್ಷೆಗಳನ್ನು ನಾನು ಒಪ್ಪಲ್ಲ. ಮೇ 23ರ ತನಕ ಕಾಯೋಣ. ಆವತ್ತು ನಿಜವಾದ ಸಮೀಕ್ಷೆ ಬರುತ್ತೆ. ನಾವು ರಾಜ್ಯದಲ್ಲೂ ದೇಶದಲ್ಲೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದು ಗುಂಡೂರಾವ್ ಹೇಳಿದರು.
ನಂಬಲ್ಲ ಅಂದ್ರು ಬಿಕೆಹೆಚ್:
ಸದಾಶಿವನಗರದ ಡಿಸಿಎಂ ಪರಮೇಶ್ವರ್ ಸರ್ಕಾರಿ ನಿವಾಸ ಬಳಿ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಬೆಂಗಳೂರು ದಕ್ಷಿಣ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್, ಎಕ್ಸಿಟ್ ಪೋಲ್ ನಾಟ್ ಎ ಎಕ್ಸಾಟ್ ಪೋಲ್. ಮೂಡ್ ಸೆಟ್ ಮಾಡಿ, ಇವಿಎಂಗಳನ್ನ ತಿರುಚುವ ಹುನ್ನಾರ ಇದು. ಚಂದ್ರಬಾಬು ನಾಯ್ಡು ಇದನ್ನ ಪದೇ ಪದೇ ಹೇಳುತ್ತಲೇ ಇದ್ದಾರೆ. ಚಾನೆಲ್ಗಳಲ್ಲಿ ಮೋದಿ ಅಲೆ ಇದೆ. ಎಲ್ಲರೂ ತಮ್ಮ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರಷ್ಟೇ. 23ರಂದು ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದಿದ್ದಾರೆ.