ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದು, ನಾಡಿನ ಸಮಸ್ತ ಜನತೆಗೆ ಸಂಕ್ರಾಂತಿಯ ಶುಭಾಶಯಗಳು. ಈ ಸಂಕ್ರಮಣ ನಮ್ಮೆಲ್ಲ ನೋವು, ಕಷ್ಟ - ನಷ್ಟಗಳನ್ನು ನಿವಾರಿಸಲಿ. ಉತ್ತಮ ಮಳೆ, ಬೆಳೆಯಾಗಿ ಅನ್ನದಾತರ ಬದುಕು ಹಸನಾಗಲಿ. ಮಣ್ಣಿನ ಸೊಗಡು ಹಾಗೂ ರೈತರ ಬದುಕು ಎರಡೂ ಸೇರುವ ಪವಿತ್ರವಾದ ದಿನ. ನಮ್ಮ ಭೂಮಿಗೆ, ರೈತರು ಬೆಳೆದ ಬೆಳೆಗೆ ಹಾಗೂ ಜಾನುವಾರುಗಳಿಗೆ ಪೂಜೆ ಸಲ್ಲಿಸುವ ಪವಿತ್ರ ದಿನ. ಕಳೆದ ವರ್ಷ ಬಹಳ ನೋವು ನಾವು ಅನುಭವಿಸಿದ್ದೇವೆ. ರೈತರಿಗೆ ಉತ್ತಮ ಬೆಳೆ ಸಿಕ್ಕಿಲ್ಲ. ಪ್ರಕೃತಿ ವಿಕೋಪದಿಂದ ಎಲ್ಲರೂ ಸಮಸ್ಯೆ ಅನುಭವಿಸಿದ್ದೇವೆ. ಈ ವರ್ಷ ಹೊಸ ಸಂಕ್ರಮಣದಲ್ಲಿ ಇಂತಹ ಸಮಸ್ಯೆಯನ್ನು ನಿವಾರಿಸುವ ಕಾರ್ಯ ಆಗಲಿ ಹಾಗೂ ರೈತರ ಬದುಕು ಹಸನಾಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಋತು ಮನ್ವಂತರದ ಹಬ್ಬವಾದ ಮಕರ ಸಂಕ್ರಾಂತಿ, ಸುಖ-ಶಾಂತಿಯ ಬಿತ್ತಿ ಬೆಳೆಯಲಿ. ರೈತರ ಸಂಕಷ್ಟಗಳನ್ನು ಕಳೆಯಲಿ, ನೆಮ್ಮದಿಯ ಬದುಕು ಸಕಲ ಜನತೆಯ ಹಿತವ ಕಾಯಲಿ. ಎಲ್ಲರಿಗೂ ನನ್ನ ಶುಭಾಶಯಗಳು ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: ನಾಡು ಪ್ರಗತಿ ಪಥದಲ್ಲಿ ಮುನ್ನಡೆಯಲಿ; ಸಂಕ್ರಾಂತಿ ಶುಭ ಕೋರಿದ ಸಿಎಂ
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದು, ಮಕರ ಸಂಕ್ರಾಂತಿ ದೇಶಕ್ಕೆ ಅನ್ನ ನೀಡುವ ಅನ್ನದಾತನ ಬದುಕನ್ನು ಹಸನಗೊಳಿಸಲಿ. ಅವರು ಎದುರಿಸಿದ ಕಷ್ಟಕಾರ್ಪಣ್ಯಗಳು ದೂರವಾಗಲಿ, ಬದುಕು ಹಸನಾಗಲಿ. ನಾಡಿನ ಸಮಸ್ತ ಜನತೆಗೆ ಶಾಂತಿ ನೆಮ್ಮದಿ ಸಮೃದ್ಧಿ ತರಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: ಸಂಕ್ರಾತಿ ಸಂಭ್ರಮ; ಜನತೆಗೆ ಶುಭಾಶಯ ಕೋರಿದ ದೇವೇಗೌಡರು - ಕುಮಾರಸ್ವಾಮಿ
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್, ಸತೀಶ್ ಜಾರಕಿಹೊಳಿ, ಮಾಜಿ ಡಿಸಿಎಂ ಜಿ ಪರಮೇಶ್ವರ್, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ನಾಯಕರು ನಾಡಿನ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯ ಸಲ್ಲಿಸಿದ್ದಾರೆ.