ಬೆಂಗಳೂರು: ಕೊರೊನಾ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಾಳುತ್ತಿರುವ ನಿರ್ಲಕ್ಷ್ಯ ಧೋರಣೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸಿದೆ.
ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿರುವ ಪಕ್ಷ, ಕೋವಿಡ್ ವಿರುದ್ಧ ಮೋದಿ ಸರ್ಕಾರದ 'ಯೋಜಿತ ಹೋರಾಟ' ಭಾರತವನ್ನ ಪ್ರಪಾತಕ್ಕೆ ತಳ್ಳಿದೆ ಎಂದು ದೂರಿದೆ. ಇದಕ್ಕೆ ನಾಲ್ಕು ಕಾರಣ ಕೂಡ ನೀಡಿದ್ದು, ಐತಿಹಾಸಿಕ ಜಿಡಿಪಿ ಶೇ.24 ಕುಸಿತ, 12 ಕೋಟಿ ಉದ್ಯೋಗ ನಷ್ಟ, 15.5 ಲಕ್ಷ ಕೋಟಿ ಹೆಚ್ಚುವರಿ ಸಾಲ ಹಾಗೂ ವಿಶ್ವದಲ್ಲೇ ದೈನಂದಿನ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಹಾಗೂ ಸಾವುಗಳು ಎಂದು ಹೇಳಿದೆ. ಆದರೂ ಭಾರತ ಸರ್ಕಾರ ಮತ್ತು ಮಾಧ್ಯಮಗಳಿಗೆ ‘ಎಲ್ಲವೂ ಸರಿಯಾಗಿದೆ' ಎಂದು ಲೇವಡಿ ಮಾಡುವ ಕೆಲಸ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರೇ, ಅನ್ಯ ದೇಶಗಳಿಗಿಂತ ಕೊರೊನಾ ನಿರ್ವಹಣೆಯಲ್ಲಿ ಭಾರತ ಮುಂದಿದೆ ಎಂದು ಹೇಳಿದ್ದಿರಲ್ಲಾ, ಈಗ ಐಸಿಎಂಆರ್ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಮೇ ತಿಂಗಳಿನಲ್ಲೇ 64 ಲಕ್ಷ ಜನರಿಗೆ ಸೋಂಕು ಹರಡಿದೆ. ಈಗಲಾದರೂ ಕೊರೊನಾ ನಿರ್ವಹಣೆಯಲ್ಲಿ ನಿಮ್ಮ ವೈಫಲ್ಯ ಒಪ್ಪಿಕೊಂಡು ದೇಶದ ಜನತೆಯ ಕ್ಷಮೆ ಯಾಚಿಸುತ್ತೀರಾ? ಎಂದು ಕೇಳಿದೆ.
ಸಾರ್ವಜನಿಕರಿಗೆ ಸಹಾಯ ಮಾಡದೇ ಬರೀ ಅವರನ್ನು ಪೀಡಿಸುವುದರಲ್ಲೇ ಆನಂದ ಅನುಭವಿಸುತ್ತಿರುವ ನರೇಂದ್ರ ಮೋದಿ ಹಾಗೂ ರಾಜ್ಯ ಬಿಜೆಪಿ ಪಕ್ಷದಿಂದ ದೇಶಕ್ಕಾಗಲೀ ರಾಜ್ಯಕ್ಕಾಗಲೀ ಕವಡೆ ಕಾಸಿನಷ್ಟು ಪ್ರಯೋಜನ ಇಲ್ಲ. ಪೆಟ್ರೋಲ್, ಡೀಸೆಲ್ ಜೊತೆಗೆ ಅಡುಗೆ ಅನಿಲದ ಬೆಲೆ ಏರಿಸುತ್ತಲೇ ಇದ್ದು, ಇವರಿಗೆ ಆಡಳಿತದ ಗಂಧ ಗಾಳಿ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ.
ರಾಜ್ಯ ಬಿಜೆಪಿ ಸರ್ಕಾರವು ಮಳೆಯಿಂದ ಹಾನಿಗೆ ಒಳಗಾದ ಪ್ರದೇಶಗಳಿಗೆ ನೆರವಾಗುವ ಬಗ್ಗೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ. ಬಿಜೆಪಿ ನಾಯಕರು ಆಸಕ್ತಿ ತೋರಿಸುವುದು ಎರಡೇ ವಿಷಯಕ್ಕೆ ಶವ ರಾಜಕೀಯಕ್ಕೆ ಹಾಗೂ ಕೋಮು ಗಲಭೆ ಎಬ್ಬಿಸಲು ಎಂದಿದೆ.
ಡ್ರಗ್ಸ್ ಹಗರಣದ ತನಿಖೆಯ ಹಾದಿ ನೋಡಿದರೆ ರಾಜ್ಯ ಸರ್ಕಾರಕ್ಕೆ ಅಪರಾಧಿಗಳನ್ನು ಶಿಕ್ಷಿಸುವ ಉದ್ದೇಶಕ್ಕಿಂತಲೂ ಕೊರೊನಾ ಮತ್ತು ಅತಿವೃಷ್ಟಿ ಪರಿಹಾರದ ತನ್ನ ವೈಫಲ್ಯಗಳಿಂದ ರಾಜ್ಯದ ಜನರ ಗಮನವನ್ನು ಬೇರೆಡೆ ಸೆಳೆಯುವ ದುರುದ್ದೇಶ ಮುಖ್ಯವಾಗಿ ಇರುವಂತೆ ಕಾಣುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಡಿರುವ ಮಾತು ನಿಜ ಅನ್ನಿಸುತ್ತದೆ ಎಂದಿದೆ.