ಬೆಂಗಳೂರು: 108 ಆಂಬ್ಯುಲೆನ್ಸ್ ಸೇವೆಗೆ ಇನ್ನಷ್ಟು ಬಲ ನೀಡಲು 262 ಹೊಸ ಆಂಬ್ಯುಲೆನ್ಸ್ ಹಾಗೂ ವೈದ್ಯಕೀಯ ಉಪಕರಣಗಳ ಖರೀದಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಸಂಬಂಧ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 98.90 ಕೋಟಿ ರೂ. ವೆಚ್ಚದ ಮೊತ್ತಕ್ಕೆ ಅನುಮೋದನೆ ಸಿಕ್ಕಿದೆ. 108 ಆಂಬ್ಯುಲೆನ್ಸ್ ಸೇವೆಯಡಿ 262 ಹೊಸ ಆಂಬ್ಯುಲೆನ್ಸ್ಗಳನ್ನು ಖರೀದಿಸಿ ಅವುಗಳನ್ನು ಅಗತ್ಯತೆಗೆ ತಕ್ಕಂತೆ ಮಾರ್ಪಡಿಸಿ, ಸೂಕ್ತ ವೈದ್ಯಕೀಯ ಉಪಕರಣಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕೆ ಜಮೀನು: ರಾಜ್ಯದ ಬಳ್ಳಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಮೈದಾನ ನಿರ್ಮಿಸುವ ಸಂಬಂಧ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಅಗತ್ಯವಿರುವ ಜಮೀನು ನೀಡಲು ಸಚಿವ ಸಂಪುಟ ಸಭೆ ಒಪ್ಪಿದೆ. ಬಳ್ಳಾರಿಯಲ್ಲಿ 19.26 ಎಕರೆ ಜಮೀನು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮದಲ್ಲಿ ಕ್ರೀಡಾಂಗಣ ಮಾಡಲು 23.25 ಎಕರೆ ಜಮೀನು ನೀಡಲು ನಿರ್ಧರಿಸಲಾಗಿದೆ.
ಬಳ್ಳಾರಿ ಏರ್‌ಪೋರ್ಟ್ ನಿರ್ಮಾಣ ಟೆಂಡರ್ ರದ್ದು: ದಶಕಗಳೇ ಕಳೆದರೂ ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಪ್ರಾರಂಭಿಸದಿರುವ ಕಾರಣ ಚೆನ್ನೈ ಮೂಲದ ಮಾರ್ಗ್ ಕಂಪನಿಯೊಂದಿಗೆ ಮಾಡಿಕೊಳ್ಳಲಾದ ಯೋಜನಾ ಅಭಿವೃದ್ಧಿ ಒಪ್ಪಂದವನ್ನು ರದ್ದುಗೊಳಿಸಿ ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಬಳ್ಳಾರಿಯಲ್ಲಿ ವಿಮಾನ ನಿಲ್ದಾಣವನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲು 2008 ರಲ್ಲಿ ತೀರ್ಮಾನಿಸಿ ಆದೇಶಿಸಲಾಗಿತ್ತು. 2010ರಲ್ಲಿ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಹ ನೀಡಲಾಗಿತ್ತು. ಮಾರ್ಗ್ ಕಂಪನಿ ಜತೆ ಯೋಜನಾ ಅಭಿವೃದ್ಧಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಯಾವುದೇ ಕಾಮಗಾರಿ ಕೈಗೊಳ್ಳದ ಕಾರಣ ಒಪ್ಪಂದ ರದ್ದು ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧ ಕಂಪನಿಗೆ ದಂಡ ವಿಧಿಸುವ ಬಗ್ಗೆಯೂ ಸಂಪುಟ ಸಭೆ ತೀರ್ಮಾನಿಸಿದೆ. ಕರ್ನಾಟಕ ಮೈನಿಂಗ್ ಎನ್ವಿರಾನ್ಮೆಂಟ್ ರಿಸ್ಟೋರೇಷನ್ ಕಾರ್ಪೋರೇಷನ್‌ನಲ್ಲಿ (ಕೆಎಂಇಆರ್‌ಸಿ) ಅನುದಾನ ಲಭ್ಯ ಇದ್ದು, ಅದನ್ನು ಬಳಸಿಕೊಂಡು ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
ಇತರ ಸಂಪುಟ ತೀರ್ಮಾನಗಳೇನು?: ಕೆಎಸ್ಎಸ್ ಅಧಿಕಾರಿಗಳಾದ ನಾಗರಾಜ್, ಅರುಣಾ ಪ್ರಭಾ, ಅಪರ್ಣ ಪಾವಗಟ್ಟಿ ಮೇಲಿನ ಲೋಕಾಯುಕ್ತ ಪ್ರಕರಣ ರದ್ದತಿಗೆ ಅಸ್ತು ಎಂದಿದೆ. ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಹಣ್ಣು ಮತ್ತು ತರಕಾರಿಗಳ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಿಸಲು ಶೋಭಾ ಅಸೆಟ್ಸ್ ಲಿ.ಗೆ ನೀಡಿದ ಟೆಂಡರ್ ರದ್ದು. ಬೇರೆ ಕಂಪನಿಗೆ ನೀಡಲು ತೀರ್ಮಾನ ಮಾಡಲಾಗಿದೆ. ಕಿದ್ವಾಯಿ ಆಸ್ಪತ್ರೆಯ ಬ್ರಾಂಚ್ ಅನ್ನು ಮೈಸೂರಿನಲ್ಲಿ ಸ್ಥಾಪಿಸಲು 50 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ರಾಜ್ಯ ವಿಸ್ತೃತ ಜಾಲ ಯೋಜನೆಯನ್ನು 921.15 ಕೋಟಿ ರೂ. ವೆಚ್ಚದಲ್ಲಿ ಕೆಸ್ವಾನ್‌ರಡಿಯಲ್ಲಿ ವಿಸ್ತರಿಸಲು ಮತ್ತು ಉನ್ನತೀಕರಿಸಲು ಒಪ್ಪಿಗೆ ನೀಡಲಾಗಿದೆ. ಬೆಂಗಳೂರು ಸುತ್ತಮುತ್ತಲಿನ ರಸ್ತೆಗಳ ಅಭಿವೃದ್ಧಿ ಯೋಜನೆಯ ಪ್ಯಾಕೇಜ್-4 ಬಿ ಅಡಿಯಲ್ಲಿ ವರ್ತೂರು ಗ್ರಾಮದಲ್ಲಿ 1.20 ಕಿ.ಮೀ. ಉದ್ದದ ಎಲಿವೇಟೆಡ್ ಕಾರಿಡಾರ್ ರಸ್ತೆಯನ್ನು 1.92 ಕಿ.ಮೀ. ಉದ್ದಕ್ಕೆ ವಿಸ್ತರಿಸಲು ಕಾಮಗಾರಿ ಕೈಗೊಳ್ಳಲು ಒಪ್ಪಿಗೆ. ಅವಶ್ಯಕವಾಗಿರುವ ಭೂಮಿಗೆ ಟಿಡಿಆರ್ ಬದಲು ಭೂಸ್ವಾಧೀನ ಕಾಯ್ದೆಯಡಿ ಪರಿಹಾರ ವಿತರಣೆ ಮಾಡಲು ಘಟನೋತ್ತರ ಒಪ್ಪಿಗೆ ಸೂಚಿಸಲಾಗಿದೆ.
ಇದನ್ನೂ ಓದಿ: ಸಾರ್ವಜನಿಕ ವಾಹನಗಳಿಗೆ ಟ್ರ್ಯಾಕಿಂಗ್ ಉಪಕರಣ ಕಡ್ಡಾಯ: 21.22 ಕೋಟಿ ವೆಚ್ಚದ ಯೋಜನೆಗೆ ಸಂಪುಟ ಒಪ್ಪಿಗೆ