ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಅನ್ನು ರಾಜ್ಯ ಬಿಜೆಪಿ ಸ್ವಾಗತಿಸಿದ್ದು, ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಬಜೆಟ್ ಮಂಡನೆಯಾಗುತ್ತಿದ್ದಂತೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಭಾರತವು ಜಗದ್ವಂದ್ಯ ರಾಷ್ಟ್ರವಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೇಂದ್ರದ ನೂತನ ಬಜೆಟ್‍ನಲ್ಲಿ ಪ್ರಕಟಿಸಲಾಗಿದೆ. ಇದು ಕರ್ನಾಟಕ ಮತ್ತು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಹೊಂದಿದ ಬಜೆಟ್ ಎಂದು ತಿಳಿಸಿದ್ದಾರೆ.
ಕೋವಿಡ್ ನಂತರವೂ ಭಾರತ ತನ್ನ ಆರ್ಥಿಕತೆಯ ವೇಗದಿಂದಾಗಿ ಜಗತ್ತಿನ ಗಮನ ಸೆಳೆದಿದೆ. ರೈಲ್ವೆ ಇಲಾಖೆಯಲ್ಲಿ ಹೆಚ್ಚಿನ ಹಣ ಹೂಡಿಕೆ, ಯುವ ಉದ್ಯಮಿಗಳು, ಕೃಷಿ ಸ್ಟಾರ್ಟಪ್‍ಗಳಿಗೆ ಉತ್ತೇಜನ, ಪ್ರವಾಸೋದ್ಯಮಕ್ಕೆ ಒತ್ತು ಕೊಟ್ಟಿದ್ದು, ಒಂದು ಜಿಲ್ಲೆ- ಒಂದು ಉತ್ಪನ್ನಕ್ಕೆ ಪ್ರೋತ್ಸಾಹ ಕೊಟ್ಟ ಆಯವ್ಯಯ ಪತ್ರ ಇದಾಗಿದೆ. ಮಧ್ಯಮ ವರ್ಗದವರಿಗೆ ನೀಡಿರುವ ತೆರಿಗೆ ವಿನಾಯಿತಿ ಬಗ್ಗೆ ಅವರು ಸಂತಸ ಸೂಚಿಸಿದ್ದಾರೆ. ದೇಶವು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಕಾಲಘಟ್ಟದಲ್ಲಿದೆ. ದೇಶವನ್ನು ಸ್ವಾತಂತ್ರ್ಯೋತ್ಸವದ ಶತಮಾನೋತ್ಸವದತ್ತ ಸದೃಢವಾಗಿ ಒಯ್ಯುವ ನಿಟ್ಟಿನಲ್ಲಿ ಇದೊಂದು ನೀಲನಕ್ಷೆಯಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜನಸ್ನೇಹಿ ಬಜೆಟ್: ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ನಿರ್ಮಲಾ ಸೀತಾರಾಮನ್ ಜನಸ್ನೇಹಿ ಬಜೆಟ್ ಮಂಡಿಸಿದ್ದಾರೆ. ಕೃಷಿ, ಕೂಲಿ ಕಾರ್ಮಿಕರು ಸೇರಿದಂತೆ ಕಟ್ಟ ಕಡೆಯ ವ್ಯಕ್ತಿಗೆ ಅನುಕೂಲ ಆಗಿದೆ. ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ. ಮೂಲಸೌಕರ್ಯಕ್ಕೆ7.5 ಲಕ್ಷ ಕೋಟಿ ಇದ್ದ ಅನುದಾನವನ್ನು 10ಲಕ್ಷ ಕೋಟಿಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಸರ್ಕಾರಕ್ಕೆ ಆದಾಯ ಮತ್ತು ಜನರಿಗೆ ಉದ್ಯೋಗ ಸಿಗಲಿದೆ. ಅಪ್ಪರ್ ಭದ್ರಾ ಯೋಜನೆಗ 5,300 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಎಸ್ಸಿ, ಎಸ್ಟಿ ಸಮುದಾಯಗಳಿಗೆ ಉತ್ತೇಜನ. ಸ್ಟಾರ್ಟಪ್ ಯೋಜನೆಗೆ ಹೆಚ್ಚು ಉತ್ತೇಜನ ನೀಡುವ ಅಂಶ ಬಜೆಟ್ ನಲ್ಲಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್ ಮಾತನಾಡಿ, ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಸ್ಥಾನದಲ್ಲಿ ನಿರ್ಮಲಾ ಸೀತಾರಾಮನ್ ಅತ್ಯುತ್ತಮ ಬಜೆಟ್ ಮಂಡಿಸಿದ್ದಾರೆ. ಜಗತ್ತಿನ ಜಿಡಿಪಿ 2.9 ರಲ್ಲಿ ಕಷ್ಟ ಪಡುತ್ತಿದೆ, ಆದರೆ ಭಾರತ ಜಿಡಿಪಿ ಶೇ.7 ಒಳಗೆ ಕಾಯ್ದುಕೊಂಡಿದ್ದಾರೆ. ಕೋವಿಡ್ ಪಾಠದಿಂದ ಆರೋಗ್ಯ ಇಲಾಖೆಗೆ 157 ನರ್ಸಿಂಗ್ ಕಾಲೇಜಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಟ್ಯಾಕ್ಸ್ ವಿನಾಯತಿ 5ರಿಂದ 7 ಲಕ್ಷಕ್ಕೆ ಏರಿಕೆ. ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಸಿರಿಧಾನ್ಯಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸಲು ಮಹತ್ವದ ಹೆಜ್ಜೆ ಇಡಲಾಗಿದೆ. ಭಾರತ ಆರ್ಥಿಕವಾಗಿ ದೃಢ ಹೆಜ್ಜೆ ಇಡುವ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಶಾದಾಯಕವಾದ ಸರ್ವ ಸ್ಪರ್ಶಿ ಬಜೆಟ್: ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಆಶಾದಾಯಕವಾದ ಸರ್ವ ಸ್ಪರ್ಶಿ ಬಜೆಟ್ ಆಗಿದೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ, ಎಲ್ಲರಿಗೂ ತಲುಪಿದ ಬಜೆಟ್ ಆಗಿದೆ. ಎಸ್ಸಿ ಎಸ್ಟಿ, ಒಬಿಸಿ ಸಮುದಾಯಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಮಹಿಳೆಯರಿಗೆ, ಯುವಕರಿಗೆ ಆದ್ಯತೆ ಇದೆ. ರೈತರಿಗೆ 20ಲಕ್ಷ ಕೋಟಿ ಸಾಲ ಸೌಲಭ್ಯ ನೀಡಿ ಪ್ರಥಮ ಆಧ್ಯತೆ ನೀಡಲಾಗಿದೆ. ರೈಲ್ವೆ, ಇಂಡಸ್ಟ್ರಿ, ಬೇರೆ ಇನ್ಫ್ರಾಸ್ಟ್ರಕ್ಷರ್ ಗೆ ಹೆಚ್ಚಿನ ಅನುದಾನ ಇಡಲಾಗಿದೆ. ಮಲ ಹೊರುವ ಪದ್ಧತಿ (ಮ್ಯಾನ್ ಹೋಲ್ ಯೋಜನೆ) ಸಂಪೂರ್ಣ ಸ್ಥಗಿತಗೊಳಿಸಿದ್ದು, ಯಂತ್ರದ ಮೂಲಕ ಮ್ಯಾನ್ ಹೋಲ್ ಕ್ಲೀನ್ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.
ಜನಸಾಮಾನ್ಯರಿಗೆ ಹೊರೆಯಾಗದಂತೆ ಹೊಸ ತೆರಿಗೆಯನ್ನು ವಿಧಿಸದೆ ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಿ ಹಿರಿಯ ನಾಗರಿಕರು, ಮಹಿಳೆಯರು, ರೈತರು, ಕಾರ್ಮಿಕರು, ಮಧ್ಯಮ ವರ್ಗದವರು ಸೇರಿದಂತೆ ಪ್ರತಿಯೊಬ್ಬರಿಗೂ ಸಂತೃಪ್ತಿಪಡಿಸುವ ಕೇಂದ್ರ ಬಜೆಟ್ ಮಂಡನೆಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಸಂತಸ ವ್ಯಕ್ತಪಡಿಸಿದ್ದಾರೆ.
ಮಹಿಳಾ ಸಬಲೀಕರಣಕ್ಕಾಗಿ ಮಹಿಳಾ ಸಮ್ಮಾನ್ ಎಂಬ ಹೊಸ ಯೋಜನೆಯನ್ನು ಘೋಷಣೆ ಮಾಡಿದ್ದು, ಈ ಯೋಜನೆಯಡಿ ಮಹಿಳೆಯರಿಗೆ ಶೇ.7 ಬಡ್ಡಿ ದರದಲ್ಲಿ ರೂ.2 ಲಕ್ಷದವರೆಗೆ ಮಹಿಳಾ ಸಮ್ಮಾನ್ ಪ್ರಮಾಣ ಪತ್ರದಡಿ ಠೇವಣಿ ಇಡುವ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಸಚಿವ ಮುರುಗೇಶ್ ಆರ್.ನಿರಾಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಗ್ರ ಅಭಿವೃದ್ಧಿಗೆ ಪೂರಕ: ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಘೋಷಿಸಿದ್ದ ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೂಲಮಂತ್ರದ ಆಶಯ ಇಂದು ಕೇಂದ್ರ ಸರ್ಕಾರದ ಮುಂಗಡ ಪತ್ರದಲ್ಲೂ ಸೇರಿರುವುದರಿಂದ ದೇಶದ ಸರ್ವಾಂಗೀಣ ಪ್ರಗತಿಗೆ ಇದು ಮತ್ತಷ್ಟು ಚಾಲನೆ ನೀಡಲಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ. ಬಜೆಟ್‌ನಲ್ಲಿ ಘೋಷಿಸಲಾದ ಕಾರ್ಯಕ್ರಮಗಳಿಂದ ಮುಖ್ಯವಾಗಿ ಬಡವರು ಮಧ್ಯಮ ವರ್ಗದವರು, ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸಚಿವ ಎಂಟಿಬಿ ನಾಗರಾಜು ಪ್ರತಿಕ್ರಿಯೆ: ಈ ಸಾಲಿನ ಕೇಂದ್ರ ಬಜೆಟ್ ನಲ್ಲಿ ರಾಜ್ಯದ ಬಯಲು ಸೀಮೆಯ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ 5,300 ಕೋಟಿ ಅನುದಾನ ಪ್ರಕಟಿಸಿರುವ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪೌರಾಡಳಿತ ಹಾಗೂ ಸಣ್ಣ ಕೈಗಾರಿಕೆ ಸಚಿವ ಎಂಟಿಬಿ ನಾಗರಾಜು ಧನ್ಯವಾದ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಮ ವರ್ಗದ ಜನರ ಅವಶ್ಯಕತೆಗೆ ಪೂರಕವಾದ ಹಾಗೂ ಎಲ್ಲಾ ಕ್ಷೇತ್ರಗಳ ಬೆಳವಣಿಗೆಗೆ ಪೂರಕವಾದ ಸರ್ವಸ್ಪರ್ಶಿ ಬಜೆಟ್ ನೀಡಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ದೊರೆತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ 2023 ನೇ ಸಾಲಿನ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಸಾಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಎಂಬ ಎಲ್ಲರನ್ನೂ ಒಳಗೊಳ್ಳುವ ಪ್ರಗತಿಯ ಗುರಿಯೊಂದಿಗೆ ಕೇಂದ್ರ ಸರ್ಕಾರ ಉತ್ತಮ ಬಜೆಟ್ ನೀಡಿದೆ. 2019 ನೇ ಆರ್ಥಿಕ ವರ್ಷದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಒಟ್ಟು ಬಜೆಟ್‌ನಲ್ಲಿ ಶೇ.1.4 ರಷ್ಟು ಅನುದಾನ ಮೀಸಲಿಟ್ಟಿದ್ದು, 2023 ನೇ ಸಾಲಿನಲ್ಲಿ ಶೇ.2.1 ರಷ್ಟು ಮೀಸಲಿಡಲಾಗಿದೆ. ಈ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಇನ್ನಷ್ಟು ಆದ್ಯತೆ ನೀಡಲಾಗಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.
ಸಮಾನ ಅವಕಾಶ: ಅಭಿವೃದ್ಧಿ ಹಾಗೂ ಕಲ್ಯಾಣ ಯೋಜನೆಗಳ ಸಮತೋಲಿತ ಬಜೆಟ್ ಇದಾಗಿದ್ದು, ಮಧ್ಯಮ ವರ್ಗದ ಆದ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ತನ್ನ ಆಯವ್ಯಯ ರೂಪಿಸಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ.ಸುನಿಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಮೃತ ಕಾಲದಲ್ಲಿ ಏಳು ಆದ್ಯತಾ ವಲಯವನ್ನು ಸಪ್ತರ್ಷಿ ಎಂದು ಪರಿಗಣಿಸಿ ಕೇಂದ್ರ ಬಜೆಟ್ ನಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಸಿರು ಇಂಧನ ಕ್ಷೇತ್ರವನ್ನು ಆದ್ಯತಾ ವಲಯವಾಗಿ ಗುರುತಿಸಲಾಗಿದ್ದು, 2030 ರ ವೇಳೆಗೆ 5 ಎಂಎಂಟಿ ಹಸಿರು ಹೈಡ್ರೋಜನ್ ಉತ್ಪಾದನಾ ಗುರಿ ನಿಗದಿ ಮಾಡಲಾಗಿದ್ದು, 35000 ಕೋಟಿ ರೂ. ಹೂಡಿಕೆಗೆ ನಿರ್ಧರಿಸಿರುವುದು ಸ್ವಾಗತಾರ್ಹ. ಇದು ರಾಜ್ಯಗಳ ಮೇಲಿನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಬಂಡವಾಳ ಹೂಡಿಕೆ ಮಿತಿಯನ್ನು 10 ಲಕ್ಷ ಕೋಟಿಗೆ ಹೆಚ್ಚಳ ಮಾಡಲಾಗಿದ್ದು, ಇದು ಜಿಡಿಪಿಯ ಶೇ.3.3 ರಷ್ಟಾಗುತ್ತದೆ. ಇದು ಭಾರತದ ಬದಲಾದ ಆರ್ಥಿಕ ಶಕ್ತಿಗೆ ನಿದರ್ಶನ ಎಂದು ಹೇಳಿದ್ದಾರೆ.
ಇದನ್ನೂ ಓದಿ:'ದೂರದೃಷ್ಟಿ ಇಲ್ಲದ ಸಂಪೂರ್ಣ ನಿರಾಶಾದಾಯಕ ಬಜೆಟ್': ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ