ಬೆಂಗಳೂರು: ರಾಜಸ್ಥಾನದ ನಂತರ ದೇಶದಲ್ಲಿ ಹೆಚ್ಚಿನ ಒಣಭೂಮಿ ಪ್ರದೇಶವನ್ನು ಹೊಂದಿರುವ ಎರಡನೇ ರಾಜ್ಯ ಎಂದರೆ ಅದು ಕರ್ನಾಟಕ. ರಾಜ್ಯದಲ್ಲಿ ಸುಮಾರು ಶೇ.60 ರಷ್ಟು ಸಾಗುವಳಿ ಪ್ರದೇಶದಲ್ಲಿ ಮಳೆಯಾಶ್ರಿತ ಕೃಷಿ ಇದ್ದು, ಶೇ.34ರಷ್ಟು ಪ್ರದೇಶ ಮಾತ್ರ ನೀರಾವರಿ ಸೌಲಭ್ಯವನ್ನು ಹೊಂದಿದೆ.
ರಾಜ್ಯದಲ್ಲಿ ನೀರಿನ ಸಮರ್ಥ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಸೂಕ್ಷ್ಮ ನೀರಾವರಿ ಯೋಜನೆಯನ್ನು 2003-04 ರಿಂದಲೂ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಯಡಿ ಹನಿ ಮತ್ತು ತುಂತುರು ನೀರಾವರಿ ಘಟಕಗಳನ್ನು ಸಹಾಯಧನದಲ್ಲಿ ವಿತರಿಸಲಾಗುತ್ತಿದೆ.
2005-06 ರಿಂದ ಕೇಂದ್ರ ಸರ್ಕಾರವು ಸಹ ಸೂಕ್ಷ್ಮ ನೀರಾವರಿ ಕಾರ್ಯಕ್ರಮಕ್ಕೆ ಸಹಾಯಧನ ಒದಗಿಸುತ್ತಿದೆ. 2015-16ನೇ ಸಾಲಿನಿಂದ ಸೂಕ್ಷ್ಮ ನೀರಾವರಿ ಕಾರ್ಯಕ್ರಮಗಳನ್ನು ಪ್ರಧಾನಮಂತ್ರಿಗಳ ಕೃಷಿ ಸಿಂಚಾಯಿ ಯೋಜನೆಯ ಘಟಕದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಸೂಕ್ಷ್ಮ ನೀರಾವರಿ ಕಾರ್ಯಕ್ರಮದ ಅನುಷ್ಠಾನ ಮಾರ್ಗಸೂಚಿಗಳನ್ವಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾಲಿನ ಮತ್ತು ಒಟ್ಟು ಶೇಕಡಾವಾರು ಸಹಾಯಧನದ ಪಾಲಿನ ವಿವರಗಳು ಈ ಕೆಳಗಿನಂತಿದೆ.
ತುಂತುರು ನೀರಾವರಿ : ಸಣ್ಣ/ಅತಿ ಸಣ್ಣ ಯೋಜನೆಗೆ ಕೇಂದ್ರದ ಪಾಲು - ಶೇ.33, ರಾಜ್ಯದ ಪಾಲು-ಶೇ.57. ಇತರ ಯೋಜನೆಗೆ ಕೇಂದ್ರದ ಪಾಲು-ಶೇ.27, ರಾಜ್ಯದ ಪಾಲು-ಶೇ.63 ಸೇರಿ ಶೇ.90ರಷ್ಟು ಸಹಾಯಧನ ದೊರೆಯುತ್ತದೆ.
ಹನಿ ನೀರಾವರಿ ಘಟಕಕ್ಕೆ ಕೇಂದ್ರದ ಪಾಲು-ಶೇ.33, ರಾಜ್ಯದ ಪಾಲು ಶೇ.57. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಕೇಂದ್ರದ ಪಾಲು-ಶೇ.27, ರಾಜ್ಯದ ಪಾಲು-ಶೇ.63 ಹಾಗೂ ಇತರ(ಸಾಮಾನ್ಯ): ಕೇಂದ್ರದ ಪಾಲು-ಶೇ.27, ರಾಜ್ಯದ ಪಾಲು-ಶೇ.18 ಸೇರಿ ಒಟ್ಟು 45ರಷ್ಟು ಸಹಾಯಧನ ಸಿಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ? : ಸೂಕ್ಷ್ಮ ನೀರಾವರಿ ಘಟಕವನ್ನು ಸಹಾಯಧನದ ಪಡೆಯಲು ಒಮ್ಮೆ ಮಾತ್ರ ಅವಕಾಶ ಇರುವುದರಿಂದ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಅರ್ಜಿಯನ್ನು ಪರಿಶೀಲಿಸಿ ದೃಢೀಕರಿಸುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲಿನ ಅನುದಾನವನ್ನು ನಿಗದಿಪಡಿಸಿರುವ ಯೋಜನೆಯ ಮಾರ್ಗಸೂಚಿಯನ್ವಯ ಹನಿ ಮತ್ತು ತುಂತುರು ನೀರಾವರಿ ಘಟಕಗಳ ಅಳವಡಿಕೆಗೆ ಎಲ್ಲ ವರ್ಗದ ರೈತರಿಗೆ ಪ್ರತಿ ರೈತನಿಗೆ 5 ಹೆಕ್ಟರ್ ಪ್ರದೇಶದವರೆಗೆ ಸಹಾಯಧನ ಪಡೆಯಬಹುದು.
ಮೊದಲ, ಎರಡು ಹೆಕ್ಟರ್ ಪ್ರದೇಶದವರೆಗೆ ಶೇ.45 ರಿಂದ ಶೇ.90ರಷ್ಟು ಸಹಾಯಧನ ಹಾಗೂ ಎರಡು ಹೆಕ್ಟೇರ್ಗಿಂತ ಮೇಲ್ಪಟ್ಟು 5 ಹೆಕ್ಟೇರ್ ಪ್ರದೇಶದವರೆಗೆ ಶೇ.45ರಷ್ಟು ಸಹಾಯಧನ ನೀಡಲಾಗುತ್ತದೆ. ಸರ್ಕಾರದಿಂದ ಅನುಮೋದನೆಗೊಂಡಿರುವ ಸಂಸ್ಥೆಗಳಿಂದ ಪಡೆದಂತಹ ಹನಿ ಮತ್ತು ತುಂತುರು ನೀರಾವರಿ ಘಟಕಗಳು ಮಾತ್ರ ಸಹಾಯಧನ ಪಡೆಯಲು ಅರ್ಹವಾಗಿರುತ್ತವೆ.
ನೀರಿನ ಮೂಲವನ್ನು ಹೊಂದಿರುವ ರೈತರು ಮಾತ್ರ ಲಘು ನೀರಾವರಿ ಘಟಕಗಳಿಗೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಮುಂಗಾರು ಆರಂಭವಾಗಿ ಕೃಷಿ ಚಟುವಟಿಕೆ ಚುರುಕುಗೊಂಡಿದ್ದರಿಂದ ತೋಟಗಾರಿಕೆ ಇಲಾಖೆಯಲ್ಲಿ ವಿವಿಧ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ.
ರೈತರಿಗಾಗಿ ಹಲವು ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ರೈತರು ತಮ್ಮ ಸಮೀಪದ ತೋಟಗಾರಿಕೆ ಇಲಾಖೆ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಿ ಈ ಕೆಳಗಿನ ಯೋಜನೆಗಳ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದು.
ನೀರಿನ ಮೂಲಗಳ ನಿರ್ಮಾಣ: ಕ್ಲಿಷ್ಟಕರ ಪರಿಸ್ಥಿತಿಗಳಲ್ಲಿ ತೋಟಗಾರಿಕೆ ಬೆಳೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸಲುವಾಗಿ ವೈಯಕ್ತಿಕ ಫಲಾನುಭವಿಗಳಿಗೆ 20ಮೀ, 20ಮೀ, 3ಮೀ ವಿಸ್ತೀರ್ಣದ ಕೃಷಿ ಹೊಂಡಗಳ ನಿರ್ಮಾಣಕ್ಕೆ ಒಟ್ಟು ವೆಚ್ಚದ ಶೇ.50 ಅಂದರೆ ಗರಿಷ್ಠ 75 ಸಾವಿರ ರೂ.ವರೆಗೆ ಸಹಾಯಧನ ನೀಡಲು ಅವಕಾಶವಿದೆ.
ಅಣಬೆ ಕೃಷಿ: ಅಣಬೆ ಕೃಷಿಯನ್ನು ಉತ್ತೇಜಿಸಲು ಅಣಬೆ ಉತ್ಪಾದನಾ ಘಟಕಗಳನ್ನು ಖಾಸಗಿ ವಲಯದಲ್ಲಿ ಸ್ಥಾಪಿಸಲು ಒಟ್ಟು ವೆಚ್ಚದ ಶೇ.40ರಷ್ಟು ಅಂದರೆ ಗರಿಷ್ಠ 8 ಲಕ್ಷ ರೂ.ಗಳವರೆಗೆ ಸಹಾಯಧನ ನೀಡಲು ಅವಕಾಶವಿದೆ.
ಸಂರಕ್ಷಿತ ಬೇಸಾಯ: ಸಂರಕ್ಷಿತ ಬೇಸಾಯ ಪದ್ಧತಿಗಳನ್ನು ಅಳವಡಿಸಿ ಉತ್ಕೃಷ್ಠ ಗುಣಮಟ್ಟದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ವಿವಿಧ ವಿನ್ಯಾಸಗಳ ಗರಿಷ್ಠ 4 ಸಾವಿರ ಚ.ಮೀ. ಹಸಿರುಮನೆ ಘಟಕಗಳ ನಿರ್ಮಾಣಕ್ಕಾಗಿ ಶೇ.50ರಂತೆ ಗರಿಷ್ಠ 447 ರೂ. ಪ್ರತಿ ಚ.ಮೀ.ವರೆಗೆ ಸಹಾಯಧನ ನೀಡಲು ಅವಕಾಶವಿದೆ.
ಸಮಗ್ರ ಪೋಷಕಾಂಶ, ಕೀಟ-ರೋಗಗಳ ನಿರ್ವಹಣೆ: ತೋಟಗಾರಿಕೆ ಬೆಳೆಗಳಿಗಾಗಿ ಸಮಗ್ರ ಪೋಷಕಾಂಶ ಹಾಗೂ ಕೀಟ - ರೋಗಗಳ ನಿರ್ವಹಣೆಗೆ ಅಗತ್ಯವಾದ ಪರಿಕರಗಳನ್ನು ಖರೀದಿಸಿದ ರೈತರಿಗೆ ಶೇ.30ರಂತೆ ಪ್ರತಿ ಹೆಕ್ಟೇರ್ಗೆ 1,200 ರೂ.ರಂತೆ ಗರಿಷ್ಠ 4 ಹೆಕ್ಟೇರ್ ಪ್ರದೇಶಕ್ಕೆ 4,800 ರೂ.ಗಳವರೆಗೆ ಸಹಾಯಧನ ನೀಡಲು ಅವಕಾಶವಿದೆ.
ಜೇನು ಸಾಕಣೆ: ತೋಟಗಾರಿಕೆ ಬೆಳೆಗಳಲ್ಲಿ ಪರಾಗಸ್ಪರ್ಶವನ್ನು ಹೆಚ್ಚಿಸಲು ಜೇನು ಕಾಲೋನಿ, ಜೇನು ಪೆಟ್ಟಿಗೆ ಹಾಗೂ ಜೇನುಗಾರಿಕೆಗೆ ಅಗತ್ಯವಿರುವ ಜೇನು ಸಲಕರಣೆಗಳನ್ನು ಖರೀದಿಸಲು ರೈತರಿಗೆ ಶೇ 40ರಂತೆ 1600 ರೂ. ಜೇನು ಕಾಲೋನಿ ಮತ್ತು ಜೇನು ಪೆಟ್ಟಿಗೆ ಹಾಗೂ ಜೇನು ಸಲಕರಣೆಗೆ 8 ಸಾವಿರ ರೂ.ವರೆಗೆ ಸಹಾಯಧನ ನೀಡಲಾಗುತ್ತದೆ.
ತೋಟಗಾರಿಕೆಯಲ್ಲಿ ಯಾಂತ್ರೀಕರಣ: ತೋಟಗಾರಿಕೆ ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರ ಕೊರತೆ ನಿವಾರಿಸಿ, ಕಡಿಮೆ ಸಮಯದಲ್ಲಿ ಹೆಚ್ಚಿನ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅಗತ್ಯವಾದ ಕೃಷಿ ಉಪಕರಣಗಳು, ಸ್ವಯಂ ಚಾಲಿತ ಯಂತ್ರೋಪಕರಣಗಳು, 20 ಹೆಚ್.ಪಿ.ಗಿಂತ ಕಡಿಮೆ ಸಾಮರ್ಥ್ಯದ ಟ್ರ್ಯಾಕ್ಟರ್ ಹಾಗೂ ಪವರ್ ಟಿಲ್ಲರ್ ಗಳನ್ನು ಖರೀದಿಸಲು ರೈತರಿಗೆ ಗರಿಷ್ಠ 75 ಸಾವಿರ ರೂ. ವರೆಗೆ ಸಹಾಯಧನ ನೀಡಲು ಅವಕಾಶವಿದೆ.
ಕೊಯ್ಲೋತ್ತರ ನಿರ್ವಹಣೆ: ಹಣ್ಣು, ತರಕಾರಿ ಹಾಗೂ ಹೂವಿನ ಬೆಳೆಗಳು ಬಹುಬೇಗನೆ ಹಾಳಾಗುವ ಉತ್ಪನ್ನಗಳಾಗಿದ್ದು, ಇವುಗಳ ಸಮರ್ಪಕ ನಿರ್ವಹಣೆಗಾಗಿ ವಿವಿಧ ಮೂಲ ಸೌಕರ್ಯಗಳನ್ನು ಸ್ಥಾಪಿಸಿ ತೋಟಗಾರಿಕೆ ಉತ್ಪನ್ನಗಳ ನಿರ್ವಹಣೆ, ವಿಂಗಡಣೆ, ಶೇಖರಣೆ ಮತ್ತು ಮೌಲ್ಯವರ್ಧನೆ ಮಾಡುವುದರೊಂದಿಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸಲು ರೈತರು ತಮ್ಮ ಜಮೀನಿನಲ್ಲಿ ಪ್ಯಾಕ್‍ಹೌಸ್ ನಿರ್ಮಾಣ ಮಾಡಲು ಪ್ರತಿ ಘಟಕಕ್ಕೆ ಗರಿಷ್ಠ 2 ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುತ್ತದೆ.
ಮಾರುಕಟ್ಟೆಗಳಲ್ಲಿ ಮೂಲಸೌಕರ್ಯಗಳ ಸ್ಥಾಪನೆ: ರೈತರು ಬೆಳೆದ ತೋಟಗಾರಿಕೆ ಉತ್ಪನ್ನಗಳಿಗೆ ಸೂಕ್ತ ರೀತಿಯ ಮಾರಾಟದ ವ್ಯವಸ್ಥೆ ಕಲ್ಪಿಸಿ, ಉತ್ತಮ ಬೆಲೆ ದೊರಕಿಸಿಕೊಡಲು ಅಗತ್ಯವಾದ ವಿವಿಧ ಮಾದರಿಯ ಗ್ರಾಮೀಣ ಮಾರುಕಟ್ಟೆ ನಿರ್ಮಾಣಕ್ಕಾಗಿ ಶೇ.40 ರಂತೆ ಗರಿಷ್ಠ 10 ಲಕ್ಷ ರೂ.ಗಳ ಸಹಾಯಧನ ನೀಡಲಾಗುತ್ತದೆ.
ಇದನ್ನೂ ಓದಿ: ಕತ್ತೆಗಳ ಸಾಕಾಣಿಕೆಯಲ್ಲಿ ಸೈ ಎನಿಸಿಕೊಂಡ ಟೆಕ್ಕಿ: ಲಕ್ಷಗಟ್ಟಲೆ ಆದಾಯ!