ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ತೆಗೆದುಕೊಳ್ಳುವ ತೀರ್ಮಾನದ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಭವಿಷ್ಯ ನಿಂತಿದೆ.
ಸ್ಪೀಕರ್ ಅವರು ಅತೃಪ್ತ ಶಾಸಕರು ನೀಡಿರುವ ರಾಜೀನಾಮೆ ಅಂಗೀಕರಿಸಿದರೆ ದೋಸ್ತಿ ಸರ್ಕಾರದ ಪತನಕ್ಕೆ ವೇದಿಕೆ ಸಿದ್ಧವಾಗಲಿದೆ. ತಾಂತ್ರಿಕ ಕಾರಣಗಳಿಂದ ಅಥವಾ ಮೈತ್ರಿ ಪಕ್ಷಗಳ ಶಾಸಕರು ಆಸೆ-ಆಮಿಷಗಳಿಗೆ ಒಳಗಾಗಿ ರಾಜೀನಾಮೆ ಸಲ್ಲಿಸಿದ್ದಾರೆಂದು ಅವುಗಳನ್ನು ತಿರಸ್ಕರಿಸಿದರೆ ಅಪಾಯದಿಂದ ಕುಮಾರಸ್ವಾಮಿ ಸರ್ಕಾರ ಸದ್ಯಕ್ಕೆ ಪಾರಾಗಲಿದೆ.
ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ಅತಂತ್ರ ರಾಜಕೀಯ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಿದ್ದು, ಈ ಸಂದರ್ಭದಲ್ಲಿ ಸ್ಪೀಕರ್ ಅವರು ಇಂದು ತಗೆದುಕೊಳ್ಳುವ ನಿರ್ಧಾರ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. 13 ಶಾಸಕರ ರಾಜೀನಾಮೆ ಕುರಿತು ಮಂಗಳವಾರ ಪರಿಶೀಲನೆ ನಡೆಸುವುದಾಗಿ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಸ್ಪಷ್ಟಪಡಿಸಿದ್ದರಿಂದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ನಾಯಕರುಗಳು ವಿಧಾನಸಭಾಧ್ಯಕ್ಷರ ನಿರ್ಧಾರವನ್ನೇ ಎದುರು ನೋಡುತ್ತಿದ್ದಾರೆ.
ಸ್ಪೀಕರ್ ತೆಗೆದುಕೊಳ್ಳುವ ನಿರ್ಧಾರ ಆಧರಿಸಿ ಮುಂದಿನ ರಾಜಕೀಯ ನಡೆ ಅನುಸರಿಸುವ ಕುರಿತು ಮೂರೂ ರಾಜಕೀಯ ಪಕ್ಷಗಳು ಸಮಾಲೋಚನೆ ನಡೆಸತೊಡಗಿವೆ. ಮಾಜಿ ಪ್ರಧಾನಿ ದೇವೇಗೌಡರು ಸ್ಪೀಕರ್ ಅಂಗಳದಲ್ಲಿ ಈಗ ಚೆಂಡು ಇದೆ ಅಂತ ಹೇಳಿರುವುದು ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಇನ್ನೂ ಅಂಗೀಕರಿಸಿಲ್ಲ. ಹಾಗಾಗಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ, ಸುಭದ್ರವಾಗಿದೆ ಎಂದು ಹೇಳಿದ್ದಾರೆ.