ಬೆಂಗಳೂರು: ಒಂದೆಡೆ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಸಂತಸಗೊಂಡಿದ್ದರೆ, ಇನ್ನೊಂದೆಡೆ ರಾಜ್ಯ ಕೃಷಿ ಇಲಾಖೆಯು ಹಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಶೇ. 50ಕ್ಕಿಂತ ಕಡಿಮೆ ನೌಕರರು ಕೆಲಸ ಮಾಡುತ್ತಿರುವ ಕೃಷಿ ಇಲಾಖೆಯಲ್ಲಿ ತೀವ್ರ ಸಿಬ್ಬಂದಿ ಕೊರತೆ ಎದುರಾಗಿದೆ. ಇದರಿಂದ ಇಲಾಖೆಯ ಕಾರ್ಯ ನಿರ್ವಹಣೆಯ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ. ಇದರಿಂದ ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ಮತ್ತು ರೈತರಿಗೆ ಅನಾನುಕೂಲವಾಗಿದೆ.
ಇಲಾಖೆಯ ನಾನಾ ವೃಂದಗಳಿಗೆ ಮಂಜೂರಾಗಿದ್ದು 9,007 ಹುದ್ದೆಗಳು, ಅದರಲ್ಲಿ 4,020 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. ಅಂದರೆ ಶೇ. 44ರಷ್ಟು ಸಿಬ್ಬಂದಿ ಮಾತ್ರ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಗ್ರೂಪ್ ಬಿ ಮತ್ತು ಗ್ರೂಪ್ ಸಿ ನೌಕರರದ್ದು ಪ್ರಮುಖವಾಗಿದೆ. ಗ್ರೂಪ್ ಬಿ ಕೇಡರ್ನಲ್ಲಿ 4,091 ಮಂಜೂರಾದ ಹುದ್ದೆಗಳಲ್ಲಿ 1,781 ಮಾತ್ರ ಭರ್ತಿಯಾಗಿದೆ. ಇನ್ನು 300 ಮಂದಿಯನ್ನು ನೇಮಕ ಮಾಡಿಕೊಳ್ಳುವ ರಾಜ್ಯ ಸರ್ಕಾರದ ಕ್ರಮ ವಾಸ್ತವಿಕವಾಗಿ ಅಗತ್ಯವಿರುವ ಸಾಮರ್ಥ್ಯಕ್ಕಿಂತ ಕಡಿಮೆ ಇರುವುದರಿಂದ ಅಷ್ಟೇನೂ ವ್ಯತ್ಯಾಸವಾಗದು.
ಕರ್ನಾಟಕದಲ್ಲಿ ಸುಮಾರು 750 ರೈತ ಸಂಪರ್ಕ ಕೇಂದ್ರಗಳಿವೆ. ಹೋಬಳಿ ಮಟ್ಟದಲ್ಲಿ ಕನಿಷ್ಠ ಒಂದನ್ನು ಹೊಂದಿದೆ. ಪ್ರತಿ ರೈತ ಸಂಪರ್ಕ ಕೇಂದ್ರ ಸಹಾಯಕ ಕೃಷಿ ಅಧಿಕಾರಿ ಮತ್ತು ಕೃಷಿ ಸಹಾಯಕರನ್ನು ಹೊಂದಿರಬೇಕು. ಅವರು ಹಳ್ಳಿಗಳಲ್ಲಿ ಅಂತಿಮ ಫಲಾನುಭವಿಯನ್ನು ತಲುಪುವಲ್ಲಿ ನಿರ್ಣಾಯಕರಾಗಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್ ಭಾಷಣದಲ್ಲಿ ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 33,700 ಕೋಟಿ ರೂ. ಕೃಷಿ ಯಂತ್ರೋಪಕರಣಗಳ ಬಳಕೆಗೆ ಉತ್ತೇಜನ ನೀಡಲು 500 ಕೋಟಿ ರೂ. ಮಂಜೂರು ಮಾಡುವ ಮೂಲಕ ರೈತ ಶಕ್ತಿ ಯೋಜನೆಯನ್ನೂ ಘೋಷಿಸಿದ್ದರು. ಸಣ್ಣ ರೈತರಿಗೆ ಪ್ರತಿ ಎಕರೆಗೆ 250 ರೂ. ಡೀಸೆಲ್ ಸಬ್ಸಿಡಿಯನ್ನೂ ಮುಖ್ಯಮಂತ್ರಿಗಳು ಮಂಜೂರು ಮಾಡಿದ್ದರು.
ಫಲಾನುಭವಿಗಳನ್ನು ತಲುಪದ ರೈತ ಯೋಜನೆಗಳು: ರಸಗೊಬ್ಬರ ಸಬ್ಸಿಡಿ ನೀಡುವುದು ಸೇರಿದಂತೆ ಅನೇಕ ಕೃಷಿ ಸಂಬಂಧಿತ ಯೋಜನೆಗಳು ಗ್ರಾಮಗಳಲ್ಲಿ ಫಲಾನುಭವಿಗಳನ್ನು ತಲುಪುವಲ್ಲಿ ಪ್ರಮುಖ ಪಾತ್ರ ವಹಿಸುವವರು ತಳಮಟ್ಟದಲ್ಲಿ ಸರ್ಕಾರಿ ಅಧಿಕಾರಿಗಳು. ಆದರೆ, ಸಿಬ್ಬಂದಿ ಕೊರತೆ ಇದೆ. ಸರ್ಕಾರದ ಗಡುವಿನೊಳಗೆ ರೈತರಿಗೆ ಯೋಜನೆಗಳನ್ನು ತಲುಪಿಸುವುದು ಹೇಗೆ ಸಾಧ್ಯವಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.
ಕೃಷಿ ಇಲಾಖೆಯು ಕೃಷಿ ವಿಶ್ವ ವಿದ್ಯಾಲಯಗಳಿಂದ ಇತ್ತೀಚೆಗೆ ಮೂರು ಸಾವಿರ ಡಿಪ್ಲೋಮಾ ಪದವೀಧರರನ್ನು ಕೃಷಿ ಸಹಾಯಕರನ್ನಾಗಿ ನೇಮಕ ಮಾಡಿಕೊಳ್ಳಲು ಪ್ರಸ್ತಾವನೆ ಕಳುಹಿಸಿದೆ. ಎರಡು ಪಂಚಾಯಿತಿಗೆ ಒಬ್ಬರನ್ನು ನೇಮಕ ಮಾಡಿಕೊಳ್ಳಲು ಪ್ರಸ್ತಾವನೆ ಕಳುಹಿಸಿತ್ತು. ಕಡಿಮೆ ಗುಣಮಟ್ಟದ ಬೀಜಗಳ ಬಗ್ಗೆ ಅರಿವು ಮೂಡಿಸಲು, ರೈತರ ಆದಾಯವನ್ನು ದ್ವಿಗುಣಗೊಳಿಸಲು ಸಹಾಯ ಮಾಡಲು, ಮಣ್ಣಿನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಇನ್ನೂ ಅನೇಕ ವಿಷಯಗಳಿಗೆ ಇಲಾಖೆ ರೈತರನ್ನು ತಲುಪಬೇಕು. ಸಿಬ್ಬಂದಿ ಕೊರತೆಯಿಂದ ಇದು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಅವರು.
ಕಳೆದ ಜನವರಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಲು ಒಪ್ಪಿಗೆ ನೀಡುವಂತೆ ಕೃಷಿ ಸಚಿವರು ಆರ್ಥಿಕ ಇಲಾಖೆಗೆ ಮನವಿ ಮಾಡಿದ್ದರು. ಅದರಂತೆ ಆರ್ಥಿಕ ಇಲಾಖೆ ಈಗ ಒಪ್ಪಿಗೆ ಸೂಚಿಸಿದೆ.
ಇದನ್ನೂ ಓದಿ : ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಬಳಿಕ ಕೃಷಿ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿ: ಸಚಿವ ಬಿ.ಸಿ.ಪಾಟೀಲ್
ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕ: ಕೃಷಿ ಇಲಾಖೆಯಲ್ಲಿ ಖಾಲಿಯಿರುವ ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳ ಪೈಕಿ 300 ಹುದ್ದೆಗಳನ್ನು ನಿಯಮಾನುಸಾರ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿರುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
300 ಹುದ್ದೆಗಳನ್ನು ಕರ್ನಾಟಕ ಕೃಷಿ ಸೇವೆಗಳು (ವೃಂದ ಮತ್ತು ನೇಮಕಾತಿ) ನಿಯಮಗಳು, 2021ರಲ್ಲಿ ನಿಗದಿಪಡಿಸಿರುವ ವಿದ್ಯಾರ್ಹತೆಯ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ನಿಯಮಾನುಸಾರ ಕೂಡಲೇ ಅಗತ್ಯ ಕ್ರಮಕೈಗೊಳ್ಳುವಂತೆ ಕೃಷಿ ಇಲಾಖೆ (ಸೇವೆಗಳು) ಸರ್ಕಾರದ ಅಧೀನ ಕಾರ್ಯದರ್ಶಿ ಜೋನ್ ಪುಕಾಶ್ ರೋಡ್ರಿಗಸ್ ಅವರು ಕೃಷಿ ಇಲಾಖೆ ಆಯುಕ್ತರಿಗೆ ನಿರ್ದೇಶಿಸಿರುವುದಾಗಿ ಸಚಿವರು ಹೇಳಿದ್ದಾರೆ.
ಕೃಷಿ ಪದವೀಧರರು 85% ಉಳಿದ 15% ಪೋಸ್ಟ್‌ಗಳಿಗೆ ಬಿ.ಟೆಕ್ (ಕೃಷಿ ಎಂಜಿನಿಯರಿಂಗ್) ಅಥವಾ ಬಿ.ಟೆಕ್ (ಆಹಾರ ತಂತ್ರಜ್ಞಾನ/ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) ಅಥವಾ ಬಯೋಟೆಕ್ನಾಲಜಿ ಹೊಂದಿರುವವರು ಅರ್ಹರಿರುತ್ತಾರೆ.
ಇದನ್ನೂ ಓದಿ : ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ ಯೋಜನೆ.. ರೈತರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಮಾಹಿತಿ