ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ರಾಜ್ಯ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಕಳೆದುಕೊಳ್ಳುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯ ಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ನೀಡಿದ ನಾವದಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. 2019ರಲ್ಲಿ ಅಡ್ವೇಕೇಟ್ ಜನರಲ್ ಆಗಿ ಅಧಿಕಾರ ಸ್ವೀಕರಿಸಿದ್ದ ಪ್ರಭುಲಿಂಗ ನಾವದಗಿ, ಬಿಜೆಪಿ ಅಧಿಕಾರವಧಿಯಲ್ಲಿ ರಾಜ್ಯ ಸರ್ಕಾರ ಕೈಗೊಂಡಿದ್ದ ನಿರ್ಧಾರಗಳನ್ನು ಹೈಕೋರ್ಟ್, ಸುಪ್ರೀಂಕೋರ್ಟ್‌ನಲ್ಲಿ ಪ್ರತಿನಿಧಿಸಿದ್ದರು.
ಅಲ್ಲದೆ, ಪ್ರಮುಖ ವಿಚಾರಗಳಾದ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್, ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕನ್ನಡಿಗರಿಗೆ ಶೇ.25 ರಷ್ಟು ಮೀಸಲಾತಿ, ರಾಜ್ಯ ಸರ್ಕಾರ ಆನ್ಲೈನ್ ಗೇಮಿಂಗ್‌ಗಳ ರದ್ದು ಮಾಡಿ ಕರ್ನಾಟಕ ಪೊಲೀಸ್ ಕಾಯಿದೆಗೆ ತಿದ್ದು ಪಡಿ ಮಾಡಿರುವ ವಿಚಾರ, ಹಾಗೂ ಪಂಚಮ ಸಾಲಿ ಲಿಂಗಾಯತರಿಗೆ ಮೀಸಲಾತಿ ನೀಡಿರುವುದಕ್ಕೆ ಸಂಬಂಧಿಸಿದ ಪ್ರಮುಖ ಪ್ರಕರಣಗಳಲ್ಲಿ ರಾಜ್ಯ ಸರ್ಕಾರದ ಪರವಾಗಿ ಬಲವಾದ ವಾದ ಮಂಡಿಸಿದ್ದರು. ಅಲ್ಲದೇ, ಹಲವು ಪ್ರಕರಣಗಳಲ್ಲಿ ರಾಜ್ಯ ಸಕಾರಕ್ಕೆ ನ್ಯಾಯಾಂಗ ಹೋರಾಟದಲ್ಲಿ ಬೆಂಬಲವಾಗಿ ನಿಂತಿದ್ದರು.
ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಕೆ.ನಾವದಗಿ ಅವರ ಪುತ್ರರಾಗಿರುವ ಪ್ರಭುಲಿಂಗ ನಾವದಗಿ ಬೆಂಗಳೂರು ಯೂನಿರ್ವಸಿಟಿ ಲಾ ಕಾಲೇಜಿನಲ್ಲಿ ಕಾನೂನು ಪದವವಿಯನ್ನು ಪಡೆದುಕೊಂಡಿದ್ದರು. ನಾವದಗಿ ಅವರು 2011ರಲ್ಲಿ ಹೈಕೋರ್ಟ್‌ನಲ್ಲಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ಸೇವೆ ಪ್ರಾರಂಭಿಸಿದ್ದರು. 2014ರಲ್ಲಿ ಹಿರಿಯ ವಕೀಲರಾಗಿ ಬಡ್ತಿ ಪಡೆದುಕೊಂಡಿದ್ದರು. 2015ರಲ್ಲಿ ಅಡಿಷನಲ್ ಸಾಲಿಸಿಟರ್ ಜನರಲ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಈ ನಡುವೆ, ಹೆಚ್ಚುವರಿ ಅಡ್ವೋಕೇಟ್ ಜನರಲ್‌ಗಳಾಗಿದ್ದ ಧ್ಯಾನ್ ಚಿನ್ನಪ್ಪ ಮತ್ತು ಅರುಣ್ ಶ್ಯಾಮ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ: ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ರಾಜೀನಾಮೆ
ಮೇ. 13ರಂದು ಚುನಾವಣೆ ಫಲಿತಾಂಶ ಪ್ರಕಟಗೊಂಡು ಕಾಂಗ್ರೆಸ್ ಬಹುಮತ ಪಡೆದ ಹಿನ್ನೆಲೆ ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಕೂಡಾ ರಾಜೀನಾಮೆ ಸಲ್ಲಿಕೆ ಮಾಡಿದ್ದರು. ಚುನಾವಣಾ ಫಲಿತಾಂಶದ ಬಳಿಕ ಶಿಗ್ಗಾವಿಯಿಂದ ಬೆಂಗಳೂರಿಗೆ ಆಗಮಿಸಿದ ಬೊಮ್ಮಾಯಿ ರಾಜ ಭವನಕ್ಕೆ ತೆರಳಿದರು.
ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾದ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದರು. ಹೊಸ ಮುಖ್ಯಮಂತ್ರಿ ಅಧಿಕಾರ ಸ್ವೀಕಾರ ಮಾಡುವವರೆಗೂ ಉಸ್ತುವಾರಿ ಮುಖ್ಯಮಂತ್ರಿ ಆಗಿರುವಂತೆ ರಾಜ್ಯಪಾಲರು ಬೊಮ್ಮಾಯಿ ಅವರಿಗೆ ಸೂಚನೆ ನೀಡಿದ್ದು, ಅದರಂತೆ ಹೊಸ ಸರ್ಕಾರ ರಚನೆವರೆಗೂ ಬೊಮ್ಮಾಯಿ ಉಸ್ತುವಾರಿ ಮುಖ್ಯಮಂತ್ರಿ ಆಗಿರಲಿದ್ದಾರೆ.
19 ತಿಂಗಳು 17 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದ ಬೊಮ್ಮಾಯಿ, ಜುಲೈ 26, 2021ರಂದು ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಯಡಿಯೂರಪ್ಪರ ರಾಜೀನಾಮೆ ನೀಡಿದ್ದರಿಂದ ಬೊಮ್ಮಾಯಿ ಸಿಎಂ ಪಟ್ಟಕ್ಕೇರಿದ್ದರು.
ಇದನ್ನೂ ಓದಿ: ಕಾದು ನೋಡಿ, ಹೈಕಮಾಂಡ್ ಸೂಚನೆ ಮೇರೆಗೆ ದೆಹಲಿಗೆ ಬಂದಿದ್ದೇನೆ: ಸಿದ್ದರಾಮಯ್ಯ