ಬೆಂಗಳೂರು: ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದ ಬಳಿಕ ನ್ಯಾಯಾಲಯಗಳಿಗೆ ರಜೆ ಘೋಷಿಸಲಾಗಿದ್ದು, ತುರ್ತು ವಿಚಾರಣೆ ಅಗತ್ಯವಿದ್ದರೆ ಇ -ಫೈಲಿಂಗ್ ಮೂಲಕವೇ ಪ್ರಕರಣ ದಾಖಲಿಸುವ ಅಗ್ಯವಿದೆ. ಈ ಹಿನ್ನೆಲೆಯಲ್ಲಿ ಪಾರ್ಟಿ ಇನ್ ಪರ್ಸನ್ ಅರ್ಜಿದಾರರಿಗೆ ಮತ್ತು ವಕೀಲರಿಗೆ ಅಗತ್ಯ ತಾಂತ್ರಿಕ ನೆರವು ನೀಡುವ ಉದ್ದೇಶದಿಂದ ಹೈಕೋರ್ಟ್ ಸಹಾಯವಾಣಿ ಆರಂಭಿಸಿದೆ.
ಸುಪ್ರೀಂಕೋರ್ಟ್ ಏಪ್ರಿಲ್ 6 ರಂದು ಇ - ಫೈಲಿಂಗ್ ಸೇರಿದಂತೆ ವಕೀಲರು ಮತ್ತು ಕಕ್ಷೀದಾರರಿಗೆ ಅಗತ್ಯ ಮಾಹಿತಿ ಮತ್ತು ನೆರವು ನೀಡಲು ಸಹಾಯವಾಣಿ ಆರಂಭಿಸಲು ಸೂಚನೆ ನೀಡಿತ್ತು. ಅದರಂತೆ ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರಗಿಯಲ್ಲಿರುವ ಸಂಚಾರಿ ಪೀಠಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಅರ್ಜಿ ಸಲ್ಲಿಸುವವರು ಬೆಂಗಳೂರು ಪ್ರಧಾನ ಪೀಠ-14,620, ಧಾರವಾಡ ಪೀಠ-14,621 ಮತ್ತು ಕಲಬುರಗಿ ಪೀಠ-14,622 ಸಹಾಯವಾಣಿಗೆ ಕೋರ್ಟ್ ಕಚೇರಿ ಸಮಯದಲ್ಲಿ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೌಕ್‌ಡೌನ್ ಜಾರಿಯಾದ ಬಳಿಕ ರಾಜ್ಯದ ಎಲ್ಲ ಕೋರ್ಟ್‌ಗಳ ಕಲಾಪ ಸ್ಥಗಿತಗೊಂಡಿದ್ದು, ಮಹತ್ವದ ತುರ್ತು ಪ್ರಕರಣಗಳನ್ನು ಮಾತ್ರ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಗುತ್ತಿದೆ. ಇದೀಗ ವಕೀಲರು, ಖುದ್ದು ವಾದ ಮಂಡಿಸಲು ಇಚ್ಚಿಸುವ ಪಾರ್ಟಿ ಇನ್ ಪರ್ಸ್‌ನ್ಸ್ ಮತ್ತು ವ್ಯಾಜ್ಯದಾರರಿಗೆ ಮಾರ್ಗದರ್ಶನ ನೀಡಲು ಹೈಕೋರ್ಟ್ ಮುಂದಾಗಿದ್ದು ಸುಪ್ರೀಂ ನಿರ್ದೇಶನದಂತೆ ಸಹಾಯವಾಣಿ ಆರಂಭಿಸಿದೆ.