ಬೆಂಗಳೂರು: ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾಗಿದ್ದು, ಯಶವಂತಪುರ ರಣಕಣ ಇನ್ನಷ್ಟು ರಂಗೇರಿದೆ. ಇಂದು ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಪರವಾಗಿ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅಖಾಡಕ್ಕೆ ಇಳಿದು, ಮತಯಾಚನೆ ಮಾಡಲಿದ್ದಾರೆ. ಇತ್ತ ಎಸ್.ಟಿ.ಸೋಮಶೇಖರ್ ನಂಜಾವಧೂತ ಮಹಸ್ವಾಮಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಬೆಳ್ಳಂಬೆಳಗ್ಗೆಯೇ ಉಳ್ಳಾಲದ ಬಳಿ ಇರುವ ಸ್ಫಟಿಕಪುರ ಮಠಕ್ಕೆ ಭೇಟಿ ನೀಡಿದ ಎಸ್.ಟಿ. ಸೋಮಶೇಖರ್, ನಂಜಾವಧೂತ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ವೇಳೆ, ಎಸ್‌ಟಿ ಸೋಮಶೇಖರ್ ಸ್ವಾಮೀಜಿ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ನಮ್ಮನ್ನು ಕೀಳಾಗಿ ನಡೆಸಿಕೊಂಡರು. ಈ ಬಗ್ಗೆ ಅಂದು ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್ ಜೊತೆಯಲ್ಲೂ ನಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದೆವು. ಆದರೆ, ಅವರ್ಯಾರು ನಮ್ಮ ಬಗ್ಗೆ ಕಾಳಜಿ ವಹಿಸಿಲ್ಲ. ಬಿಡಿಎ ಅಧ್ಯಕ್ಷನಾಗಿ ಕುಮಾರಸ್ವಾಮಿ ಅವರು ನನಗೆ ಕೆಲಸ ಮಾಡಲು ಬಿಡಲಿಲ್ಲ. ಶಾಸಕರಾಗಿ ನಮ್ಮನ್ನು ನಡೆಸಿಕೊಂಡ ರೀತಿ ನಮಗೆ ಬಹಳ ನೋವಾಗಿದೆ. ಹೀಗಾಗಿ ಅನ್ಯ ಮಾರ್ಗವಿಲ್ಲದೇ ನಾವು ರಾಜೀನಾಮೆ ನೀಡಿ, ಬಿಜೆಪಿ ಸೇರಿದೆವು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.