ಬೆಂಗಳೂರು: ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟಗೊಂಡಿದೆ, ಜೂನ್ 12 ರಿಂದ ಜೂನ್ 19ರ ವರೆಗೆ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ.
ಜೂನ್ 12ರಂದು ಪ್ರಥಮ ಭಾಷೆ ಕನ್ನಡ ವಿಷಯದ ಪರೀಕ್ಷೆ ನಡೆಯಲಿದ್ದು, 13 ರಂದು ಕೋರ್ ವಿಷಯಗಳಾದ ವಿಜ್ಞಾನ ಮತ್ತು ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ ವಿಷಯಗಳ ಪರೀಕ್ಷೆ ನಡೆಯಲಿದೆ, ಜೂನ್ 14ರ ಬುಧವಾರ ದ್ವಿತೀಯ ಭಾಷೆ ಇಂಗ್ಲಿಷ್ ವಿಷಯದ ಪರೀಕ್ಷೆ ನಡೆಯಲಿದೆ, ಜೂನ್ 15ರಂದು ಕೋರ್ ವಿಷಯವಾದ ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದ್ದು, ಜೂನ್ 16ರಂದು ಹಿಂದಿ ವಿಷಯದ ಪರೀಕ್ಷೆ ನಡೆಯಲಿದೆ. ಜೂನ್ 17ರಂದು ಕೋರ್ ವಿಷಯಗಳಾದ ಗಣಿತ ಮತ್ತು ಸಮಾಜಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದೆ, ಜೂನ್ 19ರಂದು ಅರ್ಥಶಾಸ್ತ್ರ ಸೇರಿದಂತೆ ಇತರ ಕೋರ್ ವಿಷಯಗಳ ಪರೀಕ್ಷೆ ನಡೆಯಲಿದೆ.
ಪ್ರತಿ ದಿನ ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:45 ರವರೆಗೆ ಪರೀಕ್ಷೆ ನಡೆಯಲಿದೆ ಪ್ರತಿ ವಿಷಯಕ್ಕೂ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷಗಳನ್ನು ಪರೀಕ್ಷೆಯ ಪ್ರಾರಂಭದಲ್ಲಿ ನೀಡಲಾಗುತ್ತದೆ ಪುನರಾವರ್ತಿತ ಶಾಲಾ ಅಭ್ಯರ್ಥಿ ಹಾಗು ಖಾಸಗಿ ಪುನರಾ ವರ್ತಿತ ಅಭ್ಯರ್ಥಿಗಳು ಪರೀಕ್ಷೆ ಬರೆಯಬಹುದಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
ಶೇಕಡಾ 83.89ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ: ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶವು ಮೇ 8 ರಂದು ಪ್ರಕಟಗೊಂಡಿದ್ದು, ಶೇಕಡಾ 83.89ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು ಶೇಕಡಾ 87.87ರಷ್ಟು ವಿದ್ಯಾರ್ಥಿನಿಯರು ಪಾಸ್ ಆಗಿದ್ದರು. ಶೇಕಡಾ 80.08 ಬಾಲಕರು ತೇರ್ಗಡೆ ಹೊಂದಿದ್ದರು. ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ. ಚಿತ್ರದುರ್ಗ ಜಿಲ್ಲೆ (ಶೇ. 96.80) ಮೊದಲ ಸ್ಥಾನ ಪಡೆದರೆ, ಮಂಡ್ಯ (ಶೇ. 96.74) 2ನೇ ಸ್ಥಾನ ಸಿಕ್ಕಿದ್ದು, ಹಾಸನ (ಶೇ. 96.68) ಮೂರನೇ ಸ್ಥಾನ ಹಾಗೂ ಯಾದಗಿರಿ ಜಿಲ್ಲೆ (ಶೇ. 75.49) ಕೊನೆಯ ಸ್ಥಾನ ಪಡೆದಿತ್ತು. ಕಳೆದ ಬಾರಿಗಿಂತ ಈ ಬಾರಿ ಶೇ.1.24 ರಷ್ಟು ಕಡಿಮೆ ಫಲಿತಾಂಶ ಬಂದಿದೆ.
ಹಾಜರಾದ 8,35,102 ವಿದ್ಯಾರ್ಥಿಗಳಲ್ಲಿ 7,00,619 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ. 83.89ರಷ್ಟು ಫಲಿತಾಂಶ ಬಂದಿತ್ತು. 4,25,968 ಬಾಲಕರು ಪರೀಕ್ಷೆ ಬರೆದಿದ್ದು, ಇದರಲ್ಲಿ 3,41,108 ಸೇರಿದಂತೆ ಶೇ. 80.08ರಷ್ಟು ಬಾಲಕರು ತೇರ್ಗಡೆಯಾಗಿದ್ದಾರೆ. 4,09,134 ಬಾಲಕಿಯರು ಪರೀಕ್ಷೆ ಬರೆದಿದ್ದು, 3,59,511 ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ. ಶೇ. 87.87ರಷ್ಟು ಫಲಿತಾಂಶ ಪಡೆಯುವ ಮೂಲಕ ಪ್ರತಿ ವರ್ಷದಂತೆ ಈ ವರ್ಷವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದರು. ಕನ್ನಡದಲ್ಲಿ 14,983, ಇಂಗ್ಲಿಷ್ನಲ್ಲಿ 9,754, ಹಿಂದಿಯಲ್ಲಿ 16,170, ಗಣಿತ 2,132, ವಿಜ್ಞಾನ 983 ಹಾಗೂ ಸಮಾಜ ವಿಜ್ಞಾನದಲ್ಲಿ 8,311 ವಿದ್ಯಾರ್ಥಿಗಳು ಶೇ.100ರಷ್ಟು ಅಂಕ ಗಳಿಸಿದ್ದರು.
ಇದನ್ನೂ ಓದಿ: ಗುಡುಗು ಸಿಡಿಲಿನ ಅಪಾಯದಿಂದ ತಪ್ಪಿಸಲು ಸುರಕ್ಷತಾ ಮಾರ್ಗಸೂಚಿ ಹೊರಡಿಸಿದ ಸರ್ಕಾರ