ಬೆಂಗಳೂರು : ಕೊರೊನಾ ವೈರಸ್ ಹಬ್ಬುವ ಭೀತಿ ಹಿನ್ನೆಲೆ ಈ ತಿಂಗಳ 27 ರಿಂದ ಆರಂಭವಾಗಬೇಕಿದ್ದ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ಈ ವಿಷಯ ಪ್ರಕಟಿಸಿದ್ದಾರೆ. ಪರೀಕ್ಷೆ ಮುಂದೂಡುವ ಬಗ್ಗೆ ರಾಜ್ಯ ಸರ್ಕಾರ ನಾಳೆ ಸೋಮವಾರ ಅಧಿಕಾರಿಗಳ ಜತೆ ಚರ್ಚಿಸಿ ನಿರ್ಧಾರ ಪ್ರಕಟಿಸುವುದಿತ್ತು. ಆದರೆ ಇಂದು ಬೆಳಗ್ಗೆ ಮುಖ್ಯಮಂತ್ರಿಗಳು ತಜ್ಞ ವೈದ್ಯರು, ಅಧಿಕಾರಿಗಳ ಸಲಹೆ ಪಡೆದು ಹತ್ತನೇ ತರಗತಿ ಪರೀಕ್ಷೆ ಮುಂದೂಡುವ ನಿರ್ಧಾರ ಪ್ರಕಟಿಸಿದ್ದಾರೆ.
ವಿಕ್ಟೊರಿಯಾವನ್ನು ಕೊರೊನಾ ಕೇಂದ್ರವನ್ನಾಗಿ ಮಾಡಲು ತೀರ್ಮಾನ :
ಬೆಳಗ್ಗೆಯಿಂದ ನಾನು ಸಚಿವರು ಅಧಿಕಾರಿಗಳ ಜೊತೆ ಇವತ್ತಿನ ಸ್ಥಿತಿ ಗತಿ ಹಾಗೂ 1700 ಹಾಸಿಗೆಗಳನ್ನು ಒಳಗೊಂಡ ವಿಕ್ಟೋರಿಯಾ ಆಸ್ಪತ್ರೆಯನ್ನು ವಿಶೇಷ ಆಸ್ಪತ್ರೆಯಾಗಿ ಪರಿವರ್ತಿಸುವುದರ ಬಗ್ಗೆ ಹಾಗೂ
ಈಗಾಗಲೇ ಅಲ್ಲಿ ದಾಖಲಾಗಿರುವವರನ್ನು ಬೇರೆ ಆಸ್ಪತ್ರೆಗಳಿಗೆ ದಾಖಲು ಮಾಡುವುದರ ಕುರಿತು ಚರ್ಚೆ ಮಾಡಿದ್ದೇನೆ. ವಿಕ್ಟೋರಿಯಾ ಆಸ್ಪತ್ರೆಯನ್ನು ಕೊರೊನಾ ಕೇಂದ್ರವನ್ನಾಗಿ ಮಾಡಲು ತೀರ್ಮಾನ ಮಾಡಲಾಗಿದೆ. ಹಾಗೇ ಪ್ರತಿ 10 ಲಕ್ಷದಲ್ಲಿ 200 ಜನರಿಗೆ ಪರೀಕ್ಷೆ ಮಾಡಲು ತಯಾರಿ ಮಾಡಲಾಗಿದೆ.
ಕೊರೊನಾ ವಾರ್ ರೂಮ್:
ಅಂತಾರಾಷ್ಟ್ರೀಯ ಪ್ರಯಾಣಿಕರು ಹಾಗೂ ಸ್ಥಳೀಯ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿ ,ಬಾಲಬ್ರೂಯಿ ಅತಿಥಿಗೃಹವನ್ನು ಕೊರೊನಾ ವಾರ್ ರೂಮ್ ಮಾಡಲು ತೀರ್ಮಾನ ಮಾಡಿದ್ದು ಜನ ಯಾವುದಕ್ಕೂ ಗಾಬರಿ ಆಗುವ ಅವಶ್ಯಕತೆ ಇಲ್ಲ ಎಂದು ಸಿಎಂ ಬಿಎಸ್ವೈ ತಿಳಿಸಿದ್ದಾರೆ.
ಸಿಟಿಯಿಂದ ಹಳ್ಳಿಗೆ ಹೋಗದಂತೆ ಮನವಿ:
ದವಸ ಧಾನ್ಯ ಯಾವುದಕ್ಕೂ ತೊಂದರೆ ಆಗದ ರೀತಿ ಸರ್ಕಾರ ಕ್ರಮ ವಹಿಸಿದೆ. ಹೀಗಾಗಿ 15 ದಿನಗಳ ಕಾಲ ಯಾರು ಸಿಟಿಯಿಂದ ಹಳ್ಳಿಗಳಿಗೆ ಹೋಗಬೇಡಿ. ಹಳ್ಳಿಗಳಲ್ಲಿ ಯಾವುದೇ ಸಮಸ್ಯೆ ಇಲ್ಲ, ಸಿಟಿಯಿಂದ ಹಳ್ಳಿಗಳಿಗೆ ಯಾರು ಹೋಗಬೇಡಿ ಎಂದು ಸಿಎಂ ಮನವಿ ಮಾಡಿದ್ದಾರೆ.
ಜನತಾ ಕರ್ಪ್ಯೂ ಬಗ್ಗೆ ಪ್ರತಿಕ್ರಿಯೆ:
ಜನತಾ ಕರ್ಪ್ಯೂ ಬಗ್ಗೆ ಸಿಎಂ ಮಾತಾಡಿ ಈ ಕೋವಿಡ್-19 ನಿಗ್ರಹ ಮಾಡಲು ಪಿಎಂ ಜನತಾ ಕರ್ಪ್ಯೂ ಕರೆ ಕೊಟ್ಟಿದ್ದಾರೆ. ಅದಕ್ಕೆ ಕರ್ನಾಟಕ ಜನತೆ ಸಂಪೂರ್ಣವಾಗಿ ಸಹಕಾರ ಕೊಟ್ಟಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.