ಬೆಂಗಳೂರು: 2019-20 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯನ್ನ ಮಾರ್ಚ್ 27 ರಿಂದ ಏಪ್ರಿಲ್ 9 ರ ವರೆಗೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕೊರೊನಾ ಕಾರಣಕ್ಕೆ ದೇಶಾದ್ಯಂತ ಲಾಕ್ ಡೌನ್ ಜಾರಿ ಮಾಡಿದ್ದರಿಂದ ಪರೀಕ್ಷೆಗಳನ್ನ ಮುಂದೂಡಲಾಗಿತ್ತು. ಇದೀಗ ಮುಂದೂಡಿದ್ದ ಪರೀಕ್ಷೆಯು ಇದೇ ಜೂನ್ 25 ರಿಂದ ಜುಲೈ 4 ರ ವರೆಗೆ ನಡೆಯಲಿದ್ದು ಸುಮಾರು 8,48,203 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ.
4,48,560 ವಿದ್ಯಾರ್ಥಿಗಳು, 3,99,643 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಿದ್ದಾರೆ. ಇನ್ನು ಸರ್ಕಾರಿ ಶಾಲೆಗಳಿಂದ 3,31,652, ಅನುದಾನಿತ ಶಾಲೆಯಿಂದ 2,29,381, ಅನುದಾನ ರಹಿತ ಶಾಲೆಗಳ 2,87,170 ವಿದ್ಯಾರ್ಥಿಗಳು ಪರೀಕ್ಷೇ ಬರೆಯಲಿದ್ದಾರೆ. ಗ್ರಾಮೀಣ ಭಾಗದಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ನಗರ-ಗ್ರಾಮೀಣ ಪ್ರದೇಶ ಅಂಕಿ ಅಂಶ :
- ನಗರ ಪ್ರದೇಶದಿಂದ- 3,78,337
- ಗ್ರಾಮೀಣ ಪ್ರದೇಶದಿಂದ- 4,69,866
- ರಾಜ್ಯಾದ್ಯಂತ ವಿಶೇಷ ಅಗತ್ಯತೆಯುಳ್ಳ - 4,777 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಇನ್ನು ದೈಹಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ 2,879 ಪರೀಕ್ಷಾ ಕೇಂದ್ರಗಳೊಂದಿಗೆ ಹೆಚ್ಚುವರಿಯಾಗಿ 330 ಪರೀಕ್ಷೆ ಕೇಂದ್ರಗಳನ್ನು ರಚಿಸಲಾಗಿದೆ. ಇದರಲ್ಲಿ 57 ಸೂಕ್ಷ್ಮ ಪರೀಕ್ಷಾ ಕೇಂದ್ರವಾದರೆ, 4 ಅತೀ ಸೂಕ್ಷ್ಮ ಕೇಂದ್ರಗಳಿವೆ. ಶಿಕ್ಷಣ ಇಲಾಖೆಯಿಂದಲೇ ಪರೀಕ್ಷಾ ಕಾರ್ಯದಲ್ಲಿ ಸುಮಾರು 81,265 ಮಂದಿಯನ್ನ ನಿಯೋಜನೆ ಮಾಡಲಾಗಿದೆ. ಇತರೆ ಇಲಾಖೆಯಿಂದ 19,222 ಮಂದಿ ನಿಯೋಜನೆ ಮಾಡಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಿಸಲು ಮಂಡಳಿಯಿಂದ 7,115 ಥರ್ಮಲ್ ಸ್ಕ್ಯಾನರ್ಗಳನ್ನ ಒದಗಿಸಲಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ 34, ತಾಲೂಕಿನಲ್ಲಿ 204 ಹೆಲ್ಪ್ ಡೆಸ್ಕ್ ಗಳನ್ನ ತೆರೆಯಲಾಗಿದೆ. 3,209 ಆರೋಗ್ಯ ತಪಾಸಣಾ ಕೌಂಟರ್ಗಳನ್ನು ತೆಗೆಯಲಾಗಿದೆ. ಪೋಷಕರ ಮುನ್ನೆಚ್ಚರಿಕೆಗಾಗಿ 9 ಲಕ್ಷ ಕರಪತ್ರ ಮುದ್ರಿಸಲಾಗಿದೆ.