ಬೆಂಗಳೂರು: ಗುತ್ತಿಗೆ ವೈದ್ಯರನ್ನು ಖಾಯಂಗೊಳಿಸುವುದು ಹಾಗೂ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದ ವೇತನ ಹೆಚ್ಚಳ ಬೇಡಿಕೆ ಈಡೇರದಿದ್ದರೆ ಸಾಮೂಹಿಕವಾಗಿ ಗುತ್ತಿಗೆ ನೌಕರರು ರಾಜೀನಾಮೆಗೆ ಮುಂದಾಗಿದ್ದರು.
ಆದರೆ, ಇಂದು ಗುತ್ತಿಗೆ ವೈದ್ಯರ ಸಂಘಟನೆಗಳ ಜೊತೆಗೆ ಸಚಿವ ಶ್ರೀರಾಮುಲು ಸಭೆ ನಡೆಸಿ, ರಾಜೀನಾಮೆ ತೀರ್ಮಾನದ ಕುರಿತು ನಿರ್ಧಾರ ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದರು. ಈ ವೇಳೆ ಗುತ್ತಿಗೆ ವೈದ್ಯರು ಸಚಿವರಿಗೆ ತಮ್ಮ ಮನವಿ ಸಲ್ಲಿಸಿದರು.
ಸದ್ಯ ಗುತ್ತಿಗೆ ವೈದ್ಯರಿಗೆ 45 ಸಾವಿರ ಸಂಬಳ ಇದ್ದು, 67 ಸಾವಿರಕ್ಕೆ ಹೆಚ್ಚಳ ಮಾಡುವ ನಿರ್ಧಾರ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು. ಸಚಿವರ ಭರವಸೆ ಮೇರೆಗೆ ಸಾಮೂಹಿಕ ರಾಜೀನಾಮೆ ವಾಪಸ್ ಪಡೆಯಲು ಗುತ್ತಿಗೆ ವೈದ್ಯರು ತೀರ್ಮಾನಿಸಿದ್ದಾರೆ.
ಬಳಿಕ ಮಾತನಾಡಿದ ಸಚಿವ ಶ್ರೀರಾಮುಲು, ಗ್ರಾಮೀಣ ಪ್ರದೇಶದಲ್ಲಿ ಸೇವೆ ಮಾಡ್ತಿರುವ 600 ವೈದ್ಯರನ್ನು ಖಾಯಂ ಮಾಡಲು ತಕ್ಷಣ ಸರ್ಕಾರ ಸಕಾರಾತ್ಮಕ ಕ್ರಮ ಕೈಗೊಳ್ಳಲಿದೆ. ಈಗಾಗಲೇ ವೇತನ ಹೆಚ್ಚಿಸುವ ಬಗ್ಗೆ ಸರ್ಕಾರದಲ್ಲಿ ತೀರ್ಮಾನ ಆಗಿದ್ದು, ಶೀಘ್ರದಲ್ಲೇ ಆದೇಶ ಹೊರಬೀಳಲಿದೆ ಎಂದರು.
ಖಾಯಂ ಮಾಡುವುದು ಮೊದಲಿನಿಂದಲೂ ನನ್ನ ಆದ್ಯತೆಯಾಗಿದ್ದು, ಸಮಸ್ಯೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಖಾಯಂಗೊಳಿಸುತ್ತೇವೆ. ರಾಜೀನಾಮೆ ನೀಡುವ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಅಲ್ಲದೇ ಕೋವಿಡ್-19 ನಿರ್ವಹಣೆಯಲ್ಲಿ ನಿಮ್ಮ ಸೇವೆಯನ್ನು ಅಭಿನಂದಿಸುತ್ತೇನೆ ಎಂದರು.
ಗುತ್ತಿಗೆ ವೈದ್ಯ ಡಾ.ಸಾಗರ್ ಮಾತನಾಡಿ, ಸಚಿವರು ನಮ್ಮ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಖಾಯಂ ಮಾಡ್ಬೇಕು ಅನ್ನೋದು ನಮ್ಮ ಬೇಡಿಕೆ. ಸಚಿವರು ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಿ ಖಾಯಂ ಮಾಡೋದಾಗಿ ಭರವಸೆ ಕೊಟ್ಟಿದ್ದಾರೆ. ಹೀಗಾಗಿ ರಾಜೀನಾಮೆ ನಿರ್ಧಾರವನ್ನ ತಾತ್ಕಾಲಿಕವಾಗಿ ಹಿಂಪಡೆದಿದ್ದೇವೆ. ಕೂಡಲೇ ಕೆಲಸಗಳಿಗೆ ಹಾಜರಾಗ್ತೇವೆ ಎಂದರು.