ಬೆಂಗಳೂರು: ಪರಿಶಿಷ್ಟ ಪಂಗಡದ ಜನಾಂಗದವರಿಗೆ ಮೀಸಲಾತಿ ಪ್ರಮಾಣವನ್ನು 3% ರಿಂದ 7.5% ಹೆಚ್ಚಿಸಲು ನಾವು ಬದ್ಧರಾಗಿದ್ದು, ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದರು.
ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ವೇಳೆ ಪರಿಶಿಷ್ಟ ಪಂಗಡದ ಜನಾಂಗದವರಿಗೆ ಮೀಸಲಾತಿ ಪ್ರಮಾಣವನ್ನು 3% ರಿಂದ 7.5% ಹೆಚ್ಚಿಸುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ಜಾರಿಗೊಳಿಸುಂತೆ ಸದಸ್ಯರಾದ ರಘುಮೂರ್ತಿ, ತುಕಾರಾಮ್, ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ ಆಗ್ರಹಿಸಿದರು.
ಈ ಸಂಬಂಧ ರಚನೆಯಾದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ಜಾರಿಗೊಳಿಸಿ. ನಾಗಮೋಹನ್ ದಾಸ್ ವರದಿಯನ್ನು ಇನ್ನೂ ಜಾರಿಗೊಳಿಸಿಲ್ಲ. ಸರ್ಕಾರ ಬಂದ ತಕ್ಷಣ ಜಾರಿಗೊಳಿಸುವುದಾಗಿ ಹೇಳಿದ್ದೀರಾ. ಆದರೆ, ಇನ್ನೂ ಜಾರಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ದೇಶವನ್ನು ಮತ್ತೆ ಮುನ್ನಡೆಸುವ ಪ್ರಬಲ ರಾಜಕೀಯ ಶಕ್ತಿಯಾಗಿ ಎದ್ದು ಬರಲಿದೆ: ಸಿದ್ದರಾಮಯ್ಯ
ಇದಕ್ಕೆ ಉತ್ತರಿಸಿದ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಶ್ರೀರಾಮುಲು, ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿರುವ ವಾಲ್ಮಿಕಿ ಪ್ರಸನ್ನಾನಂದಪುರಿ ಸ್ವಾಮೀಜಿಗೆ ನಾನು ವಿನಂತಿ ಮಾಡುತ್ತೇನೆ. ಅವರು ಫ್ರೀಡಂ ಪಾರ್ಕ್‌ನಲ್ಲಿ ಹಲವು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಅವರು ಪ್ರತಿಭಟನೆ ಕೈ ಬಿಡಬೇಕು ಎಂದು ಕೋರಿದರು.
ಮೀಸಲಾತಿ ಸಂಬಂಧ ನಾಗಮೋಹನ್ ದಾಸ್ ವರದಿ ನೀಡಿದ್ದಾರೆ. ಸುಭಾಶ್ ಅಡಿ ನೇತೃತ್ವದ ತ್ರಿಸದಸ್ಯ ಸಮಿತಿ ಆದಷ್ಟು ಬೇಗ ವರದಿ ನೀಡಬೇಕು ಎಂದು ವಿನಂತಿ ಮಾಡುತ್ತೇನೆ. ಮೀಸಲಾತಿ ಸಂಬಂಧ ನಾನು ಹೇಳಿರುವ ಮಾತಿನಿಂದ ಒಂದಿಂಚೂ ಹಿಂದೆ ಸರಿಯಲ್ಲ. ಈ ಬಗ್ಗೆ ಕಾನೂನು ತಜ್ಞರ ಜೊತೆ ಮಾತುಕತೆ ನಡೆಸುತ್ತೇನೆ. ಅಡಿ ನೇತೃತ್ವದ ತ್ರಿಸದಸ್ಯರ ಸಮಿತಿಗೆ ಆದಷ್ಟು ಶೀಘ್ರದಲ್ಲಿ ವರದಿ ಕೊಡುವಂತೆ ಮನವಿ ಮಾಡುತ್ತೇನೆ. ವಿಳಂಬವಾದರೆ ನಾಗಮೋಹನ್ ದಾಸ್ ಕೊಟ್ಟ ವರದಿಯನ್ನೇ ಜಾರಿಗೊಳಿಸುವ ನಿಟ್ಟಿನಲ್ಲಿ ನಾನು ಗಂಭೀರವಾಗಿ ಪರಿಗಣಿಸುತ್ತೇನೆ ಎಂದು ಭರವಸೆ ನೀಡಿದರು.
ಸಚಿವರಿಂದ ಸಮರ್ಪಕವಾಗಿ ಉತ್ತರ ಇಲ್ಲ ಎಂದು ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆ ವೇಳೆ ಸಚಿವ ಶ್ರೀರಾಮುಲು, ನನ್ನ ಮಾತಿನಲ್ಲಿ ನಾನು ಉಳಿಯುತ್ತೇನೆ. 7.5% ಮೀಸಲಾತಿ ಹೆಚ್ಚಿಸುವುದಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಪುನರುಚ್ಚರಿಸಿದರು. ಸಚಿವರ ಉತ್ತರಕ್ಕೆ ಅಸಮಾಧಾನಗೊಂಡ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಅವರ ವೋಟ್ ಪಡೆದಿದ್ದೀರಾ, ಅವರ ವೋಟ್ ನಿಂದ ನೀವು ಅಲ್ಲಿ ಕೂತಿದ್ದೀರಾ. ಕೂಡಲೇ ವರದಿ ಜಾರಿಗೊಳಿಸಿ ಎಂದು ಆಗ್ರಹಿಸಿದರು.