ಬೆಂಗಳೂರು: ಶ್ರೀರಾಮುಲು ಮಾಸ್ ರೀಚ್ ಇರುವ ಜನನಾಯಕ. ಅವರ ಸಾಮರ್ಥ್ಯ ಅಲ್ಲಗಳೆಯಲು ಆಗಲ್ಲ ಎಂದು ಸಚಿವ ಸಿ.ಟಿ. ರವಿ ಅಭಿಪ್ರಾಯಪಟ್ಟರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಯಾರೂ ಕೂಡಾ ಲಕ್ಷ್ಮಣ ಸವದಿ ಮತ್ತು ಅಶ್ವಥ್ ನಾರಾಯಣ್ ಡಿಸಿಎಂ ಆಗ್ತಾರೆ ಎಂದು ಅಂದುಕೊಂಡಿರಲಿಲ್ಲ. ಚರ್ಚೆ ಮಾಡ್ತಿದ್ದ ಹೆಸರುಗಳೇ ಬೇರೆ, ಡಿಸಿಎಂ ಆದವರೇ ಬೇರೆ. ನಮ್ಮ ಪಕ್ಷದಲ್ಲಿ ಪಕ್ಷವೇ ಸುಪ್ರೀಂ. ಸವಾಲು ಹೊಡೆದು ಗೆದ್ದು ಬಂದಿರುವ ಬೆಳಗಾವಿ ಸಾಹುಕಾರ ಕೂಡಾ ತನ್ನ ಸಾಮರ್ಥ್ಯ ತೋರಿಸಿದ್ದಾರೆ. ಅವರನ್ನು ದುರ್ಬಲರು ಅಂತಾ ಹೇಳಕ್ಕಾಗಲ್ಲ. ರಾಮುಲು, ರಮೇಶ್ ಇಬ್ಬರೂ ಪ್ರಬಲರೇ. ಎಲ್ಲಾ ಪ್ರಬಲರೂ ಒಂದೇ ಫ್ಲಾಟ್ ಫಾರಂಗೆ ಬಂದಾಗ ವಿಶ್ವಾಸದ ರಾಜಕಾರಣ ಮಾಡಬೇಕಾಗುತ್ತದೆ. ರಾಮುಲು, ರಮೇಶ್ ಇಬ್ಬರೂ ವಿಶ್ವಾಸದ ರಾಜಕಾರಣ ಮಾಡ್ತಾರೆ ಎಂದು ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದ್ರು.
ಯಾರನ್ನು ಮಂತ್ರಿ ಮಾಡಬೇಕು, ಹೊರಗಿದ್ದವರನ್ನು ಒಳಗೆ ತೆಗೆದುಕೊಳ್ಳಬೇಕೋ, ಒಳಗಿದ್ದವರನ್ನು ಹೊರ ಕಳುಹಿಸಬೇಕೋ ಎಂದು ತೀರ್ಮಾನ ಮಾಡೋದು ಮುಖ್ಯಮಂತ್ರಿಗಳೇ. ಈ ಬಗ್ಗೆ ವರಿಷ್ಠರ ಜೊತೆ ಸಮಾಲೋಚಿಸಿ ಸಿಎಂ ತೀರ್ಮಾನ ಮಾಡ್ತಾರೆ. ಯಡಿಯೂರಪ್ಪ ಅನುಭವಿ ರಾಜಕಾರಣಿ. ಈಗ ಅವರದ್ದು ಪಕ್ವವಾಗಿರುವ ರಾಜಕಾರಣ. ಯಾವ ಸಂದರ್ಭದಲ್ಲಿ ಯಾರು ಸೂಕ್ತ ಅಂತ ಅವರು ನಿರ್ಧರಿಸುತ್ತಾರೆ. ನಾಳೆ ಸಂಪುಟ ವಿಸ್ತರಣೆ ಆದ ಬಳಿಕ ನಮ್ಮ ಬಳಿಯೇ ಹೆಚ್ಚುವರಿ ಖಾತೆಗಳು ಇರಬೇಕು ಅಂತಾ ಬಯಸೋಕೆ ಆಗಲ್ಲ. ಯಾರಿಗೆ ಯಾವ ಖಾತೆ ಕೊಡಬೇಕು ಎಂದು ಸಿಎಂ ತೀರ್ಮಾನ ಮಾಡ್ತಾರೆ ಎಂದು ಹೇಳಿದರು.
ಕಾರ್ಯಕರ್ತರ ಸಭೆ
ಸಚಿವರು ಪಕ್ಷದ ಕಾರ್ಯಾಲಯದಲ್ಲಿ ಕಾರ್ಯಕರ್ತರಿಗೆ ಸಮಯ ಕೊಡಬೇಕು ಎಂಬ ರಾಜ್ಯಾಧ್ಯಕ್ಷರ ಅಪೇಕ್ಷೆ ಹಿನ್ನೆಲೆಯಲ್ಲಿ ಭೇಟಿ ಕೊಟ್ಟಿದ್ದೇನೆ. ನಾನು ಕಾರ್ಯಕರ್ತನಾಗಿ ಜವಾಬ್ದಾರಿ ಹೊತ್ತುಕೊಂಡು ಈಗಲೂ ಕಾರ್ಯಕರ್ತನಾಗಿಯೇ ಕೆಲಸ ಮಾಡುತ್ತಿದ್ದೇನೆ. ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಪರಮಾಧಿಕಾರ ಇರುವುದು ಸಿಎಂಗೆ. ಯಡಿಯೂರಪ್ಪನವರ ಮೇಲೆ ನಂಬಿಕೆ ಇಟ್ಟು ಅವರನ್ನು ಪಕ್ಷ ಸಿಎಂ ಮಾಡಿದೆ. ಬಹಳ ಸಂದರ್ಭದಲ್ಲಿ ನಮ್ಮ ನಿರೀಕ್ಷೆಯಂತೆ ನಡೆಯುವುದಿಲ್ಲ ಎಂಬುದು ಕಳೆದ ಬಾರಿಯ ಸಂಪುಟ ರಚನೆಯ ವೇಳೆಯೇ ಸಾಬೀತಾಗಿದೆ ಎಂದರು.
ಪಕ್ಷದ ಏಕೈಕ ಸಂಸದ
ಜೆಡಿಎಸ್ನಿಂದ ಸಂಸದ ಪ್ರಜ್ವಲ್ ರೇವಣ್ಣ ಟ್ರಂಪ್ ಕಾರ್ಡ್ ವಿಚಾರ ಮಾತನಾಡಿ, ಯಾವುದೇ ಪಕ್ಷ ಅವರಲ್ಲಿರುವ ಮೆಟೀರಿಯಲ್ ಅನ್ನೇ ಫೋಕಸ್ ಮಾಡಬೇಕಾಗುತ್ತದೆ. ಅವರ ಪಕ್ಷದ ಏಕೈಕ ಸಂಸದ ಪ್ರಜ್ವಲ್ ರೇವಣ್ಣ. ಪ್ರಜ್ವಲ್ ತೋರಿಸುವುದರ ಮೂಲಕ ಈಗ ದೇವೇಗೌಡ, ರೇವಣ್ಣ, ಕುಮಾರಸ್ವಾಮಿ ಕಾಲ ಅಲ್ಲ ಅನ್ನೋ ಸಂದೇಶ ರವಾನೆಯಾಗುವ ಅಪಾಯ ಅವರ ಪಕ್ಷಕ್ಕೆ ಆಗಬಹುದು. ಪ್ರಜ್ವಲ್‌ಗೆ ಅಜ್ಜ, ಚಿಕ್ಕಪ್ಪ, ಅಪ್ಪನಿಂದ ಅನುಭವ ಬಂದಿರುವ ಕಾರಣ ಅವರು ಪುಣ್ಯವಂತ ಎಂದು ವಿವರಿಸಿದರು.
ಹುಣ್ಣಿಮೆಯಲ್ಲಿ ಜೋರಾಗಿ ಅಲೆ ಬಂದರೂ ಸಮುದ್ರದೊಳಗೆ ಸೇರಬೇಕಾಗುತ್ತದೆ. ಸಮುದ್ರವನ್ನು ಬಿಟ್ಟರೆ ಅಲೆಯ ಪಾತ್ರ ಇರುವುದಿಲ್ಲ. ಅಪೇಕ್ಷೆ ಮತ್ತು ಅಸಮಾಧಾನಕ್ಕೆ ವ್ಯತ್ಯಾಸ ಇದೆ. ನನಗೆ ಯಾವುದೇ ಚಿಂತೆ ಇಲ್ಲ, ಆರಾಮಾಗಿ ಇದ್ದೇನೆ. ನನಗೆ ಅಸಮಾಧಾನ ಇದ್ದಿದ್ದರೆ ನಮ್ಮ ಇಲಾಖೆಯಲ್ಲಿ ಯೋಜನಾಬದ್ಧ ಕೆಲಸ ಆಗುತ್ತಿರಲಿಲ್ಲ. ಕೊಟ್ಟಿರುವ ಜವಾಬ್ದಾರಿಯನ್ನು ಚೆನ್ನಾಗಿಯೇ ಮಾಡಿರೋದಕ್ಕೆ ಕಾಲ ಕಾಲಕ್ಕೆ ಪ್ರಮೋಷನ್ ಸಿಕ್ಕಿದೆ. ತತ್ವಕ್ಕೆ ಬದ್ಧರಾಗಿ ಕೆಲಸ ಮಾಡುವವರಿಗೆ ಅಸಮಾಧಾನ ಇರುವುದಿಲ್ಲ ಎಂದರು.